ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ರಾಮಯ್ಯ ಹೆಗ್ಡೆ ಎಂಬವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಏಳು ಜನರ ಮೇಲೆ ಎಫ್ ಐ ಆರ್ ದಾಖಲಾದ ಘಟನೆ ವರದಿಯಾಗಿದೆ.
ಇಂದು (9-03-2024) ತನ್ನ ಸಹೋದ್ಯೋಗಿ ಪೊಲೀಸ್ ಸಿಬ್ಬಂದಿ ಶಾಂತಕುಮಾರ ಜೊತೆ ರಾಮಯ್ಯ ಹೆಗ್ಡೆ ರೌಂಡ್ಸ್ ತೆರಳಿದ್ದ ಸಂದರ್ಭ ಮೊಬೈಲಿಗೆ ಕರೆ ಮಾಡಿದ ಸಾರ್ವಜನಿಕರೊಬ್ಬರು ಬೆಳ್ತಂಗಡಿ ಕಾಫಿನಡ್ಕ ಎಂಬಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಸೋಡಾ ಬಾಟ್ಲಿ ಎಸೆದು ತೊಂದರೆ ಪಡಿಸಿರುವ ಬಗ್ಗೆ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಸಿಬ್ಬಂದಿ ಜೊತೆ ತೆರಳಿದ ರಾಮಯ್ಯ ಗೌಡರು ರಸ್ತೆಯಲ್ಲಿ ಸೋಡಾ ಬಾಟ್ಲಿ ಪುಡಿಪುಡಿಯಾಗಿ ಬಿದ್ದುಕೊಂಡಿದ್ದು, ಸ್ಥಳದಲ್ಲಿದ್ದ ಸೋಡಾ ಬಾಟ್ಲಿಗಳ ತುಂಡುಗಳನ್ನು ಬದಿಗೆ ಸರಿಸಿದ್ದರು. ನಂತರ ರೌಂಡ್ಸ್ ಗೆಂದು ತೆಂಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ತೆರಳಿದಾಗ ಗುರುವಾಯನಕೆರೆ-ನಾರಾವಿ ರಸ್ತೆಯ ಬದಿ 6-7 ಜನ ನಿಂತುಕೊಂಡಿದ್ದು ಅಲ್ಲಿಯೂ ರಸ್ತೆಗೆ ಸೋಡಾ ಬಾಟ್ಲಿ ಎಸೆದಿದ್ದರು.
ಈ ಸಂಬಂಧ ರಾಮಯ್ಯ ಹೆಗ್ಡೆ ಅಲ್ಲಿ ನಿಂತಿದ್ದ ವ್ಯಕ್ತಿಗಳಲ್ಲಿ ಯಾಕೆ ರಸ್ತೆಗೆ ಸೋಡಾ ಬಾಟ್ಲಿ ಎಸೆದು ತೊಂದರೆ ನೀಡುತ್ತೀರಿ ಎಂದು ಕೇಳಿದಾಗ ಸ್ಥಳದಲ್ಲಿದ್ದ ಮಹೇಶ್ ಎಂಬಾತ ಪೊಲೀಸ್ ಎಂದು ನೋಡದೆ ಏಕವಚನದಿಂದ ಅಶ್ಲೀಲವಾಗಿ ಬೈದು ಇವತ್ತು ಮಹಾಶಿವರಾತ್ರಿ, ನಾವು ಏನು ಬೇಕಾದರೂ ಮಾಡುತ್ತೇವೆ, ಕೇಳಲು ನೀನ್ಯಾರು ಎಂದು ತನ್ನ ಕೈಯಲ್ಲಿದ್ದ ಸೋಡಾ ಬಾಟ್ಲಿ ಯನ್ನು ಪೊಲೀಸ್ ಸಿಬ್ಬಂದಿಯ ಗುರಿಯಾಗಿಸಿ ಎಸೆದಾಗ ರಾಮಯ್ಯ ಹೆಗ್ಡೆ ಪವಾಡಸದೃಶವಾಗಿ ಪಾರಾಗಿದ್ದರು. ಆಗ ಆತನ ಜೊತೆಗಿದ್ದ ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೊಲೀಸ್ ರಾಮಯ್ಯ ಹೆಗ್ಡೆಯ ಕಾಲರ್ ಹಿಡಿದು ಹಲ್ಲೆಗೆ ಮುಂದಾಗಿದ್ದು, ನೆಲಕ್ಕೆ ದೂಡಿ ಕಾಲಿನಿಂದ ತುಳಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಇದರಿಂದ ಎಡ ಕಾಲಿಗೆ ಹಾಗೂ ಬೆನ್ನಿಗೆ ಗಾಯಗೊಂಡಿದ್ದು, ಕೂಡಲೇ ರಾಮಯ್ಯ ಹೆಗ್ಡೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಮಹೇಶ್, ಸುರೇಶ್, ಅರುಣ್ ಹಾಗೂ ಇತರ ನಾಲ್ವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 504,332,353,307,507,149 ಪ್ರಕಾರ ಪ್ರಕರಣ ದಾಖಲಾಗಿದೆ.
