ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಕೋರೆಗೆ ದಾಳಿ ನಡೆಸಿ ಸಾಕ್ಷ್ಯ ಸಮೇತ ಕೋರೆಯ ಮಾಲಕನಾದ ಬಿಜೆಪಿ ಮುಖಂಡನನ್ನು ಬಂಧಿಸಿದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತನ್ನ ಬೆಂಬಲಿಗರೊಂದಿಗೆ ನುಗ್ಗಿ ಪ್ರತಿಭಟನೆಯ ಹೆಸರಲ್ಲಿ ಸ್ಥಳೀಯ ಶಾಸಕ ಹರೀಶ್ ಪೂಂಜಾ ಗೂಂಡಾಗಿರಿ ಮೆರೆದಿದ್ದಾರೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಅಕ್ರಮಗಳ ದಂಧೆಗಳ ಹಿಂದಿರುವವರು ಬಹುತೇಕ ಬಿಜೆಪಿ ಪ್ರಮುಖರು ಹಾಗೂ ಸ್ಥಳೀಯ ಶಾಸಕ ಪೂಂಜಾ ಬೆಂಬಲಿಗರು. ಈ ಮೊದಲೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ರೌಡಿಶೀಟರ್ ಗಳಾಗಿರುವ ಈ ದಂಧೆಕೋರರ ಕುರಿತು ಸಾರ್ವಜನಿಕರು ಧ್ವನಿ ಎತ್ತಲು ಭಯ ಪಡುತ್ತಾರೆ. ಶಾಸಕ ಪೂಂಜಾ ಇಂತಹ ರೌಡಿ ಪಠಾಲಂ ಅನ್ನು ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳನ್ನು ಪೋಷಿಸುತ್ತಿದ್ದಾರೆ. ರಾಜಕೀಯ ವಿರೋಧಿ ಧ್ವನಿ ಅಡಗಿಸಲು ಯತ್ನಿಸುತ್ತಾ ಬಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇಂದು ಶಾಸಕರು ತನ್ನ ಗೂಂಡಾ ಪಡೆಗಳೊಂದಿಗೆ ಎಸಗಿರುವ ಗೂಂಡಾ ವರ್ತನೆಯಂತು ಬೆಳ್ತಂಗಡಿಯಲ್ಲಿ ನಿರ್ಮಾಣಗೊಂಡಿರುವ ತೋಳ್ಬಲದ ಅಸಹನೀಯ ಸ್ಥಿತಿಯ ಅನಾವರಣವಾಗಿದೆ. ಇಂತಹ ಪರಿಸ್ಥಿತಿಯನ್ನು ಯಾವ ಕಾರಣಕ್ಕೂ ಒಪ್ಪಲಾಗದು.

ಶಾಸಕರ ಈ ಗೂಂಡಾಗಿರಿ ತೀರಾ ಖಂಡನೀಯ. ಒಬ್ಬ ಜವಾಬ್ದಾರಿಯು ಶಾಸಕ ಈ ರೀತಿ ಸಾರ್ವಜನಿಕವಾಗಿ ನಡೆದುಕೊಳ್ಳುವುದು ನಾಚಿಕೆಗೇಡು. ರಾಜ್ಯ ಸರಕಾರ ಶಾಸಕ ಹರೀಶ್ ಪೂಂಜಾ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಪೊಲೀಸರಿಗೆ ಸ್ಥೈರ್ಯ ನೀಡಬೇಕು. ಕರಾವಳಿಯಲ್ಲಿ ಗೂಂಡಾಗಿರಿ, ತೋಳ್ಬಲದ ಮೂಲಕ ಪೊಲೀಸ್ ಠಾಣೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೋಮುಶಕ್ತಿಗಳ ಮೇಲೆ ಸರಕಾರ ಈಗಲಾದರು ದೃಢ ಕ್ರಮಗಳನ್ನು ಜರುಗಿಸಬೇಕು.
