ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವುದಕ್ಕೆ ಇದೊಂದು ಘಟನೆ ಸಾಕು. ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಐದಾರು ಬಣಗಳಿದ್ದು, ಒಬ್ಬ ನಾಯಕರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ. ಬಿಜೆಪಿಯನ್ನು ಸೋಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಕ್ಕಿಂತ ಇಲ್ಲಿನ ನಾಯಕರು ಇನ್ನೊಬ್ಬರ ಕಾಲೆಳೆಯುವುದೇ ದೊಡ್ಡ ಸಾಧನೆ ಎಂದು ತಿಳಿದುಕೊಂಡು ಬಿಟ್ಟಿದ್ದಾರೆ. ಇದೇ ಕಾರಣದಿಂದ ಕಳೆದ ಮೂವತ್ತು ವರ್ಷಗಳಿಂದ ಕರಾವಳಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಲೇ ಇದೆ. ಸೋತರೂ ಇವರಿಗೆ ಬುದ್ಧಿ ಬಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವ್ಯಾಪಕ ಆಗ್ರಹ ಕೇಳಿ ಬಂದಿತ್ತು. ಕೊನೆಗೆ ಕೆಪಿಸಿಸಿ ತಂಡವೊಂದು ಜಿಲ್ಲೆಗೆ ಆಗಮಿಸಿ ಶ್ರೀಘ್ರದಲ್ಲಿ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ಕಾರ್ಯಕರ್ತರನ್ನು ಸಮಾಧಾನಿಸಿ ಸದ್ದಿಲ್ಲದೆ ಹೋಗಿದೆ. ಶ್ರೀಘ್ರದಲ್ಲೇ ಜಿಲ್ಲಾ ಕಾಂಗ್ರೆಸ್ಸಿಗೆ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದು ಪಕ್ಕಾ.

ಈ ಮಧ್ಯೆ ಮಾಜಿ ಸಚಿವ ರಮಾನಾಥ ರೈ ಅವರ ಆಪ್ತರಾದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬುಡಾ ಅಧ್ಯಕ್ಷರಾದ ಬೇಬಿ ಕುಂದರ್ ಕದ್ರಿಯ ಗೆಸ್ಟ್ ಹೌಸ್ ನಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಕರೆದಿದ್ದು, ರೈ ಆಪ್ತ ಬಣದ ಬ್ಲಾಕ್ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಿದ್ದು, ಸದ್ದಿಲ್ಲದೆ ದೊಡ್ಡ ಸುದ್ದಿಗೆ ಕಾರಣವಾಗಿದೆ. ಕೆಪಿಸಿಸಿ ಅನುಮತಿ ಇಲ್ಲದೆ, ಜಿಲ್ಲಾಧ್ಯಕ್ಷರ ಗಮನಕ್ಕೆ ತಾರದೆ ಬ್ಲಾಕ್ ಅಧ್ಯಕ್ಷರ ಸಭೆ ನಡೆದ ಬಗ್ಗೆ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಕೆಪಿಸಿಸಿ ಗೆ ದೂರು ನೀಡಿದ್ದರು. ಈ ಬಗ್ಗೆ ಕೆಪಿಸಿಸಿ ಆಡಳಿತ ವಿಭಾಗದ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಕುಂದರ್ ಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ಕುಂದರ್ ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ತಮ್ಮನ್ನು ತಾವು ನೈಜ ಕಾರ್ಯಕರ್ತರೆಂದು ಬಿಂಬಿಸಿ ತಪ್ಪಿಗೆ ಕ್ಷಮೆ ಕೋರಿ ನೋಟಿಸ್ ಗೆ ಉತ್ತರ ನೀಡಿದ್ದಾರೆ.
ಜಿಲ್ಲಾ ಬ್ಲಾಕ್ ಅಧ್ಯಕ್ಷರ ಸಭೆ ಕರೆಯಲು ಈ ಕುಂದರ್ ಯಾರು? ಅನ್ನುವ ಬಗ್ಗೆ ಕೆಲವೊಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ಕಾರ್ಯಾಧ್ಯಕ್ಷರೊಬ್ಬರ ಪವರ್ ಜಾಸ್ತಿ ಈಗ ನಡೆಯುತ್ತಿದ್ದು, ಮಾಜಿ ಸಚಿವರೊಬ್ಬರನ್ನು ಮೂಲೆಗುಂಪು ಮಾಡಲಾಗಿದೆಯಂತೆ. ಹೈಕಮಾಂಡ್ ಮಟ್ಟದಲ್ಲೂ ಮಾಜಿ ಸಚಿವರನ್ನು ಈಗ ಯಾರು ಕೇಳುವವರೇ ಇಲ್ಲ. ಬಂಟ್ವಾಳಕ್ಕೆ ಮಾತ್ರ ಸೀಮಿತವಾಗಿದ್ದಾರಂತೆ.
ಜಿಲ್ಲಾಧ್ಯಕ್ಷರ ಬದಲಾವಣೆ ಸನ್ನಿಹಿತವಾಗಿರುವುದರಿಂದ ಆ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವರು ಆ ಮೂಲಕ ಜಿಲ್ಲಾ ರಾಜಕಾರಣವನ್ನು ಮತ್ತೆ ಸುಪರ್ದಿಗೆ ತೆಗೆದುಕೊಳ್ಳಲು ತನ್ನ ಆಪ್ತನ ಮೂಲಕ ರಹಸ್ಯ ಸಭೆ ನಡೆಸಿರುವುದಾಗಿ ಇದೀಗ ಗುಸು ಗುಸು ಕೇಳಿ ಬರುತ್ತಿದೆ. ಮಾಜಿ ಸಚಿವರನ್ನು ಮಂಕುಬೂದಿ ಎರಚಿ ಪಾಣೆಮಂಗಳೂರು ಭಾಗದ ಮುಸ್ಲಿಂ ನಾಯಕರೊಬ್ಬರಿಗೆ ಸಿಗಬೇಕಾದ ಬುಡಾ ಅಧ್ಯಕ್ಷವನ್ನು ಕೂಡ ಕುಂದರ್ ಕಬಳಿಸಿದ್ದಾರೆ ಅನ್ನುವ ಮಾತು ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ಬ್ಲಾಕ್ ಅಧ್ಯಕ್ಷ ಜೊತೆಗೆ ಬುಡಾ ಅಧ್ಯಕ್ಷ ಒಬ್ಬರದ್ದೇ ಹೆಗಲಮೇಲಿರುವುದು ಯಾವ ನ್ಯಾಯ? ಮಾಜಿ ಸಚಿವರಿಗೆ ಅಲ್ಪಸಂಖ್ಯಾತ ಮತಗಳು ಬೇಕು? ಅಲ್ಪಸಂಖ್ಯಾತ ನಾಯಕರು ಬೇಡವೇ ಅನ್ನುವುದು ಇದೀಗ ಕೇಳಿ ಬರುತ್ತಿರುವ ಸುದ್ದಿ.
