ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಹೊರತು ಮಕ್ಕಳಿಗಲ್ಲ: ಹೈಕೋರ್ಟ್

ರಾಜ್ಯ

ಪೋಷಕರ ನಿರ್ವಹಣೆ, ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಾಯ್ದೆ-2007ರ ಕಲಂ 16ರಡಿ ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಇದೇ ಮೊದಲ ಬಾರಿಗೆ ಈ ದಿಸೆಯಲ್ಲಿ ಮಹತ್ವದ ತೀರ್ಪೊಂದನ್ನು ನೀಡಿದೆ.

ಈ ಸಂಬಂಧ ನಗರದ ಪಿ.ಕೃಷ್ಣ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಅರ್ಜಿದಾರರು ಬೇಕಿದ್ದರೆ ತಮ್ಮ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಿವಿಲ್‌ ಕೋರ್ಟ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು’ ಎಂದು ನಿರ್ದೇಶಿಸಿದೆ.

ಹಿರಿಯ ನಾಗರಿಕರ ಕಾಯ್ದೆಯ ಕಲಂ 23ರ ಪ್ರಕಾರ; ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಮಕ್ಕಳು ತಮಗೆ ಅಗತ್ಯ ಆರೈಕೆ ಮತ್ತು ಮೂಲಸೌಕರ್ಯ ಒದಗಿಸಬೇಕೆಂಬ ಷರತ್ತುಗಳನ್ನು ವಿಧಿಸಬಹುದು. ಒಂದು ವೇಳೆ ಅವರು ಆ ಷರತ್ತುಗಳನ್ನು ಪೂರೈಸದೆ ಹೋದಲ್ಲಿ ಉಪ ವಿಭಾಗಾಧಿಕಾರಿ ಮುಂದೆ ಗಿಫ್ಟ್‌ ಡೀಡ್‌ ರದ್ದು ಕೋರಿ ಅರ್ಜಿ ಸಲ್ಲಿಸಬಹುದು. ಇದರನ್ವಯ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಲಂ 16ರಡಿ ಅಂತಹ ಅರ್ಜಿಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.