ಕಪ್ಪು ಬಣ್ಣಕ್ಕೆ ತಿರುಗಿ ನಾರುತ್ತಿದ್ದ ಪಲ್ಗುಣಿಯ ಕವಲು ತೋಕೂರು ಹಳ್ಳದಲ್ಲಿ (mrpl, hpcl ಭಾಗದಲ್ಲಿ) ಇವತ್ತು ನೀರಿನ ಬಣ್ಣ ಕೆಂಪು ಮಿಶ್ರಿತ ಗೊಂಡಿದೆ, ಪೆಟ್ರೋಲಿಯಂನ ಪದರ ನೀರಿನ ಮೇಲ್ಭಾಗದಲ್ಲಿ ಎದ್ದು ಕಾಣುತ್ತಿದೆ. ಜನ ವಸತಿ ಭಾಗದ ತೆರೆದ ಚರಂಡಿಗಳಿಂದ ನೀರು ಹರಿದರೆ (ಈ ಭಾಗದಲ್ಲಿ ಜನವಸತಿಯೂ ಇಲ್ಲ) ನೀರು ಈ ಬಣ್ಣಕ್ಕೆ ತಿರುಗಲು ಸಾಧ್ಯವಿಲ್ಲ.
ಪಲ್ಗುಣಿಯ ಮೇಲೆ ಮಾರಕ ಮಾಲಿನ್ಯ ನಡೆಯುತ್ತಿರುವುದು ಬಹಿರಂಗಗೊಂಡಿದ್ದರೂ, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನ ವಹಿಸಿರುವುದು ಖಂಡನೀಯ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಇನ್ನಾದರು ಮೌನ ಮುರಿಯಲಿ
ಇಷ್ಟಲ್ಲದೆ, mrpl ನಿಂದ ಪಲ್ಗುಣಿಯ ಮೇಲಾಗುತ್ತಿರುವ ಮಾರಕ ಕೈಗಾರಿಕಾ ಮಾಲಿನ್ಯ ಸ್ಥಳೀಯರು/ ಹೋರಾಟ ಸಮಿತಿ ಮೂಲಕ ನಾಗರಿಕ ಸಮಾಜಕ್ಕೆ ತಿಳಿಯದಂತೆ ಮಾಡಲು ಕಂಪೆನಿ ಅಡ್ಡ ದಾರಿ ಹಿಡಿದಿದೆ.

ಕಂಪೆನಿಯ ಸುತ್ತ ಇರುವ ತೋಕೂರು ಹಳ್ಳದ ಸಮೀಪ ನಾಗರಿಕರು (ಹೋರಾಟ ಸಮಿತಿ, ಮೀಡಿಯಾಗಳು) ಬರುವುದು, ಮಾಲಿನ್ಯವನ್ನು ಪತ್ತೆ ಹಚ್ಚುವುದು, ಫೋಟೊ, ವೀಡಿಯೊ, ನೀರಿನ ಸ್ಯಾಂಪಲ್ ಪಡೆಯುವುದನ್ನು ತಡೆಯಲು ತನ್ನ ವ್ಯಾಪ್ತಿಯ ಹೊರ ಭಾಗದ ಪ್ರದೇಶವನ್ನೂ ನಿಷೇಧಿತ/ನಿರ್ಬಂಧಿತ ಪ್ರದೇಶ ಎಂದು ಆದೇಶ ಹೊರಡಿಸಲು ಯತ್ನಿಸುತ್ತಿದೆ. ಅದಕ್ಕಾಗಿ ಜಿಲ್ಲಾಡಳಿತದಿಂದ ದಿಢೀರನೆ ಸ್ಥಳೀಯ ಪಂಚಾಯತ್ ಗಳಿಗೆ ನೋಟೀಸು ಬಂದಿದೆ.
ಮಾಲಿನ್ಯ ನದಿಗೆ ಹರಿಯದಂತೆ ಕ್ರಮ ಕೈಗೊಳ್ಳುವ ಬದಲು, ಮಾಲಿನ್ಯ ಜನರ ಕಣ್ಣಿಗೆ ಕಾಣದಂತೆ ಮಾಡಲು ಅಕ್ರಮ ಮಾರ್ಗದಲ್ಲಿ ಚಲಿಸಲು ಯತ್ನಿಸುವ mrpl ಕಂಪೆನಿ ಹಾಗೂ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಜಿಲ್ಲಾಡಳಿತದ ನಡೆಯನ್ನು ನಾಗರಿಕ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ. ಎರಡು ವಾರಗಳಿಂದ ಫಲ್ಗುಣಿಯ ಮಾಲಿನ್ಯದ ಕುರಿತು ದೊಡ್ಡ ಸುದ್ದಿಯಾಗುತ್ತಿದ್ದರೂ ಅತ್ತ ತಿರುಗಿ ನೋಡದ ಜಿಲ್ಲಾಧಿಕಾರಿಗಳು, ಕಂಪೆನಿಯ ಪರವಾಗಿ ನೋಟೀಸು ಹೊರಡಿಸಲು ಆತುರರಾಗಿರುವುದು ಜಿಲ್ಲಾಧಿಕಾರಿಗಳಿಗೆ ಪರಿಸರ, ನದಿ ನೀರು, ಜನರ ಆರೋಗ್ಯಕ್ಕಿಂತ mrpl ಸಹಿತ ಕೈಗಾರಿಕೆಗಳ ಅಕ್ರಮಗಳನ್ನು ಮುಚ್ಚಿ ಹಾಕುವುದರಲ್ಲೆ ಹೆಚ್ಚು ಆಸಕ್ತಿ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ನಿರಂತರ ಬೆನ್ನು ಹತ್ತುವಿಕೆಯ ನಂತರ ಪಲ್ಗುಣಿ ನದಿಯ ಕವಲು ತೋಕೂರು ಹಳ್ಳದ mrpl, hpcl ಭಾಗದಲ್ಲಿ ನಿನ್ನೆ ಸಂಜೆಯ ತರುವಾಯ ನೀರು ಸಹಜ ಬಣ್ಣಕ್ಕೆ ತಿರುಗತೊಡಗಿದೆ. ನೀರು ತಿಳಿಯಾಗಿ ಹರಿಯ ತೊಡಗಿದ ತರುವಾಯ mrpl ಅಧಿಕಾರಿಗಳು ನೀರಿನ ಸ್ಯಾಂಪಲ್ ಸಂಗ್ರಹಕ್ಕೆ ಇಂದು ಆಗಮಿಸಿದ್ದಾರೆ. ಆ ಮೂಲಕ ನೀರಿನಲ್ಲಿ ಪೆಟ್ರೋ ಕೆಮಿಕಲ್ ತ್ಯಾಜ್ಯ ಇಲ್ಲ ಎಂದು ಸಾಬೀತು ಪಡಿಸುವ ಯತ್ನಕ್ಕೆ ಕಂಪೆನಿ ಕೈ ಹಾಕಿದೆ
