ಪಲ್ಗುಣಿ ನದಿಗೆ ತೋಕೂರು ಹಳ್ಳಕ್ಕೆ ಮಾರಕ ಕೈಗಾರಿಕಾ ತ್ಯಾಜ್ಯ ಹರಿಸುವ mrpl, hpcl ನ ಕಾರ್ಯ ಜಿಲ್ಲಾಡಳಿತದ ಮೌನ ಬೆಂಬಲದೊಂದಿಗೆ ನಾಲ್ಕನೇ ವಾರವೂ ಸತತವಾಗಿ ಮುಂದುವರಿದಿದೆ.
ಇಂದು ಬೆಳಗ್ಗಿನ ಜಾವದಿಂದಲೇ ನಾಗರಿಕ ಹೋರಾಟ ಸಮಿತಿಯ ತಂಡ ತೋಕೋರು ಗ್ರಾಮದ ದುರ್ಗಮ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ಹರಿದು ಬಂದು ತೋಕೂರು ಹಳ್ಳಸೇರುವ ಕಳ್ಳ ಕಾಲುವೆಗಳ ಹುಡುಕಾಟ ನಡೆಸುತ್ತಿರುವಾಗ mrpl, HPCL ಕಂಪೌಂಡ್ ಒಳಭಾಗದಿಂದ ಕಾಂಕ್ರೀಟ್ ಕಾಲುವೆಯ ಮೂಲಕ ಅಪಾಯಕಾರಿ ತ್ಯಾಜ್ಯ ನೀರು ಹರಿದು ಬರುವ ಮೂಲಗಳು ಪತ್ತೆಯಾದವು. Mrpl, HPCL ಹೊರತಾದ ಬೇರಾವ ಘಟಕಗಳು, ಜನವಸತಿಯೂ ಇಲ್ಲದ ಭಾಗದಲ್ಲಿ, ಕಂಪೌಂಡ್ ಒಳಭಾಗದಿಂದ ಕೊಳೆತು ನಾರುತ್ತಿರುವ, ಕಪ್ಪು ಬಣ್ಣದ ನೀರು ರಾಜಾರೋಷವಾಗಿ ಈ ಕಾಲುವೆ ಮೂಲಕ ತೋಕೂರು ಹಳ್ಳ ಸೇರುವುದು ಸಾಕ್ಷ್ಯ ಸಮೇತ ಪತ್ತೆಯಾಯಿತು.

ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಕೈಗಾರಿಕಾ ತ್ಯಾಜ್ಯ ಫಲ್ಗುಣಿಗೆ ಹರಿಯುವುದನ್ನು ತಡೆಗಟ್ಟಬೇಕು. MRPL, HPCL ಕಂಪೆನಿಯ ವಿರುದ್ಧ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಚೆನ್ನೈ ಹಸಿರು ಪೀಠಕ್ಕೆ ನೀಡಿರುವ ವಾಗ್ದಾನಗಳನ್ನು ಪಾಲಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತದೆ.
ಹಾಗೆಯೆ ಜಿಲ್ಲೆಯ ನಾಗರಿಕ ಸಂಘಟನೆಗಳು ಫಲ್ಗುಣಿ ಮಾಲಿನ್ಯದ ವಿರುಧ್ದ ಧ್ವನಿ ಎತ್ತಬೇಕು. ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಕಂಪೆನಿ ಪರವಹಿಸಿ, ಮೌನಕ್ಕೆ ಶರಣಾಗುವ ಬದಲು ಮಾಲಿನ್ಯ ಹರಿದು ಬರುವ ಸ್ಥಳಗಳಿಗೆ ಭೇಟಿ ನೀಡಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಮಂಗಳೂರಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಅಪಾಯಗಳು ಕಾದಿದೆ ಎಂದು ಸಮಿತಿ ಎಚ್ಚರಿಸಿದೆ.
