ಗುರುಗಳು ವಿದ್ಯಾರ್ಥಿಗಳಿಗೆ ಗದರುವುದು, ದಂಡಿಸುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್‌

ಅಂತಾರಾಷ್ಟ್ರೀಯ

ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತಿದ್ದುವುದಕ್ಕಾಗಿ ಗದರಿಸುವುದು, ಅಗತ್ಯ ಕಂಡರೆ ಸೂಕ್ತ ಹಾಗೂ ಸಮಂಜಸವಾಗಿ ದಂಡಿಸುವುದು ಭಾರತೀಯ ದಂಡ ಸಂಹಿತೆ ಕಲಂ 324 ಮತ್ತು ಗೋವಾ ಮಕ್ಕಳ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರ ನೀಡುವುದಲ್ಲ, ಬದುಕಿಗೆ ಬೇಕಾದ ಶಿಸ್ತು ಮತ್ತು ನೈತಿಕ ಹಾಗೂ ದೈಹಿಕ ಚಟುವಟಿಕೆಗಳನ್ನೂ ಕಲಿಸಿಕೊಡಲಾಗುತ್ತದೆ. ಕ್ಷುಲ್ಲಕ ಕಾರಣಗಳಿಗೆ ಶಿಕ್ಷಕರನ್ನು ಹೆದರಿಸಿದರೆ ಶಾಲೆಯಲ್ಲಿ ಬೋಧನೆ ಮತ್ತು ಶಿಸ್ತು ಕಾಪಾಡುವುದು ಕಷ್ಟವಾಗುತ್ತದೆ ಎಂದು ನ್ಯಾ. ಭರತ್ ಪಿ. ದೇಶಪಾಂಡೆ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣ ದಾಖಲಿಸಿದ ಮರ್ಮಗೋವಾ ಪೊಲೀಸರು ಆರೋಪಿ ಶಿಕ್ಷಕಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಸದರಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಶಿಕ್ಷಕಿಗೆ ಒಂದು ದಿನದ ಜೈಲು ಮತ್ತು 1.10 ಲಕ್ಷ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ಮರ್ಮಗೋವಾದ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ರೇಖಾ ತನ್ನ ವಿದ್ಯಾರ್ಥಿಗಳಿಗೆ ಇಬ್ಬರು ವಿದ್ಯಾರ್ಥಿಗಳಿಗೆ ಬೆತ್ತದಿಂದ ಹೊಡೆದಿದ್ದಾರೆ ಎಂಬುದು ವಿದ್ಯಾರ್ಥಿನಿಯರ ಪೋಷಕರು ನೀಡಿದ ದೂರು. ಶಾಲೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಇನ್ನೊಬ್ಬ ವಿದ್ಯಾರ್ಥಿನಿಯ ನೀರಿನ ಬಾಟಲಿಯಿಂದ ನೀರು ಕುಡಿದರು ಎಂಬ ಕಾರಣಕ್ಕೆ ಶಿಕ್ಷಕಿ ಥಳಿಸಿದರು ಎಂಬುದು ದೂರಿನ ಸಾರ. 

ಆದರೆ, ಶಿಸ್ತು ಮತ್ತು ನಡತೆ ಪಾಠ ಹೇಳಿಕೊಡುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ನೈತಿಕ ಪಾಠ ಹೇಳಿಕೊಡುವುದು ತಪ್ಪಲ್ಲ. ಉತ್ತಮ ಉದ್ದೇಶದಿಂದ ನಡೆದ ಕೃತ್ಯ ಮತ್ತು ಈ ಕೃತ್ಯವು ಅಪರಾಧಿಕ ಕೃತ್ಯ ಮಾಡಬೇಕು ಎಂಬ ಉದ್ದೇಶದಿಂದ ಮಾಡಿದ್ದಲ್ಲ ಎಂಬುದು ಸ್ಪಷ್ಟ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.