ಕಟ್ಟಡ ನಿರ್ಮಾಣ ಅನುಮೋದನೆ ಗ್ರಾ.ಪಂ, ತಾ.ಪಂ ಗಿಲ್ಲ, ಇನ್ನು ಜಿಲ್ಲಾ ಕೇಂದ್ರದ ಹೆಗಲಿಗೆ; ನಾಗರೀಕರ ಪರದಾಟಕ್ಕೆ ಸರಕಾರ ತೀರ್ಮಾನ
ಇನ್ಮುಂದೆ ಗ್ರಾಮಾಂತರ ಪ್ರದೇಶಗಳಲ್ಲಿ ತಾಲೂಕು ಪಂಚಾಯತ್ ನೀಡುತ್ತಿದ್ದ ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಸರಕಾರದ ನೂತನ ನಿಯಮಾವಳಿಯಂತೆ ಜಿಲ್ಲಾ ಕೇಂದ್ರದಲ್ಲಿರುವ ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯಿಂದಲೇ ಪಡೆಯಬೇಕು ಎಂಬ ನಿಯಮದ ಬಗ್ಗೆ ಸಾರ್ವಜನಿಕ ವಲಯಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜನಸಾಮಾನ್ಯರು ಕಟ್ಟಡ ನಿರ್ಮಿಸಲು, ಮನೆ ಕಟ್ಟಲು 9|11 ದೊರೆಯಲು ಆಗಬೇಕಾದ ವಿನ್ಯಾಸವನ್ನು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಇತ್ತು. ಆದರೆ ಇದೀಗ ಬಂದಿರುವ ಹೊಸ ನಿಯಮಾವಳಿ ಪ್ರಕಾರ ಇವರ ಅಧಿಕಾರವನ್ನು ಕಿತ್ತೆಗೆದು ಜಿಲ್ಲಾ ಕೇಂದ್ರಗಳಲ್ಲಿರುವ ನಗರಾಭಿವೃದ್ಧಿ ಅಥವಾ ಯೋಜನಾ ಪ್ರಾಧಿಕಾರಕ್ಕೆ ತೆರಳಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳನ್ನು ಹೊಂದಿದ್ದು, ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಈ ಎಲ್ಲಾ ತಾಲೂಕಿನ ನಾಗರೀಕರು ಇನ್ನು ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ. ವಿಶೇಷತೆ ಎಂದರೆ ಜಿಲ್ಲಾ ಕೇಂದ್ರಗಳಲ್ಲಿ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರ ಕೆಲಸಗಳನ್ನು ಯಾವ ವೇಗದಲ್ಲಿ ಮಾಡುತ್ತಾರೆ ಅನ್ನುವುದೇ ಇದೀಗ ಯಕ್ಷ ಪ್ರಶ್ನೆ.
ಈ ಹಿಂದೆ ಬಿಜೆಪಿ ಸರಕಾರ ಇದೇ ರೀತಿಯ ಆದೇಶವನ್ನು ಹೊರಡಿಸಿತ್ತು. ನಾಗರೀಕರು ಈ ಬಗ್ಗೆ ತುಂಬಾ ತೊಂದರೆ ಅನುಭವಿಸಿದ್ದರು. ನಾಗರಿಕರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಿಜೆಪಿ ಸರಕಾರ ಅದನ್ನು ರದ್ದುಗೊಳಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುವುದಾ.. ಎಂದು ನೋಡಬೇಕಾಗಿದೆ.

ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಂದ ವಿನ್ಯಾಸ ಮಂಜೂರಾಗಿದ್ದು, ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆಯ ಅವಕಾಶಕ್ಕೆ ವ್ಯತಿರಿಕ್ತವಾಗಿದೆ ಎಂದು ನವೆಂಬರ್ 15 ರಂದು ನಡೆದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಅನುಮೋದನೆಯ ವಿರುದ್ಧ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿನ್ಯಾಸ ನಕ್ಷೆ ಮತ್ತು ಖಾತೆಗಳನ್ನೇ ರದ್ದುಗೊಳಿಸಿ ಆದೇಶಿಸಲಾಗಿದೆ.
ಇದೀಗ ಕಾಂಗ್ರೆಸ್ ಸರಕಾರ ಜನಸಾಮಾನ್ಯರಿಗೆ ಸಹಕಾರಿಯಾಗಿದ್ದ ಕ್ರಮಕ್ಕೆ ತಡೆ ಒಡ್ಡಿ ಇನ್ನು ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ಸಾಮಾನ್ಯವಾಗಿಬಿಟ್ಟಿದೆ. ಒಂದು ಕಡೆ ತಮ್ಮದು ಗ್ಯಾರಂಟಿ ಭಾಗ್ಯಗಳ ಸರಕಾರ, ಜನಪರ ಸರಕಾರ ಅನ್ನುತ್ತಿದೆ. ಇನ್ನೊಂದು ಕಡೆ ಜನಸಾಮಾನ್ಯರಿಗೆ ಭೂ ಪರಿವರ್ತಿತ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಕಾರಿಯಾಗಿದ್ದ ಕ್ರಮಕ್ಕೆ ತಡೆ ಒಡ್ಡಿ ಜನರನ್ನು ಅಲೆದಾಡಿಸಿ ಸತಾಯಿಸುವ ಕಾನೂನು ಜಾರಿಗೆ ತಂದಿದೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಾಗ ಇಂತಹ ಕಾನೂನುಗಳನ್ನು ಅನುಷ್ಠಾನಕ್ಕೆ ತಂದು ಜನರನ್ನು ತೊಂದರೆಗೀಡು ಮಾಡುತ್ತಿದೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.
ಇನ್ನಾದರೂ ಸರಕಾರ ಕಣ್ಣುತೆರೆದು ಇಂತಹ ಹುಚ್ಚಾಟದ ತೀರ್ಮಾನಗಳನ್ನು ಬಿಟ್ಟು ಯಥಾ ಸ್ಥಿತಿ ಮುಂದುವರಿಸಬೇಕೆಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.
