ಮಂಗಳೂರು:ಪಳ್ಳಿಯಬ್ಬ ಕೊಲೆ ಪ್ರಕರಣ ಐವರು ಆರೋಪಿಗಳಿಗೆ ಶಿಕ್ಷೆ

ಕರಾವಳಿ

ಪಾವೂರು ಗ್ರಾಮದ ಮಲಾರ್‌ ಅರಸ್ಥಾನದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಐವರ ಮೇಲಿನ ಆರೋಪ ಸಾಬೀತಾಗಿದೆ. ಆರೋಪಿಗಳು ದೋಷಿಗಳು ಎಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಧೀಶರಾದ ಬಸಪ್ಪಬಾಳಪ್ಪ ಜಕಾತಿ ಅವರು ಶಿಕ್ಷೆಯ ಪ್ರಮಾಣವನ್ನು ಮಾ. 3ರಂದು ಪ್ರಕಟಿಸಲಿದ್ದಾರೆ.

ಮಲಾರ್‌ ಅಕ್ಷರ ನಗರ ನಿವಾಸಿಗಳಾದ ಹಂಝ, ಅಝರುದ್ದೀನ್‌,ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್‌ ಶೇಖ್‌ ಯಾನೆ ಅಮ್ಮಿ, ಅರ್ಫಾಝ್ ಅಬ್ದುಲ್‌ ರಝಾಕ್‌ ,ಅಥಾವುಲ್ಲ ಯಾನೆ ಅಲ್ತಾಫ್‌ ಆರೋಪಿಗಳು.

ಪಾವೂರು ಗ್ರಾಮದ ಮಲಾರಿನ ಪಳ್ಳಿಯಬ್ಬ ಯಾನೆ ಪಳ್ಳಿಯಾಕ (75) ನಾಪತ್ತೆಯಾದ ಬಗ್ಗೆ 2020ರ ಅ. 29ರಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಅವರನ್ನು ದುಷ್ಕರ್ಮಿಗಳು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಿದ್ದರು ಎಂದು ತನಿಖೆಯಿಂದ ಗೊತ್ತಾಗಿತ್ತು. ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.