ಬ್ಯಾರಿ (ಬಾರಿ) ಗಳಾರು.? ಈ ಬ್ಯಾರಿ ಎಂಬ ಹೆಸರು ಎಲ್ಲಿಂದ ಬಂತು.? ಹೇಗೆ ಬಂತು.? ಏಕೆ ಬಂತು.?

ಕರಾವಳಿ

ತಖಲ್ಲಸ ಮಿನ್ ಕುಲ್ಲಿ ಐಬಿನ್ (تخلص من كل غيب) ಅಂದರೆ ಎಲ್ಲಾ ನ್ಯೂನತೆಗಳಿಂದಲೂ ಪಾರದವನು ಈ ‘ಬಾರಿ’.

✍️. ಬಹು ಭಾಷಾ ಸಾಹಿತಿ, ಮಹಮ್ಮದ್ ಬಡ್ಡೂರ್

​25 ವರ್ಷಗಳ ಮೊದಲು ಬ್ಯಾರಿ ಆಂದೋಲನ ಆರಂಭವಾಯಿತು. ಆಮೇಲೆ ಕಳೆಗಿಡಗಳಂತೆ(ಜಗಟೆ-ತಜಂಕೆ) ಬ್ಯಾರಿ ಹೆಸರಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಸರಕಾರದ ವತಿಯಿಂದ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ದಕ್ಕಿತು. ಇಷ್ಟೆಲ್ಲಾ ಆದುದು ಒಂದು ಸ್ಪರ್ಧಾತ್ಮಕ ಪೈಪೋಟಿ ಮತ್ತು ಸ್ವಾರ್ಥದ ಲಾಲಚೆಯಿಂದ ಹೊರತು, ಸಾಮುದಾಯಿಕ ದೃಷ್ಟಿಕೋನದಿಂದ ಆದುದೇನೂ ಅಲ್ಲ. ಈ ಬ್ಯಾರಿ ಎಂಬ ಹೆಸರು ಎಲ್ಲಿಂದ ಬಂತು.? ಹೇಗೆ ಬಂತು.? ಏಕೆ ಬಂತು.? ಎಂಬುದರ ಬಗ್ಗೆ ಯಾರಾದರೂ ತಲೆಕೆಡಿಸಿಕೊಂಡರೆ.? ಅದು ಇಲ್ಲ.!

ಬ್ಯಾರ (ವ್ಯಾಪಾರ) ದಿಂದ ಬ್ಯಾರಿ ಎಂಬ ತಲೆಬುಡವಿಲ್ಲದ ಷಡ್ಯಂತ್ರ ಹೊರ ಬಂತೇ ಹೊರತು, ನಿಜವನ್ನು ಅರಿಯಲು ಒಬ್ಬನೇ ಒಬ್ಬ ಬ್ಯಾರಿ ಅನಿಸಿಕೊಂಡ ಬರಹಗಾರನಾಗಲಿ, ಮೂಪನಾಗಲಿ, ಶಿಕ್ಷಣ ತಜ್ಞನಾಗಲಿ, ಉದ್ಯಮಿಯಾಗಲಿ, ರಾಜಕಾರಣಿಯಾಗಲಿ ಅಥವಾ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಪೀಠಗಳಲ್ಲಿ ವಕ್ಕರಿಸಿಕೊಂಡು, ಸಂಬಳ(ಗಿಂಬಳದೊಂದಿಗೆ) ಭತ್ತೆ ಮೊದಲಾದುದನ್ನು ಬತ್ತಿಸುತಿದ್ದ. ತಥಾಕತಿತ ಜ್ಞಾನಿಗಳಾಗಲಿ ಪ್ರಯತ್ನಿಸಲ್ಲೆ ಇಲ್ಲ.

​ಯಾವುದಕ್ಕೂ ಒಂದು ತರ್ಕಕೊಪ್ಪುವ ಪುರಾವೆ ಬೇಕು. ಹಿಜಿರಾಕ್ಕಿಂತಲೂ 600-700 ವರುಷಗಳ ಮೊದಲೇ ಆರಬ್ಬರಿಗೂ, ಹಿಂದೂ ಸ್ಥಾನಕ್ಕೂ ವ್ಯಾಪಾರ ಸಂಬಂಧವಿತ್ತು. ಪಶ್ಚಿಮ ಕರಾವಳಿ (ಕನ್ಯಾಕುಮಾರಿಯಿಂದ ಕರಾಚಿವರೆಗೂ) ಯ ಉದ್ದಕ್ಕೂ ಹಲವು ಬಂದರುಗಳಲ್ಲಿ ಅರಬ್ಬರ ವ್ಯಾಪಾರದ ಅಡ್ಡೆಗಳಿದ್ದವು. ಹಿಜರಿ ಶಖೆಗಿಂತ 250-300 ವರ್ಷಗಳ ಮೊದಲು, ಆ ಆಜ್ಞಾನ (ಜಾಹಾಲಿಯತ್) ಯುಗದಲ್ಲಿ ‘ಇಮ್ರುಲ್ ಖೈಸ್’ (ಅಮ್ರುಲ್ ಖೈಸ್) ಎಂಬಾತ, ಅಂದಿನ ಕಾವ್ಯಲೋಕದ ಪಿತಾಮಹನಾಗಿದ್ದ. ಆತನೊಬ್ಬ ಪ್ರಭಾವಿ ಅರಸನ ಮಗನಾಗಿದ್ದ, ಸಾಹಿತಿಯಾಗಿದ್ದರೂ, ಹೆಣ್ಣು-ಹೆಂಡದ ಸಹವಾಸದಿಂದ ಆತನಿಗೆ ಗದ್ದುಗೆಯ ಭಾಗ್ಯ ದೊರೆಯಲೇ ಇಲ್ಲ. ಆತನ ಒಂದು ಕಾವ್ಯದಲ್ಲಿ ಭಾರತದಿಂದ ರಫ್ತಾಗುತ್ತಿದ್ದ ಕರಿಮೆಣಸನ್ನು ಆಡು, ಜಿಂಕೆಗಳ ಹಿಕ್ಕೆಗಳಿಗೆ ಹೋಲಿಸಿದ ವರ್ಣನೆಯಿದೆ.

(ترى بعر الأرآ في عرصا تها وقيعا نها كأنه حب فلفل)

“ತರಬಅ್ ರಲ್ ಆರಾಮಿ ಫೀ ಅರಸ್ವಾತಿಹಾ”
“ವಕೀಅನಿಹಾಕ ಅನ್ನಹೂ ಹಬ್ಬು ಫಿಲ್‌ಫಿಲೀ”

ಅರ್ಥ:- ನಿನಗೆ ಮನೆಯ ಅಂಗಳದಲ್ಲೂ, ಮರುಭೂಮಿಯ ನಿರ್ಜನ ಪ್ರದೇಶಗಳಲ್ಲೂ, ಜಿಂಕೆಯ ಹಿಕ್ಕೆಗಳು ಕಾಣಸಿಗುತ್ತಿದೆ. ಅವುಗಳು ಕರಿಮೆಣಸಿನಂತಿವೆ. ಹೀಗೆ ಭಾರತದಿಂದ ರಫ್ತಾಗುತ್ತಿದ್ದ ಹಲವು ವಸ್ತುಗಳ ಬಗ್ಗೆ ಅಂದಿನ ಕಾವ್ಯಗಳಲ್ಲಿವೆ.

​ಈಗ ನೇರ ವಿಷಯಕ್ಕೆ ಬರೋಣ. ಆ ಕಾಲದಲ್ಲಿ ಪಶ್ಚಿಮ ಕರಾವಳಿಯ ಪ್ರತಿಯೊಂದು ಬಂದರುಗಳಲ್ಲಿಯೂ, ಅರಬ್ಬರು ಆಮದು, ರಫ್ತು ಮಾಡುತ್ತಿದ್ದ ಸರಕುಗಳನ್ನು ಶೇಖರಿಸಿಡಲು ಗೋದಾಮುಗಳಿದ್ದವು. ಹಲವು ಪ್ರದೇಶಗಳ ಅರಬಿ ವರ್ತಕರ ಹಲವು ಗೋದಾಮುಗಳು ಪ್ರತಿಯೊಂದು ಬಂದರುಗಳಲ್ಲಿಯೂ ಇದ್ದವು. ಈ ಗೋದಾಮುಗಳ ರಕ್ಷಣೆಗೆ ಮತ್ತು ವ್ಯಾಪಾರ ಕುದುರಿಸಲು ದಳ್ಳಾಲಿಗಳೂ ಇದ್ದರು. ಇವರೆಲ್ಲರೂ ಅರಬ್ಬರೇ ಆಗಿದ್ದರು. ಇವರನ್ನೆಲ್ಲಾ ಅರಬಿ ವರ್ತಕರೆ ಆರಿಸಿ ನೇಮಿಸುತ್ತಿದ್ದರು. ಇವರನ್ನು ಅರಬ್ಬಿ ವರ್ತಕರು ಬಾರಿಅ್, ಬಾರಿ ಅನ್ನುತ್ತಿದ್ದರು. ಅಂದಿನ ಭಾಷಾ ತಜ್ಞರು ಬಾರಿಅ್ ಶಬ್ಧ ಉಚ್ಚರಿಸಲು ಕಷ್ಟವಾದ ಕಾರಣ ‘ಬಾರಿ’ ಎಂದು ಹೇಳಬಹುದೆಂದು ಒಮ್ಮತದ ಅಭಿಪ್ರಾಯ ಕೊಟ್ಟಿದ್ದರು.

​ಬಾರಿ ಅಂದರೆ ಪ್ರಾಮಾಣಿಕ, ಶೂನ್ಯ, ಆರೋಗ್ಯವಂತ ಎಂಬೆಲ್ಲಾ ಅರ್ಥದಿಂದ ಕೂಡಿದೆ. ಈ ಬಾರಿಗಳು ಪ್ರಾಮಾಣಿಕರಾಗಿದ್ದರು. ಪ್ರಾಮಾಣಿಕರಲ್ಲಿ ವಂಚನೆ, ಮೋಸ, ಲಾಲಚೆ ಇವೆಲ್ಲಾ ಶೂನ್ಯವಾಗಿರುತ್ತಿತ್ತು. ಈ ಬಾರಿಗಳೆಲ್ಲರೂ ಸುದೃಢರೂ, ಆರೋಗ್ಯವಂತರೂ ಆಗಿದ್ದರು. ಆರೋಗ್ಯವಂತರಲ್ಲಿ ರೋಗ ಶೂನ್ಯವಾಗಿರುವುದು. ಯಾವ ದೃಷ್ಟಿಕೋನದಲ್ಲಿ ನೋಡಿದರೂ ಬಾರಿ ಶಬ್ಧದ ಅರ್ಥಗಳು ಈ ‘ಬಾರಿ’ಗಳಿಗೆ  ಅನ್ವಯಿಸುತ್ತಿತ್ತು. ‘ತಖಲ್ಲಸ ಮಿನ್ ಕುಲ್ಲಿ ಐಬಿನ್ () ಅಂದರೆ ಎಲ್ಲಾ ನ್ಯೂನತೆಗಳಿಂದಲೂ ಪಾರದವನು ಈ ‘ಬಾರಿ’. ಬಾರಿಗಳಿಗೆ ಎರಡೂ ಕಡೆಯ ಅಂದರೆ ಭಾರತ ಮತ್ತು ಅರಬ್ಬಿ ವರ್ತಕರಿಂದ ಕಮಿಷನ್ ಬರುತ್ತಿತ್ತು. ವ್ಯಾಪಾರದಲ್ಲಿ ‘ಬಾರಿ’ಗಳ ಬಂಡವಾಳ ಶೂನ್ಯ. ಗಳಿಕೆ ಅಪಾರ, ಹಾಗಾಗಿ ಈ ‘ಬಾರಿ’ ಎಂಬುದು ಅನ್ವರ್ಥ ನಾಮ.

​ವರ್ಷಗಟ್ಟಲೇ ಇಲ್ಲೇ ವಾಸಿಸುತ್ತಿದ್ದ ಅರಬ್ ‘ಬಾರಿ’ ಗಳು ಸ್ಥಳೀಯ ಕೀಳು ಜನಾಂಗದ ಬಡ ಹೆಣ್ಣು ಮಕ್ಕಳನ್ನು ಮದುವೆಯಾಗಿ ಸಂಸಾರ ಸಾಗಿಸುತ್ತಿದ್ದರು. ‘ಕಾಸರಗೋಡು, ಮಂಜೇಶ್ವರ, ಮಂಗಳೂರು, ಮಲ್ಪೆ, ಕುಂದಾಪುರ’ ಇಲ್ಲಿರುವ ಬಾರಿಗಳು ತಮಿಳು, ಮಳಯಾಳಂ, ತುಳು ಭಾಷೆಗಳ ಶಬ್ದಗಳಿಂದ ಕೂಡಿದ ಮಿಶ್ರ ತಳಿಯ ಹೊಸ ಬಾರಿ (ಬ್ಯಾರಿ) ಭಾಷೆ ಹುಟ್ಟಿಕೊಂಡಿತು. ಅಲ್ಲೊಂದು ಜನಾಂಗವೂ ಸೃಷ್ಟಿಯಾಯಿತು. ತುಳುನಾಡಲ್ಲಿ ‘ಬಾರಿ’ಗಳ ಮಕ್ಕಳು ‘ಬ್ಯಾರಿ’ಗಳಾದರೂ (ಇದು ಉಚ್ಚಾರದ ದುರಂತ).

ಹಲವಾರು ಪ್ರವಾದಿಗಳ ಜ್ಞಾನ, ಸಹನೆ, ಸಂಯಮಗಳಿಂದ ನೆಲೆ ನಿಂತಿದ್ದು ಇಸ್ಲಾಂ ಧರ್ಮ. ಹಜ್ರತ್ ಈಶ ನಬಿಯವರ ನಂತರ ಕ್ಷೀಣಗೊಂಡು ಒಂದೈನೂರು ವರುಷಗಳ ಕಾಲ ಜಗವಿಡೀ ಅಜ್ಞಾನದಿಂದ ಕತ್ತಲೆಗೊಂಡಿತ್ತು. ಕ್ರಿ.ಶ 500 ರ ನಂತರ ಕರುಣಾಮಯಿ ಅಲ್ಲಾಹನು, ಆತನ ಪೈಗಂಬರಾದ ಪ್ರವಾದಿ ಮುಹಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿ ಸಲ್ಲಮರ ಮೂಲಕ ಇಸ್ಲಾಮನ್ನು ಪುನರುತ್ಥಾನಗೊಳಿಸಿದನು. ಅರಬ್ ಜಗತ್ತು “ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನಡೆಗೆ”ವಾಲತೊಡಗಿತು.

​ಅರಬ್ ವರ್ತಕರಿಂದ ವಿಷಯ ತಿಳಿದ ಕೇರಳದ ಅರಸರಾದ ಚೆರುಮನ್ ಪೆರುಮಾರ್ ನಬಿಯವರನ್ನು ಕಾಣಲು ಹೋಗಿ ಇಸ್ಲಾಮಾದರು. ಅಲ್ಲಿಂದ ಮಾಲಿಕುದ್ದೀನಾರ್ ಮತ್ತು ಕೆಲವು ಸಹಾಬಿಗಳೊಂದಿಗೆ ಮರಳುತ್ತಿರುವಾಗ ಅರಸ ದಾರಿ ಮಧ್ಯೆ ತೀರಿಕೊಂಡರು. ಸಹಾಬಿಗಳು ಮತ್ತು ರಾಜರ ಸಹಪಾಠಿಗಳು, ಸೈನಿಕರೊಂದಿಗೆ ಕೇರಳಕ್ಕೆ ಬಂದು ಮತ ಪ್ರಚಾರ ತೊಡಗಿದಾಗ ಇಲ್ಲಿದ್ದ ‘ಬಾರಿ’ಗಳ ಜನಾಂಗ, ನಮ್ಮ ದೇಶದಲ್ಲಿ ಹುಟ್ಟಿದ ಮತವೆಂದು ಹೆಮ್ಮೆಯಿಂದ ಇಸ್ಲಾಮಿಗೆ ಮತಾಂತರಗೊಂಡರು. ಅಲ್ಲಿಯವರೆಗೂ ‘ಬಾರಿ’ ಜನಾಂಗವಾಗಿಯೇ ಉಳಿದಿತ್ತು.​

​ಕೇರಳದ  ಅರಸರಾದ ಚೇರುಮನ್ ಪೆರುಮಾಳ್ ಸ್ವೀಕರಿಸಿದ ಮತ ಉತ್ತಮ ಮತವಾಗಿದೆ ಎಂದು ಹಲವಾರು ಬ್ರಾಹ್ಮಣರು, ರಾಜ ವಂಶಿಯರಾದ ಜೈನರು ಬಹಳ ಸಂಖ್ಯೆಯಲ್ಲಿ ತುಳುನಾಡಿನಲ್ಲಿ ಮತಾಂತರಗೊಂಡರು. ಬ್ರಾಹ್ಮಣ, ಜೈನ್‌ರೊಂದಿಗಿದ್ದ ಶೆಟ್ಟರು, ಬಿಲ್ಲವರು, ದಲಿತರು ಕೂಡಾ ಮತಾಂತರಗೊಂಡರು. ಕೇರಳದಿಂದ ಕಲಿಸಲು ಬಂದ ಮೌಲವಿಗಳಿಗೆ ತುಳು ಅರಗಿಸಿಕೊಳ್ಳಲಾರದೆ, ಮಳೆಯಾಳಕ್ಕೆ ಹತ್ತಿರವಾದ ‘ಬಾರಿ’ಗಳ ಭಾಷೆಯನ್ನು ಧರ್ಮ ಭೋದನೆಗೆ ಬಳಸಿ ತುಳು ಭಾಷೆಯಿಂದಲೂ ನಮ್ಮನ್ನು ಭಾಷಾಂತರಗೊಳಿಸಿದರು, ಇದೊಂದು ದುರಂತ.!. ಇಲ್ಲದಿರುತ್ತಿದ್ದರೆ ತುಳು ಭಾಷೆಯೇ ಇಲ್ಲಿ ಮತಾಂತರಗೊಂಡವರ ಅಧಿಕೃತ ಭಾಷೆಯಾಗಿರುತ್ತಿತ್ತು. ತುಳುನಾಡಲ್ಲಿ ಸೌಹಾರ್ಧತೆ ಸಡಿಲಗೊಳ್ಳುತ್ತಿದ್ದಿಲ್ಲ. ಇಸ್ಲಾಮಿನ ತತ್ವ, ಸತ್ವ ಮತಾಂತರಗೊಳ್ಳದ ತುಳುವರಿಗೂ ಅರಿತು ದ್ವೇಷಕ್ಕೆ ಎಡೆ ಇರುತ್ತಿದ್ದಿಲ್ಲ. ಯಾರದೋ ಷಡ್ಯಂತರಕ್ಕೆ ಯಾರೋ ಬಲಿಯಾಗುತ್ತಾರೆ ಎಂಬುದಕ್ಕೆ ಇಂದೊಂದು ನಿದರ್ಶನ.

ಇಲ್ಲಿ ಮತಾಂತರಗೊಂಡ ತುಳುವರು ‘ಬಾರಿ’ ಭಾಷೆಯನ್ನು ಬಳಸಿದ ಕಾರಣ ಬ್ಯಾರಿ ಭಾಷೆ ನಮ್ಮ ಅಧಿಕೃತ ಭಾಷೆಯಾಯಿತು. ಆದರೆ ಜನಾಂಗೀಯವಾಗಿ ನಾವು ಬ್ಯಾರಿಗಳೇ.? ಮತಾಂತರಗೊಂಡ ಬ್ರಾಹ್ಮಣರು ತಮ್ಮ ಘನತೆ ಉಳಿಸಿಕೊಳ್ಳಲು “ಖೈಸರ್ ಕೂಟ’ದವರಾದರು. ರಾಜಮನೆತನದ ಜೈನರು ‘ಸುಲ್ತಾನ್ ಬೆಲಿಯಞ’ ಆದರು. ಇತರ ಜನಾಂಗದ ಸುವರ್ಣರು ‘ಪಾಟೀಲ್’ ಗಳಾದರು. ಬಂಗೇರರು ‘ಅಂಜಿಲ್ಲ’ ದವರಾದರು. ದಲಿತರುಗಳೆಲ್ಲಾ ‘ಕೂಡಂಕಾರ್’ ಆಗಿ, ನಿನ್ನೆ ಮೊನ್ನೆಯವರೆಗೂ ಮೇಲು-ಕೀಳಿನ ಜಾತಿಪದ್ಧತಿ ನಮ್ಮಲ್ಲೂ ಉಳಿದು ಹೋಗಿತ್ತು.

​ತುಳುನಾಡಿನಲ್ಲಿ ಮತಾಂತರಗೊಂಡ ತುಳುವರು ‘ಬಾರಿ’ ಭಾಷೆಯನ್ನು ಬಳಸಿಕೊಂಡ ಮಾತ್ರಕ್ಕೆ ಜನಾಂಗಿಯವಾಗಿ ನಾವು ಬ್ಯಾರಿಗಳೇ.? ಬ್ಯಾರಿ ಒಂದು ಸಮುದಾಯವೆಂದು ಹೇಳಿಕೊಳ್ಳಲು ಏನು ಅಡಚಣೆ ಇಲ್ಲ.

​ಹೆಸರಿನ ಮುಂದೆ ‘ಬಾರಿ’ ಎಂಬ ಸರ್ವನಾಮ ರತ್ನಗಿರಿ, ಚಿಪ್ಲುನ್, ಗುಜರಾತ್, ಕರಾಚಿಯಲ್ಲೂ ಬಹಳ ಇತ್ತು. ನಾವು ನಮ್ಮನ್ನು ಬ್ಯಾರಿಗಳೆಂದು ಕರೆದುಕೊಳ್ಳಲು ಯಾವ ಆಕ್ಷೇಪಗಳೂ ಇಲ್ಲ. ಆದರೆ ಇಸ್ಲಾಂ ಅಸ್ಥಿತ್ವ ಇಲ್ಲಿ ಇಲ್ಲದಾಗ ಅರಬ್ ‘ಬಾರಿ’ ಗಳೊಂದಿಗೆ ವ್ಯಾಪಾರ ಮಾಡುತ್ತಿದ್ದದ್ದು ಇಲ್ಲಿಯ ತುಳುವಿನ ಬೃಹತ್ ‘ಸಮುದಾಯ’. ‘ಬ್ಯಾರ’ ದಿಂದ ಬ್ಯಾರಿ ಆಗುತ್ತಿದ್ದರೆ ಇಲ್ಲಿಯ ತುಳು ವರ್ತಕ ಸಮುದಾಯ ಬ್ಯಾರಿಗಳಾಗಬೇಕಿತ್ತು ನಾವಲ್ಲ. ಈಗ ಹೇಳಿ ನಾವ್ಯಾರು?