ಮತ್ತೊಂದು ಹೊಸ ಸಾಂಕ್ರಾಮಿಕ ರೋಗವು ಹೊರಹೊಮ್ಮಬಹುದಾದ ಸಾಧ್ಯತೆ ದಟ್ಟವಾಗಿದೆ: ಯುಕೆಯ ಸಾಂಕ್ರಾಮಿಕ ರೋಗ ತಜ್ಞರು

ಅಂತಾರಾಷ್ಟ್ರೀಯ

ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿ ನಾಲ್ಕು ವರ್ಷಗಳು ಕಳೆದಿವೆ. ಇದರ ಪರಿಣಾಮವು ಕಡಿಮೆಯಾಗಿದೆ. ಆದರೆ ಯಾವುದೇ ಸಮಯದಲ್ಲಿ ಮತ್ತೊಂದು ಹೊಸ ಸಾಂಕ್ರಾಮಿಕ ರೋಗವು ಹೊರಹೊಮ್ಮಬಹುದಾದ ಸಾಧ್ಯತೆ ಇದೆ ದಟ್ಟವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವರದಿಯ ಪ್ರಕಾರ, U.K ಯ ಸಾಂಕ್ರಾಮಿಕ ರೋಗ ತಜ್ಞರು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಮಹಾ ವೈರಸ್‌ಗಳು ಮತ್ತೊಂದು ಸಾಂಕ್ರಾಮಿಕ ರೋಗವಾಗಿ ತಲೆದೋರಬಹುದು ಎಂದು ಎಚ್ಚರಿಸಿದ್ದಾರೆ.

ಮುಂದಿನ ಸಾಂಕ್ರಾಮಿಕ ವೈರಸ್ ಹಬ್ಬುವ ಸಾಧ್ಯತೆ ದಟ್ಟವಾಗಿದೆ. ಇದು ಎರಡು ವರ್ಷ ಅಥವಾ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದರೆ ನಾವುಗಳು ಜಾಗರೂಕರಾಗಿರಬೇಕು. ಇಂತಹ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಉಪನ್ಯಾಸಕಿ ಡಾ. ನಥಾಲೀ ಮ್ಯಾಕ್‌ಡೆರ್ಮಾಟ್ ಎಚ್ಚರಿಸಿದ್ದಾರೆ.

ಜಾಗತಿಕ ತಾಪಮಾನ ಮತ್ತು ಅರಣ್ಯನಾಶವು ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ನಥಾಲೀ ಎಚ್ಚರಿಸಿದ್ದಾರೆ. ಅಮೆಜಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಅರಣ್ಯ ನಾಶದಿಂದ , ಪ್ರಾಣಿಗಳು ಮತ್ತು ಕೀಟಗಳು ಮಾನವ ಆವಾಸಸ್ಥಾನಗಳಿಗೆ ಹತ್ತಿರವಾಗುತ್ತಿದ್ದು, ಇದರಿಂದಲೇ ವೈರಲ್‌ ಮಾನವ ಸಂಕುಲಕ್ಕೆ ಹರಡಿ ಅದರಿಂದ ಎದುರಾಗಬಹುದಾದ ಆತಂಕದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಡೆಡ್ಲಿ ಕಾಯಿಲೆ ಜಗತ್ತಿನಾದ್ಯಂತ ಆರು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡರೆ, 1981 ರಲ್ಲಿ ಗುರುತಿಸಲಾದ HIV/AIDS ರೋಗದಿಂದ ಜಾಗತಿಕವಾಗಿ 36 ಮಿಲಿಯನ್ ಸಾವುಗಳಿಗೆ ಕಾರಣವಾದರೆ, 1968 ರಲ್ಲಿ ಹಾಂಗ್ ಕಾಂಗ್ ಫೀವರ್ ಸಾಂಕ್ರಾಮಿಕ ವೈರಸ್ ಸುಮಾರು ಒಂದು ಮಿಲಿಯನ್ ಜನರ ಸಾವುಗಳಿಗೆ ಕಾರಣವಾಗಿ, 1918 ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್ ಜ್ವರ 50 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಜನರು ಅತೀ ಜಾಗರೂಕರಾಗಿರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ