ರಾಜ್ಯ ಸರ್ಕಾರದಿಂದ ಮತ್ತೆ ಕೊರೊನಾ ಹೈ ಅಲರ್ಟ್,ಬೂಸ್ಟರ್​ ಡೋಸ್​ ಪಡೆದುಕೊಳ್ಳಲು ಮನವಿ

ರಾಜ್ಯ

ಕೊರೋನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಆತಂಕ ಮಾಡುವುದು ಬೇಡ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಎಎಲ್​​ಐ, ಸಾರಿ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡುವ ನಿರ್ಧಾರ ಮಾಡಲಾಗಿದೆ. ವಿಶೇಷ ಎಂದರೇ, ಒಳಾಂಗಣದಲ್ಲಿ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲು ಸಲಹೆ ನೀಡಿದ್ದೇವೆ. ವಿದೇಶಿ ಪ್ರಯಾಣಿಕರ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಎಷ್ಟು ಪ್ರಮಾಣದಲ್ಲಿ ಕೊರೊನಾ ಟೆಸ್ಟ್​ ಮಾಡ್ಬೇಕು ಅಂತ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಅಕ್ಸಿಜನ್ ಪ್ಲಾಂಟ್​ಗಳನ್ನು ಸರಿಯಾದ ರೀತಿಯಲ್ಲಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಸಿಜನ್​ ಬಗ್ಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲವು ಬೆಡ್​​ಗಳನ್ನು ಕೊರೊನಾಗೆ ಮೀಸಲು ಮಾಡಲು ಸೂಚನೆ ನೀಡಲಾಗಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೂ ಈ ಬಗ್ಗೆ ಮಾಹಿತಿ ಹಂಚಿಕೊಂಡು ಕ್ರಮವಹಿಸಲು ಸೂಚನೆ ನೀಡುತ್ತೇವೆ ಎಂದರು.

ಬೂಸ್ಟರ್​ ಡೋಸ್​ ಪಡೆದುಕೊಳ್ಳಲು ಸುಧಾಕರ್ ಮನವಿ.ಮೂರನೇ ಡೋಸ್​ ಲಸಿಕೆಗೆ ವಿಶೇಷ ಒತ್ತು. ಕೊರೊನಾ ಎರಡನೇ ಅಲೆ ಬಳಿಕ ಕೊರೊನಾ ಕಡಿಮೆಯಾಗಿದ್ದ ಕಾರಣ ಬೂಸ್ಟರ್ ಡೋಸ್​ ಕಡಿಮೆ ತೆಗೆದುಕೊಂಡಿದ್ದಾರೆ. ಆದ್ದರಿಂದ ವಿಶೇಷ ಗಮನಹರಿಸಿ ಮೂರನೇ ಡೋಸ್​​ ನೀಡಲು ವ್ಯಾಕ್ಸಿನೇಷನ್​ ಕ್ಯಾಂಪ್​​ ಮಾಡಲು ಸೂಚನೆ, ಶೇ.100 ಸಾಧನೆ ಮಾಡಲು ಸಿಎಂ ಹೇಳಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕೊರೊನಾ ಲಸಿಕೆ ಪೂರೈಕೆ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.