ಬಣ ಬಡಿದಾಟದ ಸೊಕ್ಕು ಮುರಿಯಲು ಮುಂದಾದ ಬಿಜೆಪಿ ಹೈಕಮಾಂಡ್

ರಾಜ್ಯ

ಬಿಜೆಪಿ -ಜೆಡಿಎಸ್ ವಿಲೀನಕ್ಕೆ ನಡೆಯುತ್ತಿದೆ ಮೆಗಾ ಪ್ಲ್ಯಾನ್.. ಕುಮಾರಸ್ವಾಮಿ ಹೆಗಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ.?

ಬಣ ರಾಜಕಾರಣದ ಮೂಲಕ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ರಾಜ್ಯ ನಾಯಕರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಆಘಾತಕಾರಿ ಪ್ರಯೋಗಕ್ಕೆ ಮುಂದಾಗಿರುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಎರಡೂ ಬಣಗಳನ್ನು ಹೊರಗಿಟ್ಟು ತಟಸ್ಥ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ. ಆರಂಭದಲ್ಲಿ ಬಿಜೆಪಿ ತಟಸ್ಥ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿತ್ತು. ಆದರೆ ತಟಸ್ಥ ಬಣದವರೇ ಬಣ ರಾಜಕಾರಣಕ್ಕೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವುದು ಬಿಜೆಪಿ ಹೈಕಮಾಂಡ್ ಗೆ ಗುಪ್ತವಾಗಿ ಮಾಹಿತಿ ಲಭಿಸಿದ್ದರಿಂದ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಅನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವ ಬಗ್ಗೆ ಬಿಜೆಪಿ ಉನ್ನತ ನಾಯಕರ ಮಟ್ಟದಲ್ಲಿ ಬಿರುಸಿನಿಂದ ಚರ್ಚೆಗಳೂ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಡುವ ಷರತ್ತಿಗೆ ಒಪ್ಪಿದರೆ ವಿಲೀನಕ್ಕೆ ತಮ್ಮ ಸಮ್ಮತಿ ಇದೆ ಎಂದು ಎಚ್ ಡಿ ಕುಮಾರಸ್ವಾಮಿ ಮತ್ತು ದೇವೆಗೌಡರು ಹೇಳಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ಪಕ್ಷವನ್ನು ವಿಲೀನ ಮಾಡಿಕೊಂಡು ಕುಮಾರಸ್ವಾಮಿಯವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ಒಕ್ಕಲಿಗ ಮತಗಳನ್ನು ಸಂಪೂರ್ಣವಾಗಿ ಬಿಜೆಪಿಯತ್ತ ಸೆಳೆದುಕೊಳ್ಳಬಹುದು ಅನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನಡೆಸುತ್ತಿರುವವರಲ್ಲಿ ಲಿಂಗಾಯತ ನಾಯಕರೇ ಮುಂಚೂಣಿಯಲ್ಲಿದ್ದಾರೆ. ಅವರ ಬಣ ಬಡಿದಾಟವನ್ನೇ ನೆಪ ಮಾಡಿಕೊಂಡು, ಪಕ್ಷದ ಹಿತದೃಷ್ಟಿಯಿಂದ ಯಾವುದೇ ಬಣದವರಿಗೂ ಬೇಸರವಾಗದಂತೆ ಎಲ್ಲರಿಗೂ ಸಲ್ಲುವ ತಟಸ್ಥ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದ್ದೇವೆ ಎಂಬ ಸಂದೇಶ ರವಾನಿಸುವುದೂ ಹೈಕಮಾಂಡ್ ಉದ್ದೇಶ. ಆಗ ಲಿಂಗಾಯತ ಸಮುದಾಯವೂ ತಿರುಗಿಬೀಳುವುದಿಲ್ಲ. ನಮ್ಮವರೇ ಅಧಿಕಾರಕ್ಕಾಗಿ ಕಚ್ಚಾಡಿಕೊಂಡಿದ್ದರಿಂದ ಬೇರೆ ದಾರಿಯಿಲ್ಲದೆ ಹೈಕಮಾಂಡ್ ಈ ತೀರ್ಮಾನಕ್ಕೆ ಬಂದಿದೆ ಎಂದು ಆ ಸಮುದಾಯ ಅಂದುಕೊಳ್ಳಲಿದೆ. ಆಗ ಬಣ ರಾಜಕಾರಣಿಗಳೂ ಸುಮ್ಮನಾಗ ಬೇಕಾಗುತ್ತದೆ.

ಉಪ ಚುನಾವಣೆಯ ಸೋಲಿನ ನಂತರ ಜೆಡಿಎಸ್ ಪಕ್ಷದೊಳಗೆ ಭಿನ್ನಮತ ಉಲ್ಬಣಿಸುತ್ತಿದೆ. ಕುಮಾರಸ್ವಾಮಿಯ ವಿರುದ್ಧ ಬಹಿರಂಗವಾಗಿಯೇ ವಾಕ್ಸಮರ ನಡೆಸುತ್ತಿರುವ ಹಿರಿಯ ಶಾಸಕ ಜಿ.ಟಿ ದೇವೆಗೌಡ ನೇತೃತ್ವದಲ್ಲಿ ಸುಮಾರು 12 ಜೆಡಿಎಸ್ ಶಾಸಕರು ಬಜೆಟ್ ಅಧಿವೇಶನದ ಬಳಿಕ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 18 ಶಾಸಕರ ಪೈಕಿ 12 ಶಾಸಕರು ಪಕ್ಷಾಂತರ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯೂ ಅನ್ವಯಿಸುವುದಿಲ್ಲ. ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಪಕ್ಷ ಸಂಪೂರ್ಣ ಹಿನ್ನಡೆ ಅನುಭವಿಸಬಹುದು. ಇದನ್ನು ತಪ್ಪಿಸಲು ಉಳಿದಿರುವ ಮಾರ್ಗ ಒಂದೇ. ಪಕ್ಷ ಸಂಪೂರ್ಣವಾಗಿ ಬಿಜೆಪಿಯೊಂದಿಗೆ ವಿಲೀನವಾಗುವುದು. ಆಗ ಪಕ್ಷಾಂತರ ಮಾಡಿದ ಶಾಸಕರ ವಿರುದ್ಧ ಅಮಾನತು ಮಾಡಬಹುದು. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕುಮಾರಸ್ವಾಮಿಗೆ ಲಭಿಸಿದರೆ ರಾಜ್ಯ ರಾಜಕಾರಣದಲ್ಲಿ ತಮ್ಮ ಕುಟುಂಬದ ಪ್ರಭಾವವೂ ಇನ್ನಷ್ಟು ಹೆಚ್ಚಾಗಲಿದೆ ಅನ್ನುವುದು ಜೆಡಿಎಸ್ ಲೆಕ್ಕಾಚಾರ.

ಬಿಜೆಪಿ -ಜೆಡಿಎಸ್ ವಿಲೀನಕ್ಕೆ ದೊಡ್ಡ ಮಟ್ಟದಲ್ಲಿ ತೊಡಕಾಗುತ್ತಿರುವುದು ಆರ್ ಎಸ್ ಎಸ್ ನಾಯಕರು. ವಿಲೀನದಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇನ್ನು ಜೆಡಿಎಸ್ ಸ್ವತಂತ್ರ ಪಕ್ಷವಾಗಿ ಇದ್ದಷ್ಟು ದಿನ ಜಾತ್ಯತೀತ ಮತಗಳನ್ನು ಒಡೆಯಲು ಅನುಕೂಲವಾಗುತ್ತದೆ ಅನ್ನುವುದು ಅವರ ಲೆಕ್ಕಾಚಾರ. ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷ್ ಅವರನ್ನು ಮುಂಚೂಣಿಗೆ ತರಲು ಆರ್ ಎಸ್ ಎಸ್ ಒಲವು ಹೊಂದಿರುವುದರಿಂದ ಆರ್ ಎಸ್ ಎಸ್ ನಾಯಕರು ವಿಲೀನದ ವಿರುದ್ಧವಾಗಿದ್ದಾರೆ ಅನ್ನಲಾಗುತ್ತಿದೆ. ಆದರೆ ಬಿಜೆಪಿ ಬಣ ಬಡಿದಾಟ ನಿಯಂತ್ರಿಸಲು ಸದ್ಯ ಆರ್ ಎಸ್ ಎಸ್ ನಲ್ಲೂ ಯಾವುದೇ ಪರಿಹಾರ ಇಲ್ಲದಿರುವುದು , ಬಿಜೆಪಿ ಹೈಕಮಾಂಡ್ ಆರ್ ಎಸ್ ಎಸ್ ನಾಯಕರನ್ನು ವಿಲೀನ ಪ್ರಸ್ತಾಪವನ್ನು ಒಪ್ಪಿಸುವ ವಿಶ್ವಾಸದಲ್ಲಿದ್ದಾರೆ ಅನ್ನಲಾಗುತ್ತಿದೆ.