ಅಂತರ ಜಿಲ್ಲಾ ವರ್ಗಾವಣೆ ಹಾಗೂ ಪತಿ-ಪತ್ನಿಯರ ಪ್ರಕರಣದಲ್ಲಿ ವರ್ಷಗಳಿಂದಲೂ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ನೀಡಿದ್ದಾರೆ.ಪೊಲೀಸ್ ಕಾನ್ಸ್‌ಟೇಬಲ್ ವರ್ಗಾವಣೆ ಕುರಿತು ಗೃಹ ಸಚಿವರು ಇಲಾಖೆಗೆ ಸೋಮವಾರದಂದು ಕರ್ನಾಟಕ ರಾಜ್ಯದ ಡೈರಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಇವರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಟಿಪ್ಪಣಿ ಹೊರಡಿಸಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು, ”ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ಗಳ (ಪತಿ-ಪತ್ನಿ ಪ್ರಕರಣಗಳು) ಅಂತರ ಜಿಲ್ಲಾ ವರ್ಗಾವಣೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ ಬಿತ್ತರ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ 2024ರ ನೀತಿ ಸಂಹಿತಾ ಜಾರಿಯಾಗುವ ಮೊದಲೇ ಅರ್ಹರಿಗೆ ಅಂತರ ಜಿಲ್ಲಾ ವರ್ಗಾವಣೆ ಪ್ರಸ್ತಾವನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು” ಎಂದು ನಿರ್ದೇಶಿಸಿದ್ದಾರೆ.
