ಪಡುಬಿದ್ರಿ ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ದಂಪತಿ ತಾಮ್ರಕ್ಕೆ ಚಿನ್ನ ಲೇಪಿಸಿದ ನಕಲಿ ಚಿನ್ನದ ಆಭರಣಗಳನ್ನು ಪಡುಬಿದ್ರಿ ಆಸುಪಾಸಿನ ಮೂರು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು 29.94 ಲಕ್ಷ ರೂಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಪತಿ ರಾಜೀವ್ ನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜೀವ್ ಗೆ ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತನ ಪತ್ನಿ ಸ್ನೇಹಲತಾಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಡುಬಿದ್ರಿಯ ಸೌತ್ ಕೆನರಾ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಬ್ಯಾಂಕ್ ನ ಪಡುಬಿದ್ರಿ ಶಾಖೆಯಲ್ಲಿ 2022 ಸೆಪ್ಟೆಂಬರ್ 1 ರಿಂದ 2024 ರ ಫೆಬ್ರವರಿ 26 ರವರೆಗೆ ಈ ದಂಪತಿ 180 ಗ್ರಾಂ ನಕಲಿ ಚಿನ್ನವನ್ನಿಟ್ಟು 8.08 ಲಕ್ಷ ರೂಪಾಯಿ ಪಡೆದಿದ್ದರು. ಸ್ಥಳೀಯ ಬ್ಯಾಂಕ್ ಒಂದರಲ್ಲಿ ಅಡವಿಟ್ಟ ಚಿನ್ನಾಭರಣಗಳನ್ನು ಸಾಲ ಪಡೆದವರು ಬಿಡಿಸಿಕೊಳ್ಳದ ಕಾರಣ ಏಲಂ ಮೂಲಕ ಪರಭಾರೆ ಮಾಡಿತ್ತು. ಏಲಂನಲ್ಲಿ ಚಿನ್ನ ಪಡೆದವರೊಬ್ಬರು ಅದನ್ನು ಕರಗಿಸಿದ ಸಂದರ್ಭ ಚಿನ್ನಾಭರಣಗಳ ಒಳಭಾಗದಲ್ಲಿ ತಾಮ್ರದ ತಂತಿಗಳೇ ಕಂಡುಬಂದ ಕಾರಣ ಅವರು ಏಲಂ ನಡೆಸಿದ ಬ್ಯಾಂಕ್ ಗೆ ಮಾಹಿತಿ ನೀಡಿದ್ದರು. ಇದೇ ಆಧಾರದಲ್ಲಿ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿತ್ತು. ತೀವ್ರ ಪರಿಶೀಲನೆ ಬಳಿಕ ದಂಪತಿಯು ವಿವಿಧ ಬ್ಯಾಂಕ್ ಗಳಲ್ಲಿ ಇದೇ ರೀತಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಸಾಲ ಪಡೆದಿರುವ ಈ ದಂಪತಿ ಬಡ್ಡಿ ಕಟ್ಟಲು ಬ್ಯಾಂಕ್ ಗಳತ್ತ ಮುಖ ಮಾಡಿರಲಿಲ್ಲ.
