ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಚಾರದಲ್ಲಿ ಭಾರತವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ
ವಿದ್ಯಾರ್ಥಿಗಳು ತಮಗೆ ಉತ್ತಮವಾದುದನ್ನು ಆರಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣವನ್ನು ಪಡೆದು, ತಮ್ಮ ನಿಜವಾದ ಪ್ರತಿಭೆಯನ್ನು ಹೊರಹೊಮ್ಮಿಸಿ ಮೌಲ್ಯಯುತ ಬದುಕಿಗೆ ಮುನ್ನುಡಿ ಬರೆಯಲಿ
✍️. ಇಸ್ಮಾಯಿಲ್ ಸುನಾಲ್. ವಕೀಲರು ಮಂಗಳೂರು
ನಮ್ಮ ಕಲಿಕಾ ಪದ್ದತಿ ಮೊದಲೇ “ಅಶ್ವಸ್ಥ”ವಾಗಿದೆ. ಶಿಕ್ಷಣದ ಚುಕ್ಕಾಣಿ ಹಿಡಿದವರೂ ಅಶ್ವಸ್ಥರಾಗಿದ್ದಾರೆ. ಪರಿಸ್ಥಿತಿ ಈಗ ಮತ್ತಷ್ಟು ಹದೆಗೆಟ್ಟಿದೆ. ಇಲ್ಲಿನ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವರ್ಷದ ಕೊನೆಯಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ, ಹಾಗೂ ಇದರಿಂದಾಗಿ ಕಲಿಕೆಯು ಅದರ ಸಂಪೂರ್ಣ ಉದ್ದೇಶವನ್ನು ಕಳೆದು ಕೊಂಡಿದೆ.
ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿನ ಮೂಲಭೂತ ನ್ಯೂನತೆಯೆಂದರೆ, ಅದು ವಿದ್ಯಾರ್ಥಿಗಳನ್ನು ಪ್ರಶ್ನಿಸುವ ಬದಲಿಗೆ, ಅವರನ್ನು ಕಂಠಮಾಡುವ ಸ್ಥಿತಿಗೆ ತಲುಪಿಸುತ್ತದೆ. ಇದರಿಂದಾಗಿ, ಎಳೆ ಮನಸ್ಸಿನ ಮಕ್ಕಳ ಮನಸ್ಸು, ಮೆದುಳು, ಬುದ್ಧಿಮತ್ತೆ ಮೇಲೆ ವಿಪರೀತ ಒತ್ತಡವನ್ನು ಹೇರುತ್ತದೆ. ಈ ಕಲಿಕಾ ವ್ಯವಸ್ಥೆಯಿಂದ, ಪರೀಕ್ಷೆ ಮುಗಿದ ಮರುದಿನ ವಿದ್ಯಾರ್ಥಿಗಳಲ್ಲಿ, ನಾವು ಅವರು ಕಲಿತದ್ದರ ಬಗ್ಗೆ ಕೇಳಿದರೆ, ಆ ಬಗ್ಗೆ ಅವರಿಗೆ ಏನೂ ಅರಿವು ಇರುವುದಿಲ್ಲ.
ಮೇಲ್ನೋಟಕ್ಕೆ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತಪ್ಪು ಎಂದು ಹೇಳಬಹುದಾದ ಸಾಕಷ್ಟು ವಿಷಯಗಳಿವೆ. ಗುಣಮಟ್ಟ ಮತ್ತು ಸೌಲಭ್ಯಗಳಂತಹ ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ನಿರಂತರವಾಗಿ ಹೆಚ್ಚುತ್ತಿರುವ ಅಂತರವಿದೆ.

ಕಲಿಕಾ ವ್ಯವಸ್ಥೆಯಲ್ಲಿನ ಲೋಪದೋಷಗಳೊಂದಿಗೆ ನಾವೆಲ್ಲಾ ನಗಣ್ಯವಾಗಿ ಅಥವಾ ಸೂಕ್ತ ಗಮನ ಹರಿಸದ ವಿಷಯವೆಂದರೆ ಇಲ್ಲಿನ ಪರೀಕ್ಷಾ ವ್ಯವಸ್ಥೆಯಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ಪ್ರಮುಖ ಸಮಸ್ಯೆಗಳಲ್ಲೊಂದು ಪರೀಕ್ಷಾ ವಿಧಾನವಾಗಿದೆ. ಈಗಿರುವ ಪರೀಕ್ಷಾ ಪದ್ಧತಿಯಲ್ಲಿನ ದುರಂತವೆಂದರೆ ವಿದ್ಯಾರ್ಥಿಗಳು ತಾವು ವರ್ಷಪೂರ್ತಿ ಕಲಿತದ್ದನ್ನು ಪರೀಕ್ಷಾ ಹಾಲಿಗೆ ಹೋಗಿ ಕೇವಲ ಮೂರೋ, ನಾಲ್ಕೊ ಗಂಟೆಯಲ್ಲಿ ಪರೀಕ್ಷೆ ಬರೆದು, ಅಲ್ಲಿ ನೀಡಿರುವ ಅಸಮಂಜಸ ಅಥವಾ ಪರೀಕ್ಷಾ ಪ್ರಶ್ನೆ ಪತ್ರಿಕಾ ತಯಾರಕನ ಮೂಡ್ ನ ಮೇಲೆ ಅವಲಂಭಿತ ಅಸಂಬಂಧ ಪ್ರಶ್ನೆಗಳಿಗೆ ಉತ್ತರ ನೀಡಿ, ಆ ಬಳಿಕ ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದು ಫಲಿತಾಂಶಗಳಿಗಾಗಿ ಕಾಯುವಂತೆ ಮಾಡುವ ಈ ವ್ಯವಸ್ಥೆ, ನಮ್ಮ ಮುಂದಿನ ಪೀಳಿಗೆಯನ್ನು ದುರಂತದತ್ತ ಕೊಂಡೊಯ್ಯುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಪ್ರತಿ ಪರೀಕ್ಷೆಯ ಮಧ್ಯೆ ಮುಂದಿನ ಪರೀಕ್ಷೆಯ ನಡುವೆ ಕನಿಷ್ಠ ಒಂದು ದಿನದ ಬಿಡುವೂ ಇಲ್ಲದಂತೆ ವೇಳಾಪಟ್ಟಿ ಸಿದ್ಧವಾಗುತ್ತದೆ. ಕೆಲವೊಂದು ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆ ಮಾಡದೆ ಪರೀಕ್ಷೆಗಾಗಿ ಕಲಿತು, ಮರುದಿನ ಅನಾರೋಗ್ಯ ಪೀಡಿತರಾಗಿ ಪರೀಕ್ಷೆ ಬರೆಯುವುದು ಸಾಧ್ಯವಾಗದೆ ಸಂದರ್ಭಗಳೂ ಇವೆ. ವರ್ಷಪೂರ್ತಿ ಕಷ್ಟ ಪಟ್ಟು ಕಲಿಯುವ ವಿದ್ಯಾರ್ಥಿ, ಪರೀಕ್ಷಾ ದಿನ ಯಾವುದೇ ಮಾನಸಿಕ ಹಾಗೂ ದೈಹಿಕ ಸಮಸ್ಯೆಗೊಳಗಾಗಿ ಪರೀಕ್ಷೆ ಬರೆಯದಿದ್ದರೆ, ಅಥವಾ ಬರೆದರೂ ಕಳಪೆ ಪ್ರದರ್ಶನ ನೀಡಿದರೆ ಆತನ ಬುದ್ಧಿ ಮತ್ತೆಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಬೀಳುತ್ತದೆ. ಮೂರು ಗಂಟೆಯ ಈ ಪರೀಕ್ಷೆ, ಅರಳುವ ಮೊಗ್ಗಿನ ಮನಸ್ಸಿನ ವಿದ್ಯಾರ್ಥಿಯ ಜೀವನವನ್ನೇ ಹಾಲು ಮಾಡುತ್ತದೆ ಎಂದರೂ ತಪ್ಪಾಗಲಾರದು.
ಈ ಪರೀಕ್ಷಾ ಪದ್ದತಿಯ ಬಹು ದೊಡ್ಡ ಸಮಸ್ಯೆಯೆಂದರೆ ಇಲ್ಲಿ ವಿದ್ಯಾರ್ಥಿ ಪರೀಕ್ಷೆಯನ್ನು ಒಂದು ರೀತಿಯ ಲಾಟರಿಯಂತೆ ಪರಿಗಣಿಸಬೇಕಾಗುತ್ತದೆ. ಯಾವ ಪ್ರಶ್ನೆ, ಯಾವ ರೀತಿ ಕೇಳುತ್ತಾರೆ ಎನ್ನುವುದರ ಯಾವುದೇ ಅರಿವು ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಪರೀಕ್ಷೆಯಲ್ಲಿ ಏನು ಬೇಕಾದರೂ ಆಗಬಹುದು ಮತ್ತು ಈ ಒಂದು ಅನಿಶ್ಚಿತತೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಹ ಅಸ್ಥಿರಗೊಳಿಸಬಹುದು.
ಈ ಸಮಸ್ಯೆಯನ್ನು ಸರಿದೂಗಿಸಲು ನಾವು ಇತ್ತೀಚಿನ ದಿನಗಳಲ್ಲಿ ಮಧ್ಯಾವಧಿ ಅಥವಾ ಸೆಮಿಸ್ಟರ್ ಪರೀಕ್ಷೆಗಳು ಮತ್ತು ಘಟಕ ಪರೀಕ್ಷೆಗಳಂತಹ ಹೊಸ ವ್ಯವಸ್ಥೆಗಳನ್ನು ಪರಿಚಯಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸೆಮಿಸ್ಟರ್ ಪದ್ದತಿ ಸ್ವಲ್ಪ ಮಟ್ಟಿಗೆ ಉತ್ತಮ, ಏಕೆಂದರೆ ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳು ಸರಳ ವೇಳಾಪಟ್ಟಿಯನ್ನು ಒದಗಿಸುತ್ತದೆ ಹಾಗೂ ಅವರನ್ನು ಕ್ರೀಡೆಗಳು ಮತ್ತು ಪಠ್ಯೇತರ ಅನ್ವೇಷಣೆಗಳಾದ ಸಂಗೀತ ಅಥವಾ ಅವರ ಮುಖ್ಯ ಪ್ರತಿಭೆ ಇರುವಂತಹ ಪಠ್ಯೇತರ ಚಟುವಟಿಕೆಗಳಿಗೆ ಕವಲೊಡೆಯಲು ಅನುವು ಮಾಡಿಕೊಡುತ್ತದೆ. ಆದರೆ ಸೆಮಿಸ್ಟರ್ ಪದ್ದತಿಯು, ಸಮಸ್ಯೆಯಿಂದ ಮುಕ್ತವಾಗಿಲ್ಲ. ಯಾಕೆಂದರೆ ಅದು ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗಾಗಿ ಅಧ್ಯಯನ ಮಾಡಲು ಮತ್ತು ಅಲ್ಪಾವಧಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಪ್ರೋತ್ಸಾಹಿಸುತ್ತದೆ ಹಾಗೂ ಮುಂದಿನ ಪರೀಕ್ಷೆ ನಡೆಯುವ ಹೊತ್ತಿಗೆ ಮೊದಲು ಕಲಿತದ್ದನ್ನು ಸಂಪೂರ್ಣ ಮರೆತುಬಿಡುವ ಸಾಧ್ಯತೆ ಇರುತ್ತದೆ.
ಶಿಕ್ಷಣದ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮತ್ತು ಅವರಿಗೆ ನೀಡಲಾಗುತ್ತಿರುವ ಜ್ಞಾನದ ಉತ್ತಮ ಅಂಶಗಳನ್ನು ಪ್ರಶಂಸಿಸಲು ಸಹಾಯ ಮಾಡುವುದು. ಆದರೆ ಈಗಿನ ಪರೀಕ್ಷಾ ವ್ಯವಸ್ಥೆಯು, ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುವ ಅಂಕಗಳ ಸಂಖ್ಯೆಗಳಿಗೆ ಸೀಮಿತಗೊಳಿಸಿದಂತಿದೆ. ಆದ್ದರಿಂದ ಶಿಕ್ಷಣ ಅದರ ಉದ್ಧೇಶವನ್ನೇ ಕಳೆದು ಕೊಂಡಿದೆ.

ಈ ವ್ಯವಸ್ಥೆಯ ಬದಲಾಗಿ, ವಿದ್ಯಾರ್ಥಿಗಳು ನೈಜ ಶಿಕ್ಷಣವನ್ನು ಪಡೆದು, ತಾವು ಪಡೆದ ಶಿಕ್ಷಣದಿಂದ ತಮಗೂ, ತಾವಿರುವ ಸಮಾಜಕ್ಕೂ ಒಳಿತಾಗುವ ಕಾರ್ಯಕ್ರಮಗಳನ್ನು ನೀಡುವ ಮೌಲ್ಯಯುತ ಬದುಕಿಗೆ ಪೀಠಿಕೆಯಾಗುವಂಥಹ ಪರೀಕ್ಷಾ ಪದ್ಧತಿಯನ್ನು ನಮ್ಮ ಶಿಕ್ಷಣ ಇಲಾಖೆಗಳು ಅನುಸರಿಸಬೇಕಾಗಿದೆ. ದೂರದೃಷ್ಟಿಯುಳ್ಳ, ವಿದ್ಯಾರ್ಥಿಗಳ ನೈಪುಣ್ಯವನ್ನು ನೈಸರ್ಗಿಕವಾಗಿ ಹಾಗೂ ಪ್ರಾಯೋಗಿಕವಾಗಿ ಹೊರಹಾಕುವಂತೆ ಮಾಡಿ, ಅದರ ಪ್ರಯೋಜನ ವಿದ್ಯಾರ್ಥಿಗಳಿಗೂ, ಅವರ ಕುಟುಂಬಕ್ಕೂ, ಹಾಗೂ ವಿಶೇಷತಃ ಸಮಾಜಕ್ಕೂ ದೊರಕಿಸುವಂತ ಪರೀಕ್ಷಾ ಪದ್ಧತಿ ಜಾರಿಯಾಗಬೇಕು. ಈಗಿರುವ ಪರೀಕ್ಷಾ ಪದ್ಧತಿಯ ಬದಲಾಗಿ, ವಿದ್ಯಾರ್ಥಿಗಳಿಗೆ ಒಂದೊಂದು ಗುರಿಗಳನ್ನು ನೀಡಿ, ಆ ಗುರಿಗಳನ್ನು ಸರಿಯಾದ ರೀತಿಯಲ್ಲಿ, ಪ್ರಾಯೋಗಿಕವಾಗಿ ತಲುಪುವಂತೆ ಮಾಡಿ, ಆ ಗುರಿಸಾಧನೆಯನ್ನು ಮಾನದಂಡವಾಗಿಟ್ಟು, ಅಂಕ ನೀಡುವ ಪದ್ಧತಿ ಜ್ಯಾರಿಯಾಗಬೇಕಾಗಿದೆ. ಈ ವ್ಯವಸ್ಥೆಯು ವಿದ್ಯಾರ್ಥಿಗಳು ತಮ್ಮ ಅಧ್ಯಯನದಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸುವದರ ಜತೆಗೆ, ತಮ್ಮ ಕಲಿಕೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
ಉಪಯೋಗಕ್ಕೆ ಬಾರದ ವಿಷಯಗಳನ್ನು ಕಲಿಯಲು ತಮ್ಮ ಸಂಪೂರ್ಣ ವಿದ್ಯಾರ್ಥಿ ಜೀವನವನ್ನು ಕಳೆಯುವುದಕ್ಕಿಂತ, ತನಗೆ ಇಷ್ಟವಿರುವ ಯಾವುದೇ ವಿಷಯವನ್ನು ಆರಿಸಿಕೊಂಡು ಆ ವಿಷಯದಲ್ಲಿನ್ನ ಸಂಪೂರ್ಣ ವಿಷಯಗಳನ್ನು ತಿಳಿದುಕೊಂಡು ಮುಂದುವರಿದಲ್ಲಿ, ಶಿಕ್ಷಣವು ಅರ್ಥಪೂರ್ಣವಾಗುವುದು. ಅವಶ್ಯವಿಲ್ಲದ ಜ್ಞಾನ ನಿಷ್ಪ್ರಯೋಜಕ ಎಂಬುವುದರಲ್ಲಿ ಎರಡು ಮಾತಿಲ್ಲ. ಉದಾಹರಣೆ ಅಲ್ಲಮ ಪ್ರಭುವಿನ ಕಾವ್ಯ ಕನ್ನಡ ಭಾಷೆಯ ಒಲವು ಇದ್ದು, ಕನ್ನಡ ಭಾಷೆಯ ಆಳವಾದ ಅಧ್ಯಯನ ಮಾಡುವ ವಿದ್ಯಾರ್ಥಿಗೆ ಅನುಕೂಲ, ಹಾಗೂ ಅದೇ ರೀತಿ, ಶೇಕ್ಸ್’ಪಿಯರನ ಕಾವ್ಯದ ತಿರುಳಿನ ಒಳಾರ್ಥಗಳು ಇಂಗ್ಲಿಷ್ ಭಾಷೆಯ ಆಳವಾದ ಅಧ್ಯಯನ ವಿದ್ಯಾರ್ಥಿಗೆ ಅಗತ್ಯವೇ ಹೊರತು ಪ್ರಾಥವಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಅಗತ್ಯವಿಲ್ಲ. ಭವಿಷ್ಯದಲ್ಲಿ ಅವರು ಬಳಸದಿರುವ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವ ಬದಲು, ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಚಾರದಲ್ಲಿ ಭಾರತವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅನೇಕರಿಗೆ ತಿಳಿದಿರಿಲಕ್ಕಿಲ್ಲ ಹಾಗೂ ಮುಂದಿನ ವರ್ಷಗಳಲ್ಲಿ, ಈ ಪರಿಸ್ಥಿತಿ ಮತ್ತಷ್ಟು ಸುಧಾರಿಸಬಹುದು ಎಂಬ ಆಶಾಭಾವನೆಯಿಲ್ಲ. ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಬಹುದು ಎಂಬುದೇ ತಜ್ಞರ ಅಭಿಮತ. ಈ ಪರಿಸ್ಥಿತಿ ಸುಧಾರಣೆಯಾಗಬೇಕಾದಲ್ಲಿ ಅಧಿಕಾರದಲ್ಲಿರುವವರು, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಲಿ ಎನ್ನುವ ಮನೋಭಾವನೆಯನ್ನು ಬಿಟ್ಟು, ವಿದ್ಯಾರ್ಥಿಗಳು ತಮಗೆ ಉತ್ತಮವಾದುದನ್ನು ಆರಿಸಿಕೊಂಡು, ತಮ್ಮ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣವನ್ನು ಪಡೆದು, ತಮ್ಮ ನಿಜವಾದ ಪ್ರತಿಭೆಯನ್ನು ಹೊರಹೊಮ್ಮಿಸಿ ಮೌಲ್ಯಯುತ ಬದುಕಿಗೆ ಮುನ್ನುಡಿ ಬರೆಯಲಿ ಎಂಬುದೇ ಹಾರೈಕೆ.
