ಕೇರಳ: ಕೊಚ್ಚಿ ಸಮೀಪದ ತ್ರಿಪುಣಿತುರಾದಲ್ಲಿ ವಸತಿ ಪ್ರದೇಶದಿಂದ ನಡೆಯುತ್ತಿದ್ದ ಅಕ್ರಮ ಪಟಾಕಿ ಗೋದಾಮಿನಲ್ಲಿಂದು ಸಂಭವಿಸಿದ ಭಾರೀ ಸೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ವ್ಯಕ್ತಿಯನ್ನು ತಿರುವನಂತಪುರಂ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ. ಸೋಟದಲ್ಲಿ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಮನೆಗಳು ಮತ್ತು ಕೆಲವು ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಎರಡು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಮತ್ತು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಗೋದಾಮಿಗೆ ತಂದಿದ್ದ ಪಟಾಕಿಗಳ ಬೃಹತ್ ಸಂಗ್ರಹ ಒಟ್ಟಿಗೆ ಸ್ಪೋಟಗೊಂಡಿರುವ ಶಂಕೆ ಇದೆ. ಭಾರೀ ಸೋಟವಾಗಿದ್ದು, ಹಲವಾರು ಕಿಮೀ ದೂರದಲ್ಲಿ ಜನರು ಭೂಮಿ ನಡುಗಿದ ಅನುಭವವಾಗಿದೆ ಸ್ಥಳೀಯ ಅಗ್ನಿಶಾಮಕ ಠಾಣೆಯಲ್ಲೂ ಕಂಪನದ ಅನುಭವವಾಗಿದೆ. ದಟ್ಟ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಗೋದಾಮು ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಅದನ್ನು ನಿರ್ವಹಿಸುವವರು ಅದಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಸಹಾಯಕ ಠಾಣಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು. ವಾಹನದಿಂದ ಪಟಾಕಿಗಳನ್ನು ಗೋದಾಮಿಗೆ ಇಳಿಸುವಾಗ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯ ಜನರು ಮಾಹಿತಿಯ ನೀಡಿದ್ದಾರೆ. ಸ್ಥಳೀಯ ದೇವಾಲಯದ ಉತ್ಸವದ ಭಾಗವಾಗಿ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡಗಳ ಮೇಲ್ಛಾವಣಿ ತೀವ್ರವಾಗಿ ಹಾನಿಗೀಡಾಗಿರುವುದು ಕಂಡುಬಂದಿದೆ. ಸ್ಪೋಟದ ಪ್ರಭಾವದಿಂದ ಅನೇಕ ಮನೆಗಳ ಬಾಗಿಲು ಮತ್ತು ಕಿಟಕಿಗಳು ಗೋಡೆಯಿಂದ ಹಾರಿಹೋಗಿವೆ. ವಾಹನಗಳಿಗೂ ಜಖಂ ಆಗಿವೆ ಎಂದು ತಿಳಿದು ಬಂದಿದೆ.
