ಡ್ರೈವಿಂಗ್ ಲೈಸನ್ಸ್ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ

ರಾಜ್ಯ

ಖಾಸಗಿ ಸಂಸ್ಥೆಗಳಿಗೆ ಪರೀಕ್ಷೆಗಳನ್ನು ನಡೆಸಲು, ಪ್ರಮಾಣಪತ್ರ ನೀಡಲು ಅಧಿಕಾರ‌; ಜೂನ್ 1ರಿಂದ ಹೊಸ ನಿಯಮ ಜಾರಿ

ಇನ್ಮುಂದೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಿಗೆ ಖಾಸಗಿ ಸಂಸ್ಥೆಗಳಿಗೆ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಮತ್ತು ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ‌ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1ರಿಂದ ಜಾರಿಗೆ ಬರಲಿದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರ ಹೊಸ ನಿಯಮಗಳನ್ನು ತಂದಿದೆ.

ಇದರ ಪ್ರಕಾರ ಖಾಸಗಿ ಚಾಲನಾ ತರಬೇತಿ ಕೇಂದ್ರ ನಡೆಸಲು ಕನಿಷ್ಠ 1 ಎಕರೆ ಜಮೀನು ಇರಬೇಕು. 4 ಚಕ್ರದ ಮೋಟರ್‌ ವಾಹನಗಳಿಗೆ ಡ್ರೈವಿಂಗ್ ಸೆಂಟರ್‌ನಲ್ಲಿ ಹೆಚ್ಚುವರಿ 2 ಎಕರೆ ಜಮೀನು ಬೇಕಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರ ಸೂಕ್ತವಾದ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ. ತರಬೇತುದಾರರು ಕನಿಷ್ಠ ಪ್ರೌಢಶಾಲಾ ಶಿಕ್ಷಣ ಪಡೆದಿರಬೇಕು. ಇದಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.

ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೂಲಭೂತ ಅಂಶಗಳನ್ನು ತರಬೇತುದಾರರು ತಿಳಿದಿರಬೇಕಾಗುತ್ತದೆ. ಲಘು ವಾಹನ ತರಬೇತಿಯನ್ನು 4 ವಾರಗಳಲ್ಲಿ ಎಂದರೆ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಥಿಯರಿ ಹಾಗೂ ಪ್ರಾಯೋಗಿಕ ಎಂಬ ಕನಿಷ್ಠ ಎರಡು ವಿಭಾಗಗಳಾಗಿ ವಿಂಗಡಿಸಬೇಕು. ಇದರಲ್ಲಿ, ಥಿಯರಿ ವಿಭಾಗ 8 ಗಂಟೆಗಳಿದ್ದರೆ ಪ್ರಾಯೋಗಿಕ 21 ಗಂಟೆಗಳಿರಬೇಕು.

ಭಾರೀ ಮೋಟಾರು ವಾಹನಗಳಿಗೆ 38 ಗಂಟೆಗಳ ತರಬೇತಿ ಇರುತ್ತದೆ. ಇದರಲ್ಲಿ 8 ಗಂಟೆ ಥಿಯರಿ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿ ಇರುತ್ತದೆ. ಈ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮಗಳ ಉದ್ದೇಶವಾಗಿದೆ. ವಿವಿಧ ರೀತಿಯ ಡ್ರೈವಿಂಗ್‌ ಲೈಸೆನ್ಸ್‌ಗಳಿಗೆ ವಿವಿಧ ಶುಲ್ಕಗಳನ್ನು ವಿಧಿಸಲಾಗಿದೆ.