ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಅಗ್ರಗಣ್ಯ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕು ಹೆಚ್ಚು ಪ್ರಸಿದ್ಧಿ ಪಡೆದ ತಾಲೂಕು. ಕುಂದಾಪುರದ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ ಅಪಾರ್ಟ್ ಮೆಂಟ್ ಗಳು ಒಳ್ಳೆಯ ಆದಾಯವನ್ನು ತಂದಿಡುತ್ತಿದೆ. ರಕ್ಷಕರೆ ಭಕ್ಷಕರಾದರೆ ಏನಾಗಬಹುದು? ಅದೆಲ್ಲವೂ ಇಲ್ಲಿ ಮಾಮೂಲಿಯಾಗಿಬಿಟ್ಟಿದೆ.
ಕುಂದಾಪುರ ಪುರಸಭೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಇಲ್ಲಿಗೆ ಬಂದಿರುವ ಆನಂದನೆಂಬ ಮುಖ್ಯಾಧಿಕಾರಿ ಕುಂದಾಪುರದ ಜನತೆಗೆ ಪರಮಾನಂದವೇನೂ ಕೊಟ್ಟಿಲ್ಲ. ಬರೀ ಗೋಲ್ಮಾಲ್ ಗಳದ್ದೇ ಕಥೆ. ಇತ್ತೀಚಿನ ದಿನಗಳಲ್ಲಿ ಕುಂದಾಪುರದಲ್ಲಿ ನಾಯಿಕೊಡೆಗಳಂತೆ ಬಿಲ್ಡಿಂಗ್ ಗಳು, ಅಪಾರ್ಟ್ ಮೆಂಟ್ ಗಳು ತಲೆ ಎತ್ತುತಲೇ ಇದೆ. ತಮ್ಮಲ್ಲಿರುವ ಕಪ್ಪು ಹಣದ ಮೂಲಕ ಇಂತಹ ಬಿಲ್ಡಿಂಗ್ ಗಳನ್ನು ಮಾಡುವ ಅನೇಕರು ಕುಂದಾಪುರದಲ್ಲಿ ಸದಾ ಕಾಣಸಿಗುತ್ತಲೇ ಇರುತ್ತಾರೆ. ಇವರಿಗೆ ಯಾವುದೇ ಕಾನೂನು ಕಟ್ಟಳೆಗಳು ಕಟ್ಟಡ ಕಟ್ಟುವಾಗ ಅನ್ವಯಿಸುವುದಿಲ್ಲ. ಏಕೆಂದರೆ ಯಾವ ಯಾವ ಅಧಿಕಾರಿಗೆ ಏನೇನು ಒದಗಿಸಬೇಕು, ತಿನ್ನಿಸಬೇಕೆಂಬ ಕಲೆಯನ್ನು ಚೆನ್ನಾಗಿ ಕಲಿತಿರುತ್ತಾರೆ. ಕುಂದಾಪುರದಲ್ಲಿ ಅಕ್ರಮ ಕಟ್ಟಡಗಳು ಆನಂದನ ಕೃಪೆಯಿಂದ ಸಕ್ರಮಗೊಳ್ಳುತ್ತಿದೆ ಅನ್ನುವ ವಿಚಾರ ಹೊರಬರುತ್ತಲೇ ಇದೆ. ರಸ್ತೆ ಮಾರ್ಜಿನ್ ಬಿಡದೆ ಕಟ್ಟಿದ ಕಟ್ಟಡಗಳು, ಸೆಟ್ ಬ್ಯಾಕ್ಸ್ ಇಲ್ಲದ ಕಟ್ಟಡಗಳು, ಇನ್ನು ಜಾಸ್ತಿ ಮಹಡಿಗಳ ಕಟ್ಟಿರುವ ಕಟ್ಟಡಗಳು ಡೀಲ್ ಕುದುರಿಸಿ ಮುಖ್ಯಾಧಿಕಾರಿಗಳು ಸಕ್ರಮಗೊಳಿಸುತ್ತಿದ್ದಾರಂತೆ! ಎಲ್ಲವೂ ಕಪ್ಪದ ಮಹಿಮೆ.
ಇನ್ನು ಹೊಸ ಬಿಲ್ಡಿಂಗ್ ಕಟ್ಟುವವರು ಯಾವುದೇ ಕಾನೂನುಗಳನ್ನು ಪಾಲಿಸುತ್ತಿಲ್ಲ. ಪಾರ್ಕಿಂಗ್ ವ್ಯವಸ್ಥೆ ಮಾಡದೆ ಬಿಲ್ಡಿಂಗ್ ಕಟ್ಟುತ್ತಿದ್ದಾರೆ. ಬಿಲ್ಡಿಂಗ್ ಗೆ ಬೆಂಕಿ ಬಿದ್ದರೆ ಆ ದೇವನೇ ಬಂದರೂ ರಕ್ಷಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ. ಕಾನೂನು ಪ್ರಕಾರ ಬಿಲ್ಡಿಂಗ್ ನ ಸುತ್ತ ಅಗ್ನಿಶಾಮಕ ವಾಹನ ಓಡಾಡುವಷ್ಟು ಜಾಗ ಬಿಡಬೇಕೆಂಬ ನಿರ್ದೇಶನವಿದೆ. ಆದರೆ ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಕಪ್ಪ ಕಾಣಿಕೆ ಪಡೆದು ಕಣ್ಣುಮುಚ್ಚಿ ಲೈಸೆನ್ಸ್ ನೀಡುತ್ತಿದ್ದಾರೆ.
ಇನ್ನು ಪುರಸಭೆಯ ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ. ಸಾರ್ವಜನಿಕರು ದೂರು ಕೊಟ್ಟರೂ ಬಿಲ್ಡರ್ ಮಾಫಿಯಾ ಗಳೊಂದಿಗೆ ಡೀಲ್ ಕುದುರಿಸಿ ಸುಮ್ಮನೆ ಕೂರುತ್ತಾರೆ. ಇಲ್ಲಿನ ಪರಿಸರ ಅಧಿಕಾರಿಯಂತೂ ರಣ ಹಸಿವಿನ ಅಧಿಕಾರಿ. ಇಂಜಿನಿಯರ್ ಶಾಖೆಯಲ್ಲಿರುವ ಮಹಿಳಾ ಮಣಿಯೊಬ್ಬಳು ಡೀಲ್ ಕುದುರಿಸಿ ದುಂಡಗಾಗಿದ್ದಾಳಂತೆ! ಈಕೆಯ ಊಟದ ಸ್ಪೀಡ್ ಹೆಚ್ಚಾಗಿಸಲು ಕಾಪು ಪುರಸಭೆಗೂ ಜವಾಬ್ದಾರಿ ಕೊಟ್ಟಿದ್ದಾರೆ. ತಾಂತ್ರಿಕ ಇಲಾಖೆಯಲ್ಲಿ ಇಂತಹ ಕಂಸಾಸುರರದ್ದೇ ಅಧಿಕಾರ.
ಇನ್ನು ಇಲ್ಲಿ ಶ್ರೀಮಂತರಿಗೊಂದು ನ್ಯಾಯ? ಬಡವರಿಗೊಂದು ನ್ಯಾಯ? ಹೊಟ್ಟೆಪಾಡಿಗಾಗಿ ಅಂಗಡಿ ಇಟ್ಟಿರುವವರು ಪ್ಲಾಸ್ಟಿಕ್ ಮಾರುತ್ತಾರೆ ಎಂದೇಳಿ ದಾಳಿ ನಡೆಸುವ ಇಲ್ಲಿನ ಕಂಸಾಸುರರು ನಿಷೇಧವಿದ್ದರೂ ಪ್ಲಾಸ್ಟಿಕ್ ಉದ್ಯಮವನ್ನು ಮುಟ್ಟುವ ಧೈರ್ಯ ತೋರುತ್ತಿಲ್ಲ. ತಿಂಗಳು ತಿಂಗಳು ಮಂತ್ಲಿ ಮಾಮೂಲಿ ಪಡೆಯುತ್ತಾರೆ ಇಲ್ಲಿನ ರಣಹಸಿವಿನ ಅಧಿಕಾರಿಗಳು. ಇದೆಲ್ಲವೂ ಮುಖ್ಯಾಧಿಕಾರಿಯ ಸುಪರ್ದಿಯಲ್ಲಿ ನಡೆಯುತ್ತಿದೆ. ಇನ್ನು ಕುಂದಾಪುರದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಕನ್ನಡ ನಾಮಫಲಕ ಕಡ್ಡಾಯಗೊಳಿಸಲಾಗಿದೆ ಆದರೂ ಈಗಲೂ ಇಂಗ್ಲೀಷ್ ನಾಮಫಲಕಗಳಿವೆ. ಇವೆಲ್ಲ ರೂಲ್ಸ್ ಮಾಡಿರುವುದು ಕಮಾಯಿ ಮಾಡಲಿಕ್ಕೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಕುಂದಾಪುರ ಪುರಸಭೆ ಯಲ್ಲಿ ಮಾತ್ರ ಹೀಗ್ಯಾಕೆ??
ಜನನ ಪ್ರಮಾಣ ಪತ್ರ ತಿದ್ದುಪಡಿ ಅಪ್ಲಿಕೇಶನ್ ಕೊಡಲು ಕುಂದಾಪುರ ಪುರಸಭೆಗೆ ಗುಲ್ವಾಡಿಯಿಂದ ಒಬ್ಬರು ಬಂದು ಸಾಲಿನಲ್ಲಿ ನಿಂತಿದ್ದರು. ಕೌಂಟರ್ ನಲ್ಲಿ ಇದ್ದವರು ಯಾರ ಸರ್ಟಿಫಿಕೇಟ್ ಕೇಳಿದಾಗ ಅವರು ನನ್ನ ತಮ್ಮನ ಮಗುವಿನ ಜನನ ಪ್ರಮಾಣ ಪತ್ರ ತಿದ್ದುಪಡಿ ಅರ್ಜಿ ಅಂದರು. ಕೂಡಲೇ ಅರ್ಜಿ ವಾಪಸು ಕೊಟ್ಟು ಅಧಿಕಾರಿಗಳು ಮಗುವಿನ ತಂದೆ ಅಥವಾ ತಾಯಿ ಅರ್ಜಿ ತಂದು ಕೊಡಬೇಕು. ನೀವು ಕೊಟ್ಟರೆ ತಗೊಳ್ಳಲ್ಲ ಅಂದರು.. ಆ ಗುಲ್ವಾಡಿ ವ್ಯಕ್ತಿ ಪೇಪರ್ ನ್ನು ಲಾಯರ್ ರೆಡಿ ಮಾಡಿ ಕೊಟ್ಟಿದ್ದಾರೆ, ಸೈನ್ ಕೂಡ ಮಗುವಿನ ತಂದೆಯೇ ಮಾಡಿದ್ದಾರೆ ಅಂತ ಹೇಳಿದ್ರು ಕೂಡ ಅವರನ್ನು ವಾಪಾಸ್ ಕಳುಹಿಸಿದರು..
ಕೌಂಟರ್ ನಲ್ಲಿ ಅರ್ಜಿಯನ್ನು ಕೊಡಲಿಕ್ಕೆ ಮಗುವಿನ ತಂದೆ ಯಾ ತಾಯೀ ತಂದು ಕೊಡಬೇಕು ಅನ್ನುವ ಕಾನೂನು ಕುಂದಾಪುರ ಪುರಸಭೆ ಯಲ್ಲಿ ಯಾಕೆ?
ಬೇರೆ ಎಲ್ಲಿಯೂ ಇಲ್ಲದ ಕಾನೂನು ಕುಂದಾಪುರದಲ್ಲಿ ಮಾತ್ರ ಯಾಕೆ?
ಕುಂದಾಪುರ ಪುರಸಭೆ ಕರ್ನಾಟಕದಲ್ಲಿ ಇದೆಯೋ ಅಥವಾ ಬೇರೆ ರಾಜ್ಯದಲ್ಲಿ ಇದೆಯೋ..?ಮುಖ್ಯಾಧಿಕಾರಿಗಳೇ ಉತ್ತರಿಸಿ.