ವಿಕ್ರಂ ಬೇತಾಳನ ಕತೆಯಾದ ಕಾವೇರಿ ತಂತ್ರಾಂಶ 2.0

ರಾಜ್ಯ

ಸ್ವಾಮೀ, ರೆವೆನ್ಯೂ ಇಲಾಖೆಯಲ್ಲಿ ಹಣ ಪೋಲಾಗುತ್ತಿದೆ, ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶವು ಹಳೆಯದಾಗಿದೆ, ಈಗಾಗಲೇ ಸಾಕಷ್ಟು ಪಂಚರ್ ಗಳನ್ನು ಹಾಕಲಾಗಿದೆ

✍️. ಇಸ್ಮಾಯಿಲ್ ಸುನ್ನಾಲ್ ವಕೀಲರು

ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸ ಕತೆ ಹೇಳಲು ಶುರು ಮಾಡಿತು. “ರಾಜಾ ವಿಕ್ರಮ ,ಒಂದಾನೊಂದು ಕಾಲದಲ್ಲಿ ಕರ್ನಾಟಕ ಎನ್ನುವ ರಾಜ್ಯದಲ್ಲಿ ಅಶೋಕನೆಂಬ ರಾಜನ ಆಡಳಿತದಲ್ಲಿ ಪ್ರಜೆಗಳು ಸುಖ ಸಂತೋಷದಿಂದ್ದ ಬಾಳುತ್ತಿದ್ದರು. ಒಂದು ದಿನ ಅಲ್ಲಿಗೆ ಅದೇ ರಾಜ್ಯದ ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಗಳು  ಬಂದು ರಾಜನಲ್ಲಿ ನಮ್ಮದೊಂದು ಸಣ್ಣ ಬೇಡಿಕೆ ಇದೆ ಎಂದು ಭಿನ್ನವಿಸಿಕೊಂಡರು. ಮಹಾರಾಜನು ಅವರಲ್ಲಿ   ತಮ್ಮ ಕೋರಿಕೆಯನ್ನು ತಿಳಿಸುವಂತೆ ಆಜ್ಞಾಪಿಸಿದ. ಅದರಂತೆ ಅಧಿಕಾರಿಗಳು “ಸ್ವಾಮೀ, ನಮ್ಮ ರೆವೆನ್ಯೂ ಇಲಾಖೆಯಲ್ಲಿ ಹಣ ಪೋಲಾಗುತ್ತಿದೆ, ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶವು ಹಳೆಯದಾಗಿದೆ, ಅದಕ್ಕೆ ಈಗಾಗಲೇ ಸಾಕಷ್ಟು ಪಂಚರ್ ಗಳನ್ನು ಹಾಕಲಾಗಿದೆ, ಈ ತಂತ್ರಾಂಶವು ಇನ್ನಷ್ಟು ಪಂಚರ್ ಗಳನ್ನು ಸಹಿಕೊಳ್ಳದು, ಅದಕ್ಕಾಗಿ ನಾವೇ ಕಾವೇರಿ 2.0 ಎಂಬ ತಂತ್ರಾಂಶವನ್ನು ತಯಾರಿಸಿದ್ದೇವೆ, ಅದು ತುಂಬಾ ಜನ ಸ್ನೇಹಿಯಾಗಿದೆ, ಅದರಲ್ಲಿ ಮಧ್ಯವರ್ತಿಗಳ ಕಾಟ ತಪ್ಪುತ್ತದೆ, ಈ ತಂತ್ರಾಂಶದಲ್ಲಿ ನೋಂದಣಿ ಮಾಡುವುದರಿಂದ ಸರಕಾರದ ಖಜಾನೆಗೆ ನೇರ ಹಣ ವರ್ಗಾವಣೆ ಆಗುತ್ತದೆ, ಮಾತ್ರವಲ್ಲದೆ, ಅಪ್ಪಿ ತಪ್ಪಿ ಹಣ ವರ್ಗಾವಣೆಯಾದ ಬಳಿಕದಸ್ತಾವೇಜು ನೋಂದಣಿ ಮಾಡಲಾಗದಿದ್ದರೆ, ತಕ್ಷಣ ಹಣವನ್ನು ಪಾವತಿದಾರನಿಗೆ ಹಿಂದಿರುಗಿಸಬಹುದು, ಜನರು ನೋಂದಣಿ ಕಚೇರಿಯಲ್ಲಿ ಸಾಕಷ್ಟು ಕಾಲ ವ್ಯಯಿಸುವುದು ತಪ್ಪುತ್ತದೆ, ಸಿಟಿಝೆನ್ ಲಾಗಿನ್ ನಲ್ಲಿ ಜನರೇ ಸ್ವತಃ ದಸವೇಜನ್ನು ಸಲ್ಲಿಸಿ, ನಿಗದಿತ ದಿನಾಂಕದಂದು ಕಚೇರಿಗೆ ಹೋಗಿ ಕೇವಲ ಕೆಲವೇ ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಮುಗಿಸಿ ಮನೆಗೆ ಮರಳಬಹುದು” ಎಂಬಿತ್ಯಾದಿ ಹೇಳಿ, ರಾಜನಿಗೆ ಸಲ್ಲಬೇಕಾದ ಕಪ್ಪವನ್ನು ಸಲ್ಲಿಸುತ್ತಾರೆ. ಇದರಿನ ಸಂಪ್ರೀತನಾದ ರಾಜ ಅಶೋಕ ನೋಂದಣಿ ಇಲಾಖೆಯವರು ಕೇಳಿದ್ದ ಕಾವೇರಿ 2.0 ಗೆ ಅನುಮತಿಯನ್ನು ನೀಡುತ್ತಾನೆ. ಹಾಗೆಯೇ ಬಹಳಷ್ಟು ವಿಜೃಂಭಣೆಯೊಂದಿಗೆ ಕಾವೇರಿ ಹಸೆ ಮನೆ ಏರುತ್ತಾಳೆ. ಅದೃಷ್ಟವೋ, ದುರಾದೃಷ್ಟವೋ ಎಂಬಂತೆ ಮುಂದಿನ ಚುನಾವಣೆಯಲ್ಲಿ ರಾಜ ಅಶೋಕನ ಪಕ್ಷ ಸೋತು ಕೃಷ್ಣನ ರಾಜಾಡಳಿತ ಆರಂಭವಾಗುತ್ತದೆ. ತನಗೆ ಆಶ್ರಯ ನೀಡಿದ ರಾಜ ಸೋತುಹೋದ ನಂತರ ನೋಂದಣಿ ಇಲಾಖೆ  ತನ್ನ ನಿಜ ಬುದ್ದಿಯನ್ನು ತೋರಿಸಲು ಆರಂಭಿಸುತ್ತದೆ. ಹೊಸ ರಾಜನಿಗೆ ನೋಂದಣಿ ವಿಷಯದಲ್ಲಿ ಅಷ್ಟೇನೂ ಅನುಭವವಿಲ್ಲದ್ದನ್ನು ಸದುಪಯೋಗಪಡಿಸಿಕೊಡ ಇಲಾಖೆ, ರಾಜನ ಮುಂದೆ ಹಾಜರಾಗಿ ಕಾವೇರಿ 2.0 ಮಹತ್ವದ ಬಗ್ಗೆ, ಅದು ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಪುಂಖಾನುಪುಂಖ ಕತೆಗಳನ್ನು  ಹೇಳಿ, ರಾಜನ ಸಂಪೂರ್ಣ ನಂಬಿಕೆಯನ್ನು ಗಳಿಸಿ, ನೋಂದಣಿ ಇಲಾಖೆ ಹೇಳಿದಲ್ಲಿ ರಾಜ ತಾನು ಆತ್ಮಹತ್ಯೆ ಗೈಯಲೂ ತಯಾರಿರುವಂತೆ ರಾಜನನ್ನು ಅಣಿಯಾಗಿಸುತ್ತದೆ.  ನಂತರ ನೋಂದಣಿ ಇಲಾಖೆ ನೋಂದಣಿಗಾಗಿ ಬರುವ ಜನರನ್ನು ಅತಿ ಹೀನಾಯವಾಗಿ ನಡೆಸಿ ಕೊಳ್ಳಲು ಆರಂಭಿಸುತ್ತದೆ. ದಿನಕ್ಕೊಂದರಂತೆ ಪಂಚರ್ ಹಾಕುತ್ತ, ಹೊಸ ಹೊಸ ಅವತರಣೆಗಳನ್ನು ಪ್ರಜೆಗಳ ಮೇಲೆ ಹೇರುತ್ತಾ, ತನಗೆ ತಾನೇ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡುತ್ತಾ, ಆ ಪ್ರಶಸ್ತಿ ಪಡೆಯುವ ಛಾಯಾಚಿತ್ರಗಳನ್ನು ತಮ್ಮ ಇಲಾಖೆಯ ಎಲ್ಲಾನೌಕರರು ಸದ್ರಿ ಛಾಯಾಚಿತ್ರಗಳನ್ನು ತಮ್ಮ ವಾಸ್ಟ್ಸಪ್ ಸ್ಟೇಟಸ್ ನಲ್ಲಿ ತಪ್ಪದೆ ಹಾಕುವಂತೆ ಪ್ರತಿಬಂದಿರುತ್ತಾರೆ. ಈ ರೀತಿ ನೋಂದಣಿ ಇಲಾಖೆಯ ಕಾರುಬಾರುಗಳನ್ನು ಯಾರು ತಡೆಯದಂತೆ, ಅವರೇನೇ ಮಾಡಿದರು ಕೇಳದಂತಹ ಒಂದು ವ್ಯವಸ್ಥೆ ಜ್ಯಾರಿಗೆ ಬರುತ್ತದೆ.

ಇಷ್ಟು ಹೇಳಿ ಬೇತಾಳ ವಿಕ್ರಮನ ಇನ್ನೊಂದು ಹೆಗಲಿಗೆ ತನ್ನ ತಲೆಯನ್ನು ಬದಲಾಯಿಸಿ, “ವಿಕ್ರಮ , ಕೇಳಿಸಿಕೊಳ್ಳುತ್ತಿರುವೆ ತಾನೇ? ನಾನೊಬ್ಬನೇ ಮಾತನಾಡಿದರೆ ಹೇಗೆ? ಕತೆ ಹೇಳುತ್ತಿರುವೆ. ಕೊನೆಯ ಪಕ್ಷ ಹೂಮ್ಮ್ ಹೂಮ್ಮ್.. ಅಂತಾದರೂ ಹೇಳಬಾರದೇ?” ಎಂದಿತು.

ವಿಕ್ರಮ, ಕೇಳಿಸಿಕೊಳ್ಳುತ್ತಿರುವೆ ಎನ್ನುವಂತೆ ತಲೆಯಾಡಿಸಿ, ಸಣ್ಣಗೆ ನಗುತ್ತಾ ಮುಂದೆ ನಡೆಯತೊಡಗಿದ.

ಬೇತಾಳಕ್ಕೆ ವಿಕ್ರಮನ ಬಾಯಿಯಿಂದ ಅಷ್ಟು ಸುಲಭದಲ್ಲಿ ಮಾತು ಹೊರಡಿಸಲಾಗದು ಎನ್ನುವುದು ಈ ಮೊದಲೇ ತಿಳಿದಿದ್ದರಿಂದ “ಸರಿ  ಮಾತನಾಡಲು ಇಷ್ಟವಿಲ್ಲದಿದ್ದಲ್ಲಿ ಬೇಡ, ಕತೆಯನ್ನಾದರೂ ಪೂರ್ತಿಯಾಗಿ ಕೇಳಿಸಿಕೋ” ಎಂದುಹೇಳಿ ತಾನು ಹೇಳುತ್ತಿದ್ದ ಕತೆಯನ್ನು ಮುಂದುವರಿಸಿತು.

“ಕಾವೇರಿ 2.0 ಕಾರ್ಯ ರೂಪಕ್ಕೆ ಬಂದ ನಂತರ ತನ್ನದೇ ಇಲಾಖೆಯಲ್ಲಿ ಟೆಂಪರರಿ ಆಗಿ ಕೆಲಸ ಮಾಡುತ್ತಿದ್ದ, ನೌಕರರ ಕೆಲಸಕ್ಕೂ ಕುತ್ತು ಬರುವಂತೆ ಮಾಡಲಾಯಿತು, ಅವರೆಲ್ಲ ಕೆಲಸ ಬಿಡುವಂತೆ ಒತ್ತಾಯಿಸಲಾಯಿತು, ತಾಂತ್ರಿಕ ವಿಶೇಷ ಪರಿಣತಿಯನ್ನು ಪಡೆದಿಲ್ಲದ ಉಪನೋಂದಣಿ ಅಧಿಕಾರಿಗಳು ಹಗಲೂ ರಾತ್ರಿ ವ್ಯಯಿಸಿ ದಸ್ತಾವೇಜುಗಳನ್ನು ಪರಿಶೀಲಿಸಬೇಕೆಂದೂ ಫರ್ಮಾನು ಹೊರಡಿಸಲಾಯಿತು. ಇದಕ್ಕೆ ಒಪ್ಪದ ಉಪನೋಂದಣಾಧಿಕಾರಿಗಳು ಮನೆಗೆ ತೆರಳುವಂತೆ, ಕಾವೇರಿ 2.0 ಯ ನ್ಯೂನತೆಗಳ ಬಗ್ಗೆ ಯಾವುದೇ ಉಪನೋಂದಣಾಧಿಕಾರಿಗಳಾಗಲೀ, ಇತರ ನೌಕರರಾಗಲೀ ಮಾತನಾಡದಂತೆ ನಿರ್ಬಂಧಿಸಲಾಯಿತು. ಹಗಲಿರುಳು ದಸ್ತಾವೇಜು ಪರಿಶೀಲನೆ ಮಾಡಲು ಸಾಧ್ಯವಾಗದ ಉಪನೋಂದಣಿ ಅಧಿಕಾರಿಗಳು, ಕೆಲಸಕ್ಕೆ ರಾಜೀನಾಮೆ ನೀಡಿ ಮನೆಗೆ ತೆರಳುವಂತೆ ಆಜ್ಞಾಪಿಸಲಾಯಿತು.

ಈ ರೀತಿ  ನೋಂದಣಿ ಇಲಾಖೆಯನ್ನು ತಮ್ಮ ಕೈಕೆಳಗಿನ ಸಾಮಂತರಾಗಿ ಮಾಡಬೇಕೆಂದೂ ಹಿರಿಯ ಅಧಿಕಾರಿಗಳು ಸಂಚು ಹೂಡಿದರು.  ಇದೇ ಸಮಯದಲ್ಲಿ ತನ್ನದೇ ನೋಂದಣಿ ಇಲಾಖೆಯನ್ನು ಗುರಿಯಾಗಿಸಿ ಕೆಲವೊಂದು ಹ್ಯಾಕರ್ಸ್ ಗಳು ಜನರ ಖಾತೆಗೆ ಕಣ್ಣ ಹಾಕಲು ಆರಂಬಿಸಿದ್ದರು. ಈ ಬಗ್ಗೆ ಸೂಕ್ತ ಕ್ರಿಮಿನಲ್ ಪ್ರಕರಣ ಜರುಗಿಸಿ ಹ್ಯಾಕರ್ಸ್ ಗಳನ್ನು ಹೆಡೆಮುರಿ ಕಟ್ಟಬೇಕಾಗಿದ್ದ ಇಲಾಖೆ, ಅದಕ್ಕೆ ಬದಲಾಗಿ ಒಂದು ಪತ್ರಿಕಾ ಹೆ ಹೇಳಿಕೆಯನ್ನು ನೀಡಿ, ಜನರ ಖಾತೆಗೆ ಕನ್ನ ಹಾಕಿರುವ ಹ್ಯಾಕರ್ಸ್ ಗಳು ಡೇಟಾವನ್ನು ಕದ್ದಿದ್ದು, ಇಲಾಖೆಯ ಕಾವೇರಿ 2.0 ದಿಂದ ಅಲ್ಲ ಎಂದು ಹೇಳಿ ಸುಮ್ಮನಾಯಿತು.

ಇಷ್ಟು ಹೇಳಿ ಬೇತಾಳ, ವಿಕ್ರಮನೆಡೆ ತಿರುಗಿ, “ನೋಡಿದೆಯಾ ವಿಕ್ರಮ … ಇನ್ನೂ ಡೆವಲಪ್ಮೆಂಟ್ ಹಂತದಲ್ಲಿದ್ದ ಕಾವೇರಿ 2.0 ಗೆ ಅನುಮತಿ ನೀಡಿದ್ದು, ಅಶೋಕ ರಾಜನ ತಪ್ಪಲ್ಲವೇ? ಅಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಅದಾದ ಕೆಲವೇ ಸಮಯದಲ್ಲಿ ಅಧಿಕಾರಕ್ಕೆ ಬಂದ ಕೃಷ್ಣ ರಾಜ, ತನ್ನ ವಿರೋಧಿ ರಾಜ ಜಾರಿಗೆ ತಂದಿದ್ದ ಕಾವೇರಿ 2.0 ತಂತ್ರಾಂಶವನ್ನು ಸೂಕ್ತ ಪರಿಶೀಲನೆಗೆ ಒಳಪಡಿಸದೆ, ಕೇವಲ ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾತನ್ನು ನಂಬಿ, ಅವರಿಗೆ ಸಂಪೂರ್ಣ ಸ್ವಾಮ್ಯತೆಯನ್ನು ನೀಡಿದ್ದು ಸರಿಯಾ?  ರಾಜ್ಯದಲ್ಲಿ ಎಲ್ಲವನ್ನೂ ಸಹಿಸಿ ಕಷ್ಟ ಪಡುತ್ತಿರುವ ಜನಗಳಿಗೆ ಸುಂದರ ಕನಸನ್ನು ತೋರಿಸಿ, ದಸ್ತಾವೇಜು ಬರಹಗಾರರು, ವಕೀಲರು ಮಾತ್ರವಲ್ಲದೆ, ಕಂಪ್ಯೂಟರ್ ಇಂಜಿನಿಯರ್ ಗಳನ್ನು ಮಧ್ಯವರ್ತಿಗಳಾಗುವಂತೆ ಮಾಡಿದ್ದು ತಪ್ಪಲ್ಲವೇ? ಈ ಮಧ್ಯೆ ನಾಡಿನ ಪ್ರಜೆಗಳಿಗೆ ಪೀಕಲಾಟ ಶುರುವಾಯಿತು. ನಮ್ಮ ಬದುಕನ್ನು ಹಾಳು ಮಾಡಿದ ಕಾವೇರಿ 2.0 ಯನ್ನೇ ನಾವು ಪೂಜಿಸುವುದಾದರೂ ಏಕೆ? ನಮ್ಮ ದಸ್ತಾವೇಜುಗಳು ನೋಂದಾಯಿಸಲು ಈಗಾಗಲೇ ಇರುವ ನೂರೊಂದು ಸಮಸ್ಯೆಗಳ ಮಧ್ಯೆ ಈ ಕಾವೇರಿ ಇನ್ನಷ್ಟು ಸಮಸ್ಯೆಗಳನ್ನು ತಂದು ಹಾಕಿತಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸತೊಡಗಿದರು. ಆದರೆ ಸರ್ವಾಧಿಕಾರಿಯಾಗಿದ್ದ ನೋಂದಣಿ ಇಲಾಖೆ ಜನರ  ಯಾವ ಮಾತಿಗೂ ಸೊಪ್ಪು ಹಾಕಲಿಲ್ಲ. ರಾಜ್ಯದಲ್ಲಿ ಕಾವೇರಿ 2.0 ಸರಿಯಾಗಿ ಕಾರ್ಯ ನಿರ್ವಹಿಸಿದರೂ, ನಿರ್ವಹಿಸದಿದ್ದರೂ, ಯಾರೂ ಈ ಬಗ್ಗೆ ಪ್ರಶ್ನೆ ಮಾಡಬಾರದು, ಅದು ಸರಿಯಾಗುವ ತನಕ ಕಾದು ನೋಂದಣಿ ಮಾಡಿಸಿಕೊಳ್ಳತಕ್ಕದ್ದು, ಈ ಬಗ್ಗೆ ಯಾವುದೇ ಜಿಲ್ಲೆಯಲ್ಲೂ ಪರಿಶೀಲನಾ ಸಭೆ ನಡೆಸಬಾರದು ಎಂಬ ಧೋರಣೆಯನ್ನು ತನ್ನದಾಗಿಸಿಕೊಂಡಿತು.  ಆದ್ದರಿಂದ ರಾಜನ ಬೊಕ್ಕಸಕ್ಕೆ ಹರಿದು ಬರುತ್ತಿದ್ದ ಹಣದ ಮೊತ್ತ ಕಡಿಮೆಯಾಗತೊಡಗಿತು. ಇದರಿಂದ ಕೋಪಗೊಂಡ ರಾಜ, ಜಮೀನುಗಳ ಗೈಡ್ಲೈನ್ಸ್ ವ್ಯಾಲ್ಯೂ ವನ್ನು 30  ರಿಂದ 300% ಏರಿಸಿದ, ಮಾತ್ರವಲ್ಲದೆ ಛಾಪಾಕಾಗದದಲ್ಲಿ ಹಣವನ್ನು ಗಳಿಸುವುದಕ್ಕಾಗಿ ಹೊಸ ಹೊಸ ಯೋಜನೆಯನ್ನು ಜ್ಯಾರಿಗೆ ತಂದ. 20ರೂಪಾಯಿಯ ಪ್ರಮಾಣ ಪ್ರಕ್ಕೆ 100 ರೂ, ಮಿನಿಮಂ ಸ್ಟ್ಯಾಂಪ್ ವ್ಯಾಲ್ಯೂ 500 ಎಂದು ಮಾತ್ರವಲ್ಲದೆ ಕುಟುಂಬದ ನಡುವೆ ಆಗುತ್ತಿದ್ದ ಪಾಲುಪಟ್ಟಿಗೂ ಸಾಕಷ್ಟು ಶುಲ್ಕ ವಿಧಿಸಿದ.

ರಾಜಾ ವಿಕ್ರಮ , ಈಗ ನೀನೇ ಹೇಳು. ಹಳೆಯ ರಾಜ ಹೋಗೋ ಹೊಸ ರಾಜ ಬಂದಾಗ ಹಿಂದಿನ ರಾಜನ ಕಾಲದಲ್ಲಿ ಅನವಶ್ಯಕ ಕಾವೇರಿ 2.0 ಮುಂದುವರಿಸಿದ್ದು ಸರಿಯಾ? ಇಡೀ ನೋಂದಣಿ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಿ ಜನರಿಗೆ ಕಷ್ಟ ನೀಡುತ್ತಿರುವ ಇಲಾಖೆಯ ಕ್ರಮವನ್ನು ಜನರು ಪ್ರಶ್ನಿಸುವುದು ತಪ್ಪೇ? ತನ್ನ ಪೂರ್ವಜ ಕಪ್ಪ ಪಡೆದಿದ್ದು ಗೊತ್ತಿದ್ದೂ ಈಗಿನ ರಾಜ ಕಾವೇರಿ 2.0 ಪ್ರಕ್ರಿಯೆಯ ಬಗ್ಗೆ ಜನರ ಸಮಸ್ಯೆ ಹಾಗೂ ಜನರ ಅಭಿಪ್ರಾಯಗಳನ್ನು ಕೇಳದೆ, ಕೇವಲ ನೋಂದಣಿ ಇಲಾಖೆಯ ಮಾತನ್ನೇ ಕೇಳಿ, ಅದನ್ನು ನಂಬಿ, ಅವರು ಹೇಳಿದಂತೆ ರಾಜ ತನ್ನ ಒಡ್ಡೋಲಗದಲ್ಲಿ ಹೇಳಿಕೆ ನೀಡುತ್ತಿರುವುದು ತಪ್ಪಲ್ಲವೇ?

ಇಲ್ಲಿ  ರಾಜನದ್ದು ಉದ್ಧಟತನವೇ ಅಥವಾ ಇಲಾಖೆಯದ್ದೇ? ಈಗ ಇದೊಂದು ಬಿಡಿಸಲಾಗದ ಸಮಸ್ಯೆಯಾಗಿ ಕುಳಿತಿದೆ. ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸದಿದ್ದರೆ ಮುಂದೆ ಆ ರಾಜ್ಯದಲ್ಲಿ ಅರಾಜಕತೆ ತಲೆದೋರಿಬಿಡಬಹುದು!”

ಬೇತಾಳ ವಿಕ್ರಮನ ಇನ್ನೊಂದು ಹೆಗಲ ಮೇಲೆ ತನ್ನ ತಲೆ ಬದಲಾಯಿಸಿ, “ರಾಜಾ, ನೀನು ಬಹಳ ಬುದ್ದಿವಂತ ಎಂದು ಕೇಳಿದ್ದೇನೆ. ನಿಮ್ಮ ರಾಜ್ಯದ ಜನರ ಸಮಸ್ಯೆಗಳನ್ನು ಅತ್ಯಂತ ಸುಲಭದಲ್ಲಿ ನಿವಾರಿಸುತ್ತಿರುವೆ ಎನ್ನುವುದನ್ನೂ ಕೇಳಿದ್ದೇನೆ. ಆ ರಾಜ್ಯದ ರಾಜ ಅಥವಾ ಆ ರಾಜ್ಯದ ಒಬ್ಬ ಪ್ರಜೆಯಲ್ಲದೇ ಮೂರನೇ ವ್ಯಕ್ತಿಯಾಗಿ ಇಂತಹದ್ದೊಂದು ಸಮಸ್ಯೆಗೆ ನಿನ್ನ ಅಭಿಪ್ರಾಯವೇನು?  ನೀನು ಈ ಸಮಸ್ಯೆಗೆ ಸಮಾಧಾನಕರ ಉತ್ತರ ನೀಡಬೇಕು.” ಎಂದಿತು.

ಬೇತಾಳನ ಪ್ರಶ್ನೆ ಕೇಳಿಯೂ,ವಿಕ್ರಮಾದಿತ್ಯ ಏನೊಂದೂ ಮಾತನಾಡದೆ ಮೌನವಾಗಿ ನಡೆಯುತ್ತಲೇ ಇದ್ದ. ಬೆನ್ನು ಹತ್ತಿ ಕುಳಿತ ಬೇತಾಳ ಪಟ್ಟು ಬಿಡದೆ ಕೋಪಗೊಂಡಂತೆ ನಟಿಸುತ್ತಾ ವಿಕ್ರಮನೆಡೆ ತಿರುಗಿ, “ರಾಜಾ, ನನ್ನ ಪ್ರಶ್ನೆಗೆ ನೀನು ಉತ್ತರ ನೀಡಿಲ್ಲ. ಉತ್ತರ ತಿಳಿದಿಲ್ಲವೇ? ಅಥವಾ ತಿಳಿದೂ ಹೇಳುತ್ತಿಲ್ಲವೆ? ಉತ್ತರ ತಿಳಿಯದಿದ್ದಲ್ಲಿ ಸೋತೆನೆಂದು ಒಪ್ಪಿಕೊ. ತಿಳಿದೂ ನೀನು ಹೇಳದಿದ್ದಲ್ಲಿ ನಿನ್ನ ತಲೆ ಸಿಡಿದು ನೂರು ಹೋಳಾಗುವುದು ಜಾಗ್ರತೆ.“ಎಂದು ಬೆದರಿಸಿತು.

ಆಗ ರಾಜಾ ವಿಕ್ರಮನು ತನ್ನ ಮೌನ ಮುರಿದು,”ಎಲೈ ಬೇತಾಳವೆ,ನಿನ್ನ ಪ್ರಶ್ನೆಗಳು ಉತ್ತರಿಸಲಾರದಷ್ಟು ಕಷ್ಟಕರವಾದದ್ದೇನೂ ಅಲ್ಲ. ನನ್ನ ತಲೆ ನೂರು ಹೋಳಾಗಲಿದೆ ಎಂಬ ಭಯದಿಂದ ಅಲ್ಲ, ಒಬ್ಬ ರಾಜನಾಗಿ ನ್ಯಾಯಯುತವಾದ ಉತ್ತರ ನೀಡುವುದು ಧರ್ಮವೆಂದು ತಿಳಿದು ಉತ್ತರ ಕೊಡುತ್ತೇನೆ ಕೇಳು“ಎಂದು ತನ್ನ ಅಭಿಪ್ರಾಯವನ್ನು ಹೇಳತೊಡಗಿದನು.

“ಒಬ್ಬ ರೆವೆನ್ಯೂ ರಾಜನಾಗಿ  ಆತನಿಗೆ ಸರಿ ಕಂಡ ನಿರ್ಧಾರವನ್ನು ಆತ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅಲ್ಲದೆ ಆತ  ಹಿಂದಿನ ರಾಜನ ಅನುಯಾಯಿಯೂ ಆಗಿದ್ದು, ರಾಜರುಗಳು ಕಪ್ಪ ಪಡೆದುಕೊಳ್ಳುವುದು ತಪ್ಪಲ್ಲವೆಂಬ ಅಭಿಪ್ರಾಯವನ್ನೂ, ಹಿಂದಿನ ರಾಜ ಪಡೆದಿರುವಂತೆ ತಾನೂ ಕಪ್ಪ ಪಡೆಯುವನೆಂದು ಆತನಿಗೆ ತಿಳಿದಿತ್ತು. ತನ್ನ ರಾಜ್ಯದ ಪ್ರಜೆಗಳೆಲ್ಲಾ ನನ್ನನ್ನು ನೆನೆಯಲಿ, ಹಾಡಿ ಹೊಗಳಲಿ ಅಥವಾ ಹಿಡಿ ಶಾಪವಾದರೂ ಹಾಕಲಿ ಮುಂದಿನ ಐದು ವರ್ಷ ನಾನೇ ರಾಜ ನೆಂಬ ಅಹಂ ಆತನಲ್ಲಿ ನೆಲೆಸಿತ್ತು. ಇಡೀ ರಾಜ್ಯದ ಕಂದಾಯ ಇಲಾಖೆ ತನ್ನ ಕೈಯಲ್ಲಿರುವಾಗ, ಕಂದಾಯ ಇಲಾಖಾ ಅಧಿಕಾರಿಗಳು ನೀಡುವ ಕಪ್ಪಕ್ಕೆ ಪ್ರತಿಯಾಗಿ ಅವರ ಮಾತನ್ನು ಕೇಳುವುದು ತನ್ನ ಧರ್ಮವೆಂದು ಆತನ ಭಾವನೆಯಾಗಿತ್ತು.

ಆದರೆ ಅದೇ ರೀತಿ ಪ್ರಜೆಗಳೆಲ್ಲರೂ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಪರಾಮರ್ಶಿಸಿ, ಕಾವೇರಿ 2.0 ಯ ಸಾಧಕ ಬಾಧಕಗಳ ಪರಿಶೀಲನೆ ನಡೆಸುವುದು ರಾಜನಾಗಿ ಆತನ ಧರ್ಮ.  ಮಾತ್ರವಲ್ಲದೆ ಕೇವಲ ಇಲಾಖೆಯ ಹಿರಿಯ ಅಧಿಕಾರಿಗಳ ಮಾಅತನ್ನೇ ಕೇಳದೆ, ನೋಂದಣಿಗಾಗಿ ಬರುವ ಜನರು ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಡಿರುವ ವಕೀಲಾರಾಧಿಯವರ ಅಭಿಪ್ರಾಯವನ್ನು ಪಡೆದು, ಕಾವೇರಿ 2.0 ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಇಡುವುದು, ಒಂದು ವೇಳೆ ಕಾವೇರಿ 2.0 ತಂತ್ರಾಂಶದ ನ್ಯೂನತೆಗಳನ್ನು ಇ ಇಲಾಖೆಯ ಹಿರಿಯ ಅಧಿಕಾರಿಗಳು ಒಂದು ಕಾಲಮಿತಿಯೊಳಗೆ ಸರಿಪಡಿಸದಿದ್ದಲ್ಲಿ, ತಂತ್ರಾಂಶ ವಿಚಾರದಲ್ಲಿ ಪರಿಣತಿ ಹೊಂದಿರುವ ಕಂಪೆನಿಗಳ ಮೂಲಕ ಹೊಸ ಸುಲಭ ಹಾಗೂ ಪರಿಣಾಮಕಾರಿ ತತ್ರಾಂಶವನ್ನು ರೂಪಿಸಿ ಜನರಿಗೆ ನೆರವಾಗುವುದು ರಾಜನ ಕರ್ತವ್ಯ ಎಂದು ಉತ್ತರಿಸಿ ಬೇತಾಳನ ಕಡೆ ತಿರುಗಿ ಗೆದ್ದೆನೆನ್ನುವಂತೆ ಮೀಸೆ ತಿರುವಿ ಮುಗುಳ್ನಕ್ಕ.

ಜಟಿಲವಾದ ಸಮಸ್ಯೆಗೆ ಅತ್ಯಂತ ಸುಲಭವಾಗಿ ಸಮರ್ಥ ಉತ್ತರ ನೀಡಿದ ವಿಕ್ರಮನ ಜಾಣ್ಮೆಗೆ ಮೆಚ್ಚುಗೆ ಸೂಚಿಸುತ್ತಾ ಬೇತಾಳ: “ಭಲೇ ವಿಕ್ರಮ  ಭಲೇ, ಅದ್ಭುತವಾದ ಉತ್ತರ ನೀಡಿದೆ. ನಿಜಕ್ಕೂ ನಿನ್ನ ಜಾಣ್ಮೆಗೆ ಮೆಚ್ಚಿದೆ. ಆದರೆ ನೀನು ನಿನ್ನ ಮೌನ ಮೀರುವ ಮೂಲಕ ನಮ್ಮ ಕರಾರನ್ನು ಮುರಿದುಬಿಟ್ಟೆ. ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹ್ ಹಹ್ಹಾ… ನಿನಗೆನಾನು ಸಿಕ್ಕಲಾರೆ, ನಾನಿದೋ ಹೊರಟೆ” ಎನ್ನುತ್ತಾ ವಿಕ್ರಮನ ಹೆಗಲ ಮೇಲಿನಿಂದ ನೇರವಾಗಿ ಮೇಲಕ್ಕೇರಿ ಗಾಳಿಯಲ್ಲಿ ತೇಲುತ್ತಾ ತಾನು ಮೊದಲಿದ್ದ ಮರದ ಮೇಲೆ ಹೋಗಿ ತಲೆ ಕೆಳಗಾಗಿ ನೇತಾಡುತ್ತಾ ಟಿಪ್ಪು ಟಿಪ್ಪು ಬರುಸಾ ಪಾನೀ….ಎಂದು ತನಗಿಷ್ಟವಾದ ಹಿಂದಿ ಹಾಡೊಂದನ್ನು ಗುನುಗುತ್ತಾ ಜೀಕಾಡತೊಡಗಿತು.