ಸಚಿವ ಬಿ.ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ರಾಜ್ಯ ಸರ್ಕಾರದ ಮತ್ತೆ ಎರಡು ವಿಕೆಟ್ ಪತನವಾಗುವ ಸಾಧ್ಯತೆ: ಚಲುವಾದಿ‌ ನಾರಾಯಣಸ್ವಾಮಿ

ರಾಜ್ಯ

ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆಯ ಹಗರಣ ಮತ್ತು ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್ ಸಂಬಂಧ ಈಗಾಗಲೇ ಸಚಿವ ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ಮತ್ತೆ ಎರಡು ವಿಕೆಟ್ ಪತನವಾಗುವ ಸಾಧ್ಯತೆ ಇದೆ. ಎಂದು ಪರಿಷತ್ ಸದಸ್ಯ ಚಲುವಾದಿ‌ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿರುತ್ತಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ಹಗರಣದಲ್ಲಿ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ಬಸವನಗೌಡ ದದ್ದಲ್ ಇಬ್ಬರ ಪಾಲು ಇದೆ ಎಂದು ಆರೋಪಿಸಿದ್ದಾರೆ.

ಪ್ರಕರಣದ 8ನೇ ಆರೋಪಿ ಅಕೌಂಟೆಂಟ್ ಪರಶುರಾಮ್ ಕೋರ್ಟಿಗೆ ಅಫಿಡವಿಟ್ ಹಾಕಿದ್ದಾರೆ. ಇದರಲ್ಲಿ ಮೇ.25ರಂದು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹಾಗೂ ಸಚಿವ ಶರಣಪ್ರಕಾಶ್ ಪಾಟೀಲ್ ಸಭೆ ಮಾಡಿದ್ದಾರೆ. ಸಭೆಯು ಶರಣಪ್ರಕಾಶ್ ಪಾಟೀಲ್ ಕಚೇರಿಯಲ್ಲಿ ನಡೆದಿರುತ್ತದೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಸಭೆಯ ಸಿಸಿಟಿವಿ ಸಾಕ್ಷ್ಯ ಕಲೆ ಹಾಕುವಂತೆ ಆರೋಪಿ ಕೋರ್ಟಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರ ಸಾಕ್ಷ್ಯಗಳನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಚಲುವಾದಿ ನಾರಾಯಣಸ್ವಾಮಿ ಆರೋಪಿಸಿದ್ದು, ಕೂಡಲೇ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.