ಬೆಂಗಳೂರು ಕಂಬಳಕ್ಕೆ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಬಿಜೆಪಿಯ ಅತ್ಯಾಚಾರಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಕರೆತರುವ ತೆರೆ ಮರೆಯ ಯತ್ನ ವಿಫಲವಾದ ಜೊತೆ ಜೊತೆಗೆ ಈ ಕಂಬಳಕ್ಕೆ ರಕ್ತ ಮೆತ್ತಿದವರನ್ನೆಲ್ಲ ಅತಿಥಿಗಳಾಗಿ ಆಹ್ವಾನಿಸುವ ಇನ್ನಷ್ಟು ಸ್ಪೋಟಕ ಅಂಶಗಳು ಹೊರಬಿದ್ದಿದೆ. ರೌಡಿಗಳು, ಭೂಗತ ಪಾತಕಿಗಳು ಕಂಬಳದ ಅತಿಥಿಗಳಾಗಿರುವ ಕಂಬಳದ ಆಯೋಜಕರಿಗೆ ಭೂಗತ ಪಾತಕಿಗಳೊಂದಿಗೆ ನಂಟು ಇದೆಯಾ ಅನುಮಾನ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.1993 ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ, ಜೈಲು ಶಿಕ್ಷೆ ಅನುಭವಿಸಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಶ್ಯಾಮ್ ಕಿಶೋರ್ ಗರಿಕಪಟ್ಟಿ ಬೆಂಗಳೂರು ಕಂಬಳದ ಅತಿಥಿಯಾಗಿರುವುದು ಇದೀಗ ಇಂತಹ ಅನುಮಾನಕ್ಕೆ ಕಾರಣ. ಬಿಜೆಪಿ ವಿವಾದೀತ ಸಂಸದ, ಅತ್ಯಾಚಾರಿ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಆಹ್ವಾನಿಸಿ ಇದ್ದ ಮಾನವನ್ನೆಲ್ಲ ಕಳೆದುಕೊಂಡ ಪುತ್ತೂರಿನ ಕಾಂಗ್ರೆಸ್ ಶಾಸಕರು ಇದೀಗ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಹುತೇಕ ಬಿಜೆಪಿಗರು, ರೌಡಿಗಳು, ಕೊಲೆಗಡುಕರೇ ಅತಿಥಿಗಳಾಗಿ ವಿಜೃಂಭಿಸುತ್ತಿದ್ದಾರೆ.
ಕಂಬಳಕ್ಕೂ ಶೋಷಿತ ಸಮುದಾಯವಾದ ಕೊರಗ ಜನಾಂಗಕ್ಕೂ ಅವಿನಾಭಾವ ಸಂಬಂಧ ಇದೆ. ಕೊರಗ ಸಮುದಾಯದ ಕಂಬಳದ ಒಂದು ಭಾಗವೂ ಹೌದು. ಆದರೆ ಕಂಬಳದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೊರಗ ಸಮುದಾಯಕ್ಕೆ ಅವಕಾಶವೇ ಇಲ್ಲ. ಕಂಬಳ ಎಂಬುದು ಜಾನಪದ ಕ್ರೀಡೆ ಅನ್ನುವ ಬದಲು ಅದೊಂದು ಜಮೀನ್ದಾರಿಗಳ ಫ್ಯೂಡಲ್ ವ್ಯವಸ್ಥೆ ಅಂದರೆ ತಪ್ಪಲ್ಲ.
ರಾಜ್ಯದ ಕಾಂಗ್ರೆಸ್ ಸರಕಾರದ ಬೌದ್ಧಿಕ ದಿವಾಳಿತನಕ್ಕೆ ಬೆಂಗಳೂರು ಕಂಬಳ ಕೂಡ ಒಂದು ಸಾಕ್ಷಿ ಅಷ್ಟೇ. ರಾಜ್ಯ ಸರಕಾರವೇ ಮುಂದಾಳತ್ವ ವಹಿಸಿ ಕೋಟಿ ಅನುದಾನ ನೀಡುತ್ತಿದ್ದರೂ, ಕಾಂಗ್ರೆಸ್ ಶಾಸಕರೇ ಅಧ್ಯಕ್ಷರಾಗಿರುವ ಕಂಬಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತರಿಗೆ ಮಣೆ ಹಾಕಿದೆ ಅನ್ನುವುದು ಅಷ್ಟೇ ಸತ್ಯ. ಐದಾರು ತಿಂಗಳ ಹಿಂದೆ ಕರಾವಳಿಯ ಶಾಸಕರೊಬ್ಬರ ಮುಂದಾಳತ್ವದಲ್ಲಿ ಶಾಸಕರಿಗೆ ಪಾಠ ಹೇಳಲು ಆರ್ ಎಸ್ ಎಸ್ ಹಿನ್ನೆಲೆಯವರನ್ನು ಆಹ್ವಾನಿಸಲಾಗಿತ್ತು. ಅದು ದೊಡ್ಡ ವಿವಾದವಾದ ನಂತರ ಅವರನ್ನು ಕೈ ಬಿಡಲಾಗಿತ್ತು. ಇದೀಗ ಬೆಂಗಳೂರು ಕಂಬಳಕ್ಕೆ ಅಧ್ಯಕ್ಷ ಕಾಂಗ್ರೆಸ್ ಶಾಸಕರಾದರೆ, ಸಂಘಟನಾ ಅಧ್ಯಕ್ಷ, ಮಾಧ್ಯಮ ಸಂಯೋಜಕ, ಉದ್ಘಾಟನೆ ಎಲ್ಲವೂ ಬಿಜೆಪಿಗರ ಮಡಿಲು ಸೇರಿದೆ. ಅಭಿವೃದ್ಧಿಗೆ ವಿನಿಯೋಗಬೇಕಾದ ದುಡ್ಡನ್ನು ಬಿಜೆಪಿ ಪ್ರೇರಿತ ಶಕ್ತಿಗಳಿಗೆ ಮಣಿದು ರಾಜ್ಯ ಸರಕಾರ ಬಿಡುಗಡೆ ಮಾಡಲು ಮುಂದಾಗಿದೆ. ಸರಕಾರ ಸಂಘ ಪರಿವಾರಕ್ಕೆ ಶರಣಾಗಿದೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?
ಬಿಜೆಪಿಯನ್ನು ಸೋಲಿಸುವುದಷ್ಟೇ ಕೋಮುವಾದದ ವಿರುದ್ಧ ಹೋರಾಟ ಎಂದು ನಂಬಿರುವ ಕಾಂಗ್ರೆಸ್ ಇದರ ಹಿಂದಿರುವ ಸಾಂಸ್ಕೃತಿಕ ರಾಜಕಾರಣವನ್ನು ಗ್ರಹಿಸಲು ವಿಫಲವಾಗಿರುವುದು ಬೌದ್ಧಿಕ ದಿವಾಳಿತನ ಅಂದರೆ ತಪ್ಪಲ್ಲ. ಕಂಬಳವೂ ಸೇರಿದಂತೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆರ್ ಎಸ್ ಎಸ್ ಹೆಣೆದ ಬಲೆಗೆ ಕಾಂಗ್ರೆಸ್ ಹಳ್ಳಕ್ಕೆ ಬೀಳುತ್ತಿದೆ. ಕಾಂಗ್ರೆಸ್ ಅನುದಾನ, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಲ್ಲಿ ನಡೆಯುವ ಬೆಂಗಳೂರು ಕಂಬಳದಲ್ಲಿ ಆರ್ ಎಸ್ ಎಸ್ ಪ್ರೇರಿತರೆ ಬಹುಪಾಲು ನುಸುಳಿದ್ದಾರೆ.
ಇನ್ನು ಬೆಂಗಳೂರು ಕಂಬಳಕ್ಕೆ ದಾವೂದ್ ಇಬ್ರಾಹಿಂ ನೊಂದಿಗೆ ಪ್ರಧಾನ ನಂಟು ಹೊಂದಿದ್ದ ಬ್ಲ್ಯಾಕ್ ಸ್ಕಾರ್ಪಿಯನ್ ಅಡ್ಡ ಹೆಸರಿನಿಂದ ಕರೆಯಲ್ಪಡುವ ಶ್ಯಾಮ್ ಕಿಶೋರ್ ಗರಿಕಪಟ್ಟಿ ದಾವೂದ್ ಇಬ್ರಾಹಿಂ-ಅರುಣ್ ಗಾಂವ್ಳಿ ಗ್ಯಾಂಗ್ ಗಳ ನಡುವೆ ನಡೆದಿದ್ದ ಜೆಜೆ ಆಸ್ಪತ್ರೆ ಶೂಟೌಟ್ ಪ್ರಕರಣ ದಲ್ಲಿ ಪ್ರಮುಖ ಆರೋಪಿಯಾಗಿದ್ದ. ಘನಶ್ಯಾಮ್ ಭಾಟಿಯಾ ಸಹೋದರ ಇಂದರ್ ಹತ್ಯೆ ಪ್ರಕರಣದಲ್ಲೂ ಜೈಲು ಸೇರಿದ್ದ. ಮುಂಬೈ ಪಾತಕ ಜಗತ್ತಿನಲ್ಲಿ 18 ಕೇಸುಗಳನ್ನು ಮೆತ್ತಿಕೊಂಡ ಗರಿಕಪಟ್ಟಿ ಅತಿಥಿಯಾಗಿರುವುದು ಅಚ್ಚರಿ ತಂದಿದೆ. ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಜೈಲು ಸೇರಿದ್ದ ಈತ 2003 ರಲ್ಲಿ ಪೆರೋಲ್ ಮೇಲೆ ಹೊರಬಂದು 8 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. 2021 ರ ಫೆಬ್ರವರಿಯಲ್ಲಿ ಗೋವಾದ ಹಳ್ಳಿಯೊಂದರಲ್ಲಿ ಆತನನ್ನು ಬಂಧಿಸಲಾಗಿತ್ತು. ನಕಲಿ ಐಡಿ ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇಂತಹ ಭೂಗತ ಪಾತಕಿ ಬೆಂಗಳೂರು ಕಂಬಳದ ಅತಿಥಿಯಾಗಿರುವುದು ಆತಂಕ ಮೂಡಿಸಿದೆ. ಕಂಬಳದ ಆಯೋಜಕರಿಗೆ, ದಾವೂದ್ ಗ್ಯಾಂಗಿನ ನಡುವೆ ಇರುವ ನಂಟೇನು? ಬ್ರಿಜ್ ಭೂಷಣ್ ಆಹ್ವಾನ ಕೂಡ ಮಾಫಿಯಾ ಜಗತ್ತಿನ ಕೊಂಡಿಯೂ ಆಗಿತ್ತು.
ಹಲಾಲ್ ಕೋರರನ್ನು, ಸಮಾಜ ಘಾತುಕರನ್ನು ಕಂಬಳಕ್ಕೆ ಆಯೋಜಿಸುವ ಮೂಲಕ ಯಾವ ಸಂದೇಶ ನೀಡಲಾಗುತ್ತಿದೆ? ಕಂಬಳದ ಆಯೋಜಕರಿಗೂ-ಮಾಫಿಯಾ ಗ್ಯಾಂಗ್ ಮಧ್ಯೆ ಇರುವ ಕೊಂಡಿ ಏನು? ಸಮಾಜಘಾತುಕರು ಅತಿಥಿಯಾಗಿರುವ ಕಂಬಳಕ್ಕೆ ಸರ್ಕಾರದಿಂದ ಒಂದು ಕೋಟಿ ಅನುದಾನ ನೀಡಿ ಯಾವ ಸಂದೇಶ ನೀಡುತ್ತಿದೆ? ಇದೀಗ ಎದ್ದಿರುವ ಪ್ರಶ್ನೆ.