✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು
ಭಾರತೀಯ ರಾಜಕೀಯ ಇತಿಹಾಸವನ್ನು ಗಮನಿಸಿದಲ್ಲಿ, ಕೆಲವೊಂದು ರಾಜಕಾರಣಿಗಳು ಅಧಿಕಾರ ಮತ್ತು ಸಿದ್ಧಾಂತದ ವೈವಿಧ್ಯಮಯ ರಾಜಕೀಯ ಬದುಕನ್ನು ಹೊಂದಿದ್ದಾರೆ. ಅಂತಹ ಓರ್ವ ರಾಜಕಾರಣಿಯೇ ಹೆಚ್.ಡಿ. ಕುಮಾರಸ್ವಾಮಿ. ಅವರನ್ನು ಕರ್ನಾಟಕದ ನಿತೀಶ್ ಕುಮಾರ್ ಅಥವಾ ಊಸರವಳ್ಳಿ ಅಥವಾ ಗೋಸುಂಬೆ ಎಂದು ಕರೆಯುವುದು ಹೆಚ್ಚು ಪ್ರಸ್ತುತ ಎಂಬುವುದು ನನ್ನ ವೈಯುಕ್ತಿಕ ಅಭಿಮತ. ಒಂದು ಪ್ರಬಲ ರಾಜಕೀಯ ಕುಟುಂಬದಿಂದ ಬಂದ ಅವರು ಆರಂಭದಲ್ಲಿ ತನ್ನ ತಂದೆಯಂತೆ ಅಥವಾ ಕಡೇಪಕ್ಷ ತನ್ನ ಅಣ್ಣನಂತೆ ರಾಜಕೀಯ ಯಶಸ್ಸು ಕಂಡಿರದ ಹೆಚ್.ಡಿ. ಕುಮಾರಸ್ವಾಮಿ, 2006 ನೇ ಇಸವಿಯಲ್ಲಿ, ತನ್ನ ತಂದೆ ಶ್ರೀ ದೇವೇಗೌಡರ ಇಚ್ಛೆಗೆ ವಿರುದ್ಧವಾಗಿ, ಹಾಗೂ ತನ್ನ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ, ಅಂದಿನ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರವನ್ನು ಉರುಳಿಸಿ, ತನ್ನ ಬದ್ಧ ವೈರಿ ಬಿಜೆಪಿಯೊಂದಿಗೆ ಸೇರಿಕೊಂಡು 20-20 ಮ್ಯಾಚ್ ಆಡುವ ಮೂಲಕ ಓಮ್ಮಿಂದೊಮ್ಮೆಲೇ ಮುನ್ನೆಲೆಗೆ ಬಂದರು. ರಾಜಕಾರಣದ ಮೇರು ಕುಟುಂಬದ ಸದಸ್ಯನಾಗಿದ್ದರೂ, ರಾಜಕೀಯದಲ್ಲಿ ಅಷ್ಟೇನೂ ಅನುಭವ, ರಾಜಕೀಯ ಜಾಣ್ಮೆ, ಪರಿಪಕ್ವಾತೆಯನ್ನು ಹೊಂದಿಲ್ಲದ ಹೆಚ್.ಡಿ.ಕೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ರಾಜಕೀಯ ಪಂಡಿತರು ಅವರ ಕಾರ್ಯಕ್ಷಮತೆಯ ಬಗ್ಗೆ ಬಹಳಷ್ಟು ಅನುಮಾನವನ್ನು ವ್ಯಕ್ತಪಡಿಸಿದ್ದರು ಹಾಗೂ ಅವರು ಸಫಲತೆಯನ್ನು ಕಾಣಲಿಕ್ಕಿಲ್ಲವೆಂಬ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಹೊಸದಾಗಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಹೆಚ್.ಡಿ.ಕೆ. ತನ್ನ ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಅಧಿಕಾರವನ್ನು ನಡೆಸುವ ಮೂಲಕ ಜನಮನ್ನಣೆಯನ್ನು ಪಡೆದುಕೊಂಡರು. ವಿಶೇಷವಾಗಿ ಅಂದಿನ ಅವರ “ಗ್ರಾಮ ವಾಸ್ತವ್ಯ”ದ ಪರಿಕಲ್ಪನೆ ಜನರಿಗೆ ತುಂಬಾ ಇಷ್ಟವಾಗಿತ್ತು. ಎಂ.ಪಿ.ಪ್ರಕಾಶ್ ಮುಂತಾದ ಜನತಾದಳದ ಘಟಾನುಘಟಿ ನಾಯಕರ ಜತೆಗೆ, ಶ್ರೀ ಬಿ.ಎಸ್. ಯಡಿಯೂರಪ್ಪರಂತಹ ಬಿಜಿಪಿ ನಾಯಕರನ್ನೂ ತನ್ನ ಸಚಿವ ಸಂಪುಟದಲ್ಲಿ ಹೊಂದಿದ್ದರಿಂದ, ಹೆಚ್.ಡಿ. ಕುಮಾರಸ್ವಾಮಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಿತ್ತು.
ಆದರೆ ತನ್ನ 20 ತಿಂಗಳ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಯಡಿಯೂರಪ್ಪನವರಿಗೆ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದು, ಮುಂದಿನ 20 ತಿಂಗಳ ಅವಧಿಗೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೆ ತನ್ನ “ಗೋಸುಂಬೆ” ಬುದ್ಧಿಯನ್ನು ಮೊದಲ ಬಾರಿಗೆ ಪ್ರದರ್ಶಿಸಿದ ಹೆಚ್.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ “ನಂಬಿಕೆ ದ್ರೋಹಿ” ಎಂಬ ಹಣೆಪಟ್ಟಿಯನ್ನು ಪಡೆದರು. ಅವರು ಆ ಕಳೆದ 20 ತಿಂಗಳುಗಳಲ್ಲಿ ಗಳಿಸಿದ್ದ ಮಾನ, ಮರ್ಯಾದೆ, ಘನತೆಗಳನ್ನು ತನ್ಮೂಲಕ ಸಂಪೂರ್ಣ ಕಳೆದುಕೊಂಡರು. ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡ ಶ್ರೀ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಮಾಡಿ, ಕುಮಾರ ಸ್ವಾಮಿಯವರ ನಂಬಿಕೆ ದ್ರೋಹವನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಸಂಪೂರ್ಣ ಯಶಸ್ವಿಯಾಗಿ, ಮೊದಲಬಾರಿಗೆ ಕರ್ನಾಟಕದಲ್ಲಿ ಬಿ.ಜಿ.ಪಿ. ಸರಕಾರ ರಚಿಸುವಂತೆ ಮಾಡುವುದರಲ್ಲಿ ಸಫಲರಾದರು.

ರಾಜಕೀಯವಾಗಿ ಅನುಭವಿಸಿದ ಈ ಹಿನ್ನೆಡೆಯನ್ನು ಅರಗಿಸಿಕೊಳ್ಳಲು ಕುಮಾರ ಸ್ವಾಮಿಯವರು ಸಿದ್ಧರಿರಲಿಲ್ಲ. ಅದಕ್ಕಾಗಿಯೇ ಅವಕಾಶಕ್ಕಾಗಿ ಹೊಂಚು ಹಾಕಿದ ಕುಮಾರ ಸ್ವಾಮಿ, ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ ಯಡಿಯೂರಪ್ಪನವರನ್ನು ಜೈಲಿಗಟ್ಟಿದರು. ಇದರಿಂದ ಯಡಿಯೂರಪ್ಪನವರು ತೀವ್ರ ಮುಖಭಂಗ ಅನುಭವಿಸುವುದರೊಂದಿಗೆ, ಬಿಜೆಪಿಯನ್ನು ತೊರೆಯಬೇಕಾಯಿತು. ಬಿಜೆಪಿಯನ್ನು ತೊರೆದ ಯಡಿಯೂರಪ್ಪ ಕೆ.ಜೆ.ಪಿ. ಪಕ್ಷವನ್ನು ರಚಿಸಿ, 2013ರ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವಂತೆ ಮಾಡಿದರು. ಆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತಿಯಾದರು.
ಯಡಿಯೂರಪ್ಪನವರೇ ಮುಖ್ಯಮಂತ್ರಿಯಾದುದನ್ನು ಸಹಿಸದ ಕುಮಾರಸ್ವಾಮಿ ತನ್ನ ಪ್ರಬಲ ರಾಜಕೀಯ ವೈರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಲೇ ಕೆಂಡ ಮಂಡಲವಾದರು. ಸಿದ್ದರಾಮಯ್ಯನವರ ಅಧಿಕಾರ ಅವಧಿಯ ಉದ್ದಕ್ಕೂ ಅವರೊಂದಿಗೆ ಕತ್ತಿ ಮಸೆಯುತ್ತಾ ಕಾಲ ಕಳೆದರು. ಮಾತ್ರವಲ್ಲದೆ ತನ್ನ ತಂದೆ ಶ್ರೀ ದೇವೇಗೌಡರ ಮೂಲಕ ತನ್ನ ಮಗ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ತನಕ ತಾನು ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿದರು. ಕೇವಲ 35 ರಿಂದ 40 ಸೀಟುಗಳನ್ನು ಮಾತ್ರ ಕೇಂದ್ರೀಕರಿಸಿ ಕಾರ್ಯಾಚರಿಸಿದ ಕುಮಾರಸ್ವಾಮಿ, ಒಂದು ಕಾಲಕ್ಕೆ ರಾಷ್ಟೀಯ ಪಕ್ಷವಾಗಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಪಕ್ಷವನ್ನು, ಮೊದಲಿಗೆ ರಾಜ್ಯಕ್ಕೆ ಸೀಮಿತವಾಗುವಂತೆ ಮಾಡಿ, ಆ ಬಳಿಕ ಕೇವಲ, ಹಾಸನ, ಮಂಡ್ಯ, ಮೈಸೂರು, ತುಮಕೂರು ಪ್ರದೇಶಕ್ಕೆ ಸೀಮಿತವಾದ ಸ್ಥಳೀಯ ಪಕ್ಷವಾಗುವಂತೆ ಮಾಡಿದ ಕುಮಾರಸ್ವಾಮಿ, 2018 ರ ಚುನಾವಣೆಯಲ್ಲಿ ತನಗೆ ಅವಕಾಶ ಒದಗಿಬರಬಹುದು ಎಂದು ನಿರೀಕ್ಷೆಯಲ್ಲಿ ಜಾತಕ ಪಕ್ಷಿಯಂತೆ ಕಾದು ಕುಳಿತರು. ಅವರ ಈ ನಿರೀಕ್ಷೆ ಸುಳ್ಳಾಗಲಿಲ್ಲ. 2018 ರ ಚುನಾವಣೆಯಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಉಧ್ಭವಿಸಿದಾಗ ಕುಮಾರ ಸ್ವಾಮಿಯವರಿಗೆ ಮತ್ತೆ ಅದೃಷ್ಟ ಖುಲಾಯಿಸಿತು. ಈ ಅತಂತ್ರ ಸ್ಥಿತಿಯಲ್ಲಿ ಕುಮಾರಸ್ವಾಮಿಯವರಿಗೆ, ಯಡಿಯೂರಪ್ಪನವರಿಗೆ ಈ ಮೊದಲು ತಾನು ಎಸಗಿದ್ದ ದ್ರೋಹಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುವ ಅತ್ಯುತ್ತಮ ಅವಕಾಶ ಒದಗಿ ಬಂದಿತ್ತು. ಒಂದು ವೇಳೆ ಅಂದು ಅವರು ಯಡಿಯೂರಪ್ಪನವರೊಂದಿಗೆ 30-30 ಆಡಲು ಒಪ್ಪಂದ ಮಾಡಿ, ಮೊದಲ 30 ತಿಂಗಳ ಅವಧಿಗೆ ಯಡಿಯೂರಪ್ಪನವರಿಗೆ ಅವಕಾಶ ಮಾಡಿಕೊಟ್ಟಿದ್ದರೆ, ತನ್ನ ತಪ್ಪಿಗೆ ಪ್ರಾಯಶ್ಚಿತವೂ, ಭವಿಷ್ಯದ ರಾಜಕೀಯ ಬದುಕಿಗೆ ಒಂದು ವೇದಿಕೆಯೂ ಸಿದ್ಧವಾಗುತ್ತಿತ್ತು. ಆದರೆ ಅಧಿಕಾರವಿಲ್ಲದೆ ವಿಲವಿಲನೆ ಒದ್ದಾಡಿದ್ದ ಅವರು, ಅಧಿಕಾರ ಹಾಗೂ ಸಿದ್ಧರಾಮಯ್ಯನವರನ್ನು ತನ್ನ ತಂದೆ ದೇವೆಗೌಡರ ಮನೆಗೆ ಬರುವಂತೆ ಮಾಡುವಲ್ಲಿ ಸಫಲರಾದ ಖುಷಿಯಲ್ಲಿ, ಕಾಂಗ್ರೆಸ್ ನೊಂದಿಗೆ ಮೈತ್ರಿ ಸರಕಾರವನ್ನು ಮಾಡಿ ಅಧಿಕಾರದ ಗದ್ದುಗೆಗೆ ಏರಿದರು.
ಈ ಮೈತ್ರಿ ಸರಕಾರ ಕಾಂಗ್ರೆಸ್ ಹಾಗೂ ದೇವೇಗೌಡರ ಸರಕಾರ ಆಗಿತ್ತೆ ಹೊರತು, ಕಾಂಗ್ರೆಸ್ ನ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೈತ್ರಿಯನ್ನು ಒಪ್ಪಲು ಸಿದ್ಧರಿರಲಿಲ್ಲ. ದೇವೇಗೌಡರ ಮನೆ ಬಾಗಿಲಿಗೆ ತನ್ನನ್ನು ಹೋಗುವಂತೆ ಮಾಡಿದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವುದು, ಸಿದ್ದರಾಮಯ್ಯನವರಿಗೆ ಪಥ್ಯವಾಗಲಿಲ್ಲ. ಅದಕ್ಕಾಗಿ ತನ್ನ ಶಿಷ್ಯರಾದ ರಮೇಶ್ ಜಾರಕಿಹೊಳಿ ಹಾಗೂ ಇತರ ಬಾಂಬೆ ಬಾಯ್ಸ್ ಗಳನ್ನೂ ಹೊಂದಿದ ಕೂಟವನ್ನು ಉಪಾಯಯದಲ್ಲಿ ಮುಂಬಯಿಗೆ ರವಾನಿಸಿದರು. ಈ ಪರಿಸ್ಥಿಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡ ಬಿಜೆಪಿ ರಮೇಶ್ ಜಾರಕಿಹೊಳಿ ಹಾಗೂ ಇತರ ಬಾಂಬೆ ಬಾಯ್ಸ್ ಬಳಗವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಒಂದೇ ಕಲ್ಲಿನಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರವರನ್ನು ಹೊಡೆದುರುಳಿಸಿತು. ಇದರ ಪರಿಣಾಮವಾಗಿ ಯಡಿಯೂರಪ್ಪನವರು ಮತ್ತೆ ಮುಖ್ಯಮಂತಿಯಾದರು. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆಯನ್ನು ಕಳೆದುಕೊಂಡ ಕುಮಾರಸ್ವಾಮಿ ಮತ್ತೆ ತನ್ನ ಹಿಂದಿನ ಅಸ್ತ್ರವನ್ನು ಪ್ರಯೋಗಿಸುವ ನಿರ್ಧಾರ ಮಾಡಿ ಕೇವಲ ನಾಲ್ಕೈದು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಾ, 2023 ರ ಚುನಾವಣೆಯಲ್ಲಿ ಮತ್ತೆ ಅತ್ರತ್ರ ಸ್ಥಿತಿಯ ಕನಸು ಕಾಣುತ್ತ ಕಾಲ ಕಳೆದರು.

ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ನ ನಾಯಕರೆಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದುಗೂಡಿ ಒಮ್ಮತದ ಶಕ್ತಿ ಪ್ರದರ್ಶಿಸತೊಡಗಿದರು. ಈ ಒಮ್ಮತ ಅಥವಾ ಒಗ್ಗಟ್ಟು ಅವರಿಗೆ ಅನಿವಾರ್ಯವೂ ಆಗಿತ್ತು. ಆದರೆ ಸಿದ್ದರಾಮಯ್ಯನವರ ಹಾಗೂ ಡಿ.ಕೆ. ಶಿವಕುಮಾರ್ ರವರ ನಡುವಿನ ಮುಸುಕಿನ ಗುದ್ದಾಟದ ಪ್ರತಿಫಲ ತನಗೆ ಅವಕಾಶ ಮಾಡಿಕೊಡಬಹುದು ಎಂಬ ಭಾವನೆಯಿಂದ ಕುಮಾರಸ್ವಾಮಿಯವರು ಕಾಯುತ್ತಿದ್ದರು. 2023 ರ ಮತ ಎಣಿಕೆ ದಿನದಂದು ಸಹಿತ ಸಿಂಗಾಪುರಕ್ಕೆ ಹಾರಾಟ ಮಾಡಿದ ಕುಮಾರಸ್ವಾಮಿ, ಮತ ಎಣಿಕೆಯಾದ ಕೂಡಲೇ ತಾನೇ ಹೊಸ ಮುಖ್ಯಮಂತಿ ಆಗಬಹುದೆಂಬ ತಿರುಕನ ಕನಸಿಲ್ಲಿದ್ದರು.
ಆದರೆ 2023 ರ ಚುನಾವಣೆಯಲ್ಲಿ ಬಿ.ಜೆ.ಪಿ. ಹಾಗೂ ಜನತಾದಳ ಸಂಪೂರ್ಣ ನೆಲಕಚ್ಚಿ, ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಾಳಿಸುವುದರೊಂದಿಗೆ ಕುಮಾರಸ್ವಾಮಿಯವರ ಕನಸು ನುಚ್ಚು ನೂರಾಯಿತು. ಇದರಿಂದ ಕುಮಾರಸ್ವಾಮಿಯವರು ತೀವ್ರ ಹತಾಶರಾಗುವುದರೊಂದಿಗೆ ತನ್ನ ಬುದ್ಧಿ ಸ್ಥಿಮಿತವನ್ನು ಕಳೆದು ಕೊಂಡರು. ಅವರಿಗೆ ಈಗ ಉಳಿದಿದ್ದು ಒಂದೇ ದಾರಿ ಅದೆಂದರೆ ಬಿಜೆಪಿ ಸೇರುವುದು. ಆದರೆ ಈ ಹಿಂದೆ ತಾನು ಹಾಗೂ ತನ್ನ ತಂದೆ ಪಾಲಿಸಿಕೊಂಡು ಬಂದಿದ್ದ ತತ್ವಾದರ್ಶಗಳಿಗೆ ವಿರುದ್ಧವಾಗಿ, ಅದಕ್ಕಿಂತಲೂ ಮಿಗಿಲಾಗಿ ಜಾತ್ಯತೀತ ಪಕ್ಷದ ಹೆಸರು ಇಟ್ಟುಕೊಂಡು, ಕೋಮುವಾದಿ ಪಕ್ಷ ಬಿಜೆಪಿ ಸೇರುವುದು ಹೇಗೆಂಬ ಕೊರಗು ಅವರನ್ನು ಕಾಡುತ್ತಿತ್ತು. ಜನತಾ ದಳಕ್ಕೆ ಇನ್ನು ಉಳಿಗಾಲವಿಲ್ಲವೆಂಬ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದ ಕುಮಾರಸ್ವಾಮಿಗೆ ಬಿಜೆಪಿ ಯನ್ನು ಸೇರುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ತಮ್ಮ ಗೋಸುಂಬೆ ಅಥವಾ ಊಸರವಳ್ಳಿ ಬುದ್ಧಿಯನ್ನು ಮತ್ತೆ ತೋರ್ಪಡಿಸಿ, ರಾಜ್ಯದ ಬಿಜೆಪಿ ನಾಯಕರನ್ನು ಕಡೆಗಣಿಸಿ, ತನ್ನ ತಂದೆ ದೇವೇಗೌಡರ ಮೂಲಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಅಮಿತ್ ಷಾ ರನ್ನು ಭೇಟಿಯಾಗಿ 2024 ರ ಚುನಾವಣೆಗೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರು. ಈ ಮೈತ್ರಿ ಬಿಜೆಪಿಗೋ ಅಥವಾ ಜನತಾ ದಳ ಪಕ್ಷಕ್ಕೋ ಯಾವುದೇ ಪ್ರಯೋಜನವಿಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಮೈತ್ರಿ ಊಸರವಳ್ಳಿ ಕುಮಾರ ಸ್ವಾಮಿಯವರ ಬಿಜೆಪಿ ಸೇರ್ಪಡೆಗೆ ಇರುವ ಒಂದು ವೇದಿಕೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಜಯಗಳಿಸುತ್ತಾರೋ ಇಲ್ಲವೋ ಯಾರಿಗೂ ಹೇಳಲಿಕ್ಕಾಗದು. ಆದರೆ ಅವರು ಬಿಜೆಪಿ ಸೇರುವುದು ಮುಂದಿನ ದಿನಗಳಲ್ಲಿ ಅವರ ರಾಜಕೀಯ ಬದುಕಿಗೆ ಅನಿವಾರ್ಯ. ರಾಜಕೀಯ ಪಕ್ಷವಾಗಿ ಜನತಾ ದಳ ಬಹುತೇಕ ಮುಗಿದ ಕತೆ. ರಾಜಕಾರಣಿಯೊಬ್ಬ “ಅಕ್ಬರ್” ನಂತಾಗಲು ಹೋಗಿ ಕೊನೆಗೆ ‘ಬಹಾದೂರ್ ಷಾ ಜಾಫರ್ ನಂತಾಗಿದ್ದು, ಆ ಮೂಲಕ ಜನತಾ ದಳ ಪಕ್ಷವನ್ನು ನಿರ್ನಾಮ ಮಾಡಿದ್ದು, ಕರ್ನಾಟಕ ರಾಜಕೀಯ ಇತಿಹಾಸದ ಕರಾಳ ಅಧ್ಯಾಯ ಎನ್ನುವುದರಲ್ಲಿ ಎರಡು ಮಾತಿಲ್ಲ.!
