ವೆನ್ಲಾಕ್ ಆಸ್ಪತ್ರೆಯು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಯೋಗಶಾಲೆಯಾಗಿದೆ: ಮುನೀರ್ ಕಾಟಿಪಳ್ಳ

ಕರಾವಳಿ

ಇಂದು ಗುರುಪುರ ಕೈಕಂಬದ ಜಂಕ್ಷನ್ ಬಳಿ “ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಗುರುಪುರ” ಇದರ ನೇತೃತ್ವದಲ್ಲಿ ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳು, ವೈದ್ಯರುಗಳನ್ನು ಒದಗಿಸುವಂತೆ ಮತ್ತು ಗುರುಪುರ ಹೋಬಳಿಗೆ ಒಂದು ಸಮುದಾಯ ಆಸ್ಪತ್ರೆಯನ್ನು ಒದಗಿಸಬೇಕೆಂದು ಒತ್ತಾಯಿಸಿ ಸಾಮೂಹಿ ಧರಣಿ ನಡೆಸಲಾಯಿತು.

ಧರಣಿಯನ್ನು ಉದ್ಘಾಟಿಸಿ ಡಿವೈಎಫ್ಐ ರಾಜ್ಯ ಅಧ್ಯಕ್ಷರಾಗಿರುವ ಮುನೀರ್ ಕಾಟಿಪಳ್ಳರವರು ಮಾತನಾಡುತ್ತಾ ವೆನ್ಲಾಕ್ ಆಸ್ಪತ್ರೆಯು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಯೋಗ ಶಾಲೆ ಯಾಗಿದೆ. ವೆನ್ಲಾಕನ್ನು ಕೇಂದ್ರೀಕರಿಸಿ ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜುಗಳು ತಲೆಯೆತ್ತಿವೆ, ಆದರೂ ನಮ್ಮ ಜನ ಪ್ರತಿನಿಧಿಗಳು ಸರಕಾರಿ ಮೆಡಿಕಲ್ ಕಾಲೇಜನ್ನು ಮಂಗಳೂರಿನಲ್ಲಿ ಸ್ಥಾಪಿಸಲು ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿಮಾನ್ಸ್, ಜಯದೇವ, ಕಿದ್ವಾಯಿ ಯಂತಹ ಅತ್ಯದ್ಭುತ ಆಸ್ಪತ್ರೆಗಳಿವೆ. ಬೆಂಗಳೂರಿನ ನಂತರದಲ್ಲಿ ಮಂಗಳೂರು ರಾಜ್ಯದ ಪ್ರಮುಖ ನಗರವಾಗಿದ್ದು, ಐದಾರು ಜಿಲ್ಲೆಗಳಿಗೆ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಒಂದೇ ಒಂದು ಸದೃಢ ಸರಕಾರಿ ಆಸ್ಪತ್ರೆಗಳಿಲ್ಲ ಗುರುಪುರ ಹೋಬಳಿಯಲ್ಲಿರುವ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೂಡ 50 ವರ್ಷಗಳಿಗಿಂತ ಹಳೆಯ ಆರೋಗ್ಯ ಕೇಂದ್ರಗಳಾಗಿದ್ದು ಉಳ್ಳಾಲ ಶ್ರೀನಿವಾಸ ಮಲ್ಯ, ಸುಬ್ಬಯ್ಯ ಶೆಟ್ಟಿ, ನಾಗಪ್ಪ ಆಳ್ವರವರ ಸಾಧನೆಯ ನಂತರದಲ್ಲಿ ಕಳೆದ 35 ವರ್ಷಗಳಿಂದ ನಡೆಯುತ್ತಿರುವ ಬಿಜೆಪಿ ಆಡಳಿತದಲ್ಲಿ ಸಾಧನೆ ಶೂನ್ಯವಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಸದಸ್ಯರಾದ ಭರತ್ ಶೆಟ್ರು ಸ್ವತಹ ವೈದ್ಯರಾಗಿದ್ದು ಅವರು ಕೋಮು ಪ್ರಚೋದನೆ ಭಾಷಣದಲ್ಲೇ ದಿನದೂಡುತ್ತಿದ್ದಾರೆ ವಿನಃ ವೈದ್ಯಕೀಯ ಅಧಿನಿಯಮದ ಅರಿವು ಕೂಡ ಅವರಿಗೆ ಇದ್ದಂತಿಲ್ಲಎಂದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊಹಿದ್ದೀನ್ ಭಾವಾರವರು ಮಾತನಾಡುತ್ತಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆಸ್ಪತ್ರೆಗಳ ಹೆಚ್ಚಳದ ಅವಶ್ಯಕತೆ ಇದೆ. ಈ ಹಿಂದೆಯೂ ಈ ಕುರಿತು ಪ್ರಯತ್ನಗಳು ನಡೆದಿತ್ತು ಆದರೆ ಈಗಿನ ಶಾಸಕರುಗಳು ಇಂತಹ ಜನಪರ ಬೇಡಿಕೆಗಳನ್ನು ವಿಧಾನಸಭೆಯ ಮುಂದೆ ಇಡುತ್ತಿಲ್ಲ ಎಂದರು. ಸಭೆಯನ್ನುದೇಶಿಸಿ ಹಿರಿಯ ಡಿಎಸ್ಎಸ್ ಮುಖಂಡರಾಗಿರುವ ಎಮ್ ದೇವದಾಸ್, ಸಾಮಾಜಿಕ ಕಾರ್ಯಕರ್ತರಾದ ಎಮ್ ಜಿ ಹೆಗ್ಡೆ, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿರುವ ಮನೋಹರ್ ಶೆಟ್ಟಿ, ಭಗಿನಿ ಅನ್ನ ಮರಿಯಮ್ಮ, ಶ್ರೀನಿವಾಸ್ ಮಿಜಾರ್, ಕುಪ್ಪೆಪದವು ಪಂಚಾಯತ್ ಉಪಾಧ್ಯಕ್ಷರಾದ ಶೆರೀಫ್ ಕಜೆ, ಕಾಂಗ್ರೆಸ್ ಮುಖಂಡರಾದ ಕೆ ಆರ್ ಪೃಥ್ವಿರಾಜ್, ಯುವ ಮುಂದಾಳು ಗಿರೀಶ್ ಆಳ್ವ, ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ಪೂಜಾರಿ ಮಾತನಾಡಿದರು.

ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಲ್ ಸಮಾರೋಪದ ಮಾತುಗಳನ್ನಾಡಿದರು. ಹೋರಾಟ ಸಮಿತಿ ಸಂಚಾಲಕ ಸದಾಶಿವ ದಾಸ್ ಧನ್ಯವಾದ ಸಮರ್ಪಿಸಿದರು. ಯುವ ವಕೀಲ, ಡಿವೈಎಫ್ಐ ಮುಖಂಡ ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಹೋರಾಟಗಾರರಾದ ಬಾವ ಪದರಂಗಿ, ರೈತ ಮುಖಂಡರಾದ ನೋಣಯ್ಯಗೌಡ, ಸಾಹುಲ್ ಹಮೀದ್ ಬಜ್ಪೆ, ಸಿರಾಜ್ ಬಜ್ಪೆ, ಶರೀಫ್ ಉಳಾಯಿಬೆಟ್ಟು, ಡಾ. ಸಿದ್ದೀಕ್ ಅಡ್ಡೂರು, ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾ ಡಿಸೋಜಾ, ಇರ್ಫಾನ್, ಝಹೂರ್, ರಫೀಕ್ ಕುಪ್ಪೆಪದವು, ಇಡ್ಮಾ ಖಾದರ್, ಮಜೀದ್ ಅಮ್ಮುಂಜೆ, ಇಸ್ಮಾಯಿಲ್ ಕುಪ್ಪೆಪದವು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು, ಕಿಡ್ಮಾ ಪೌಂಡೇಶನ್ ಗುರುಕಂಬಳ ಮತ್ತು SKSSF ಘಟಕ ಕೈಕಂಬ ಇದರ ವತಿಯಿಂದ ಪ್ರತಿಭಟನಾ ಸ್ಥಳದಲ್ಲಿ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ಇಡಲಾಗಿತ್ತು. ತಾಲೂಕು ಪ್ರಭಾರ ವೈದ್ಯಾಧಿಕಾರಿಗಳು ಧರಣಿ ವೇದಿಕೆಗೆ ಆಗಮಿಸಿ ಮನವಿ ಸ್ವೀಕರಿಸಿದರು. ಕೊನೆಯಲ್ಲಿ ಸದಾಶಿವ ದಾಸ್ ರವರು ವಂದನಾರ್ಪಣೆಗೈದರು.