ಮಲ್ಲಿಕಾರ್ಜುನ ಖರ್ಗೆ ಗದರಿದ್ದರಿಂದ ನಾನು ಮುಖ್ಯಮಂತ್ರಿ ಆಗ್ತೀನಿ ಎಂಬ ಕಹಳೆ ಮೊಳಗಿಸುವುದನ್ನು ಅವರು ನಿಲ್ಲಿಸಿದ್ದಾರೆ

ರಾಜ್ಯ

ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮೊಳಗಿನ ಭಿನ್ನಾಭಿಪ್ರಾಯ,ಶೀತಲ ಸಮರ, ಭುಸುಗುಟ್ಟುವುದು ಮತ್ತು ಗುಸುಗುಡುವುದನ್ನು ನಿಲ್ಲಿಸಿ ತಮ್ಮಲ್ಲಿ ಐಕ್ಯಮತ್ಯವಿದೆ, ನಾವೆಲ್ಲ ಒಂದೇ ಅಂತ ಸಾರಲಾರಂಭಿಸಿದ್ದಾರೆ. ಆದರೆ ಅವರ ನಡುವಿನ ಜಗಳಗಳಿಗೆ ಇದು ಅಲ್ಪವಿರಾಮ ಅಂತ ಜಾಣ ಮತದಾರನಿಗೆ ಗೊತ್ತಿದೆ. ರಾಜ್ಯ ಕಾಂಗ್ರೆಸ್ ನ ಇಬ್ಬರು ನಾಯಕರು-ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಾದಾಟ ಒಂದು ಓಪನ್ ಸೀಕ್ರೆಟ್. ಹಾಗಾಗಿಯೇ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಎರಡು ಬಣಗಳಾಗಿವೆ. ಒಂದು ಸಿದ್ದರಾಮಯ್ಯ ಬಣ ಮತ್ತೊಂದು ಶಿವಕುಮಾರ್ ಬಣ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಬಹಳ ದಿನಗಳಿಂದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅದನ್ನು ಹಲವಾರು ಸಂದರ್ಭಗಳಲ್ಲಿ ಅವರು ಹೇಳಿಕೊಂಡಿದ್ದಾರೆ.ಕೆಲ ವಾರಗಳ ಹಿಂದೆ ಮೈಸೂರಿನಲ್ಲಿ ಅವರು ತಮ್ಮ ಸಮುದಾಯದ ಬೆಂಬಲವನ್ನು ಕೋರಿದ್ದರು.ನಿಮ್ಮ ಆಶೀರ್ವಾದ ಸಹಕಾರ ಬೆಂಬಲವಿದ್ದರೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ವ್ಯಕ್ತಿ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಅಂತ ಡಿಕೆಶಿ ಹೇಳಿದ್ದರು.

ಸಿದ್ದರಾಮಯ್ಯನವರು ಈಗಾಗಲೇ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಅಂತ ಅವರು ಹೋದಳ್ಳೆಲ್ಲಾ ಹೇಳುತ್ತಿದ್ದಾರೆ ಮತ್ತು ಇತ್ತೀಚಿಗೆ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಕೂಡ ಆ ಮಾತನ್ನು ಪುನರುಚ್ಛರಿಸಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಇನ್ನೊಂದು ಚಾನ್ಸ್ ಸಿಗಬೇಕೆನ್ನುವುದು ಅವರ ವಾದ. ಅವರು ಸ್ವಚ್ಛ ಆಡಳಿತ ನಡೆಸಿದ್ದರು, ಚುನಾವಣಾ ಪ್ರಣಾಳಿಕೆಯಲ್ಲಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದರು ಅಂತ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಅದು ನಿಜ, ಅವರ ಅವಧಿಯಲ್ಲಿ ಯಾವುದಾದರೂ ಹಗರಣ ನಡೆದಿದ್ದರೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸುಮ್ಮನಿರುತ್ತಿರಲಿಲ್ಲ. ಐಟಿ, ಇಡಿ ಮತ್ತು ಸಿಬಿಐಗಳಿಂದ ದಾಳಿಗಳು ನಡೆದಿರುತ್ತಿದ್ದವು.

ಕಾಂಗ್ರೇಸ್ ಪಕ್ಷದ ಹಲವಾರು ನಾಯಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕೂರಿಸಿಕೊಂಡು ಗದರಿದ್ದರಿಂದ ನಾನು ಮುಖ್ಯಮಂತ್ರಿ ಆಗ್ತೀನಿ ಕಹಳೆ ಮೊಳಗಿಸುವುದನ್ನು ಅವರು ನಿಲ್ಲಿಸಿದ್ದಾರೆ. ಹಾಗಾಗಿಯೇ ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಮನ್ವಯತೆ, ಅಪ್ಪುಗೆ, ಮುಗುಳ್ನಗು ಗೋಚರಿಸುತ್ತವೆ.