ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (KRIDL) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರ್ವೀಜ್ ಧಾರವಾಡ, ಸರ್ಕಾರದಿಂದ ಕಾಮಗಾರಿಗಳ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಗುತ್ತಿಗೆದಾರರ ಒತ್ತಡ ಹಾಗೂ ಅನುದಾನ ವಿಳಂಬದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಐದು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸಿದ್ದರು.
ಸತತ 40 ದಿನಗಳ ಕಾಲ ಬೆಂಗಳೂರು, ಭೋಪಾಲ್ ಹಾಗೂ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಸಿಗದ ಅಧಿಕಾರಿ, ಕೊನೆಗೂ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಮುಂಬೈನಲ್ಲಿ ಪರ್ವೀಜ್ ಅವರನ್ನು ವಶಕ್ಕೆ ಪಡೆದಿದ್ದು, ಇಂದು ಗದಗಕ್ಕೆ ಕರೆತರುವ ಸಾಧ್ಯತೆಯಿದೆ. ಬಳಿಕ ನ್ಯಾಯಾಲಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುವುದು. ಈ ಅವಧಿಯಲ್ಲಿ ಅವರು ಎಲ್ಲೆಲ್ಲಿ ಆಶ್ರಯ ಪಡೆದಿದ್ದರು, ನಾಪತ್ತೆಯಾಗಲು ನಿಖರ ಕಾರಣವೇನು ಹಾಗೂ ಈ ಹಿಂದೆ ಬರೆದಿದ್ದ ಡೆತ್ ನೋಟ್ ಕುರಿತಾದ ಸಮಗ್ರ ಮಾಹಿತಿಯನ್ನು ಕಲೆಹಾಕಲಿದ್ದು, ತನಿಖೆಯಿಂದ ಪ್ರಕರಣದ ಹಲವು ಮುಖಗಳು ಹೊರಬರುವ ನಿರೀಕ್ಷೆಯಿದೆ.
