ಹೈಟೆಕ್ ಕೋಳಿ ಅಂಕಕ್ಕೆ ಪೆಂಡಾಲ್ ಹಾಕುತ್ತಿದ್ದಾಗ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಓರ್ವ ಸಾವು, ನಾಲ್ವರಿಗೆ ಗಾಯ.

ಕರಾವಳಿ

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡೇಶ್ವಾಲಯ ಬಳಿ ದುರ್ಘಟನೆ.

ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಹೈಟೆಕ್ ಕೋಳಿ ಅಂಕ ನಡೆಸಲು ಕಬ್ಬಿಣದ ಶೀಟುಗಳ ಪೆಂಡಾಲ್ ಹಾಕುತ್ತಿದ್ದ ಸಂದರ್ಭ ಕಬ್ಬಿಣದ ರಾಡ್ ಗೆ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲ್ಲಡ್ಕದ ಸಾಲಿಯಾನ್ ಶಾಮಿಯಾನ ಸಂಸ್ಥೆಯ ಕಾರ್ಮಿಕ ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂಬಾತ ಮೃತಪಟ್ಟಿದ್ದು, ಕಡೇಶ್ವಾಲ್ಯ ಗ್ರಾಮದ ಪ್ರಸನ್ನ , ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚಿಮ ಬಂಗಾಳದ ರೋಹಿತ್ ಎಂಬವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಡೇಶ್ವಾಲ್ಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಹೈಟೆಕ್ ಕೋಳಿ ಅಂಕ ನಡೆಸುವ ಉದ್ದೇಶದಿಂದ ಪೆಂಡಾಲ್ ಹಾಕುತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಬಂಟ್ವಾಳ ಗ್ರಾಮಾಂತರ ಠಾಣಾ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಹರೀಶ್, ಗ್ರಾಮ ಕರಣಿಕ ಕರಿಬಸಪ್ಪ ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ.

ಕೆಲದಿನಗಳ ಹಿಂದಷ್ಟೇ ಇದೇ ರೀತಿ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ಬಳಿ ಹೈಟೆಕ್ ಕೋಳಿ ಅಂಕ ನಡೆಯುತ್ತಿತ್ತು. ಆ ಸಂದರ್ಭ ಗ್ಯಾಲರಿ ಕುಸಿದು ಬಿದ್ದು ಇಬ್ಬರು ಕೋಳಿ ಜೂಜು ಪ್ರಿಯರು ಕಾಲು ಮುರಿದುಕೊಂಡಿದ್ದರು. ಕೋಳಿ ಜೂಜು ಅಕ್ರಮವಾಗಿದ್ದರೂ ಜಿಲ್ಲೆಯಾದ್ಯಂತ ಆಯಾಯಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಬಾಡೂಟದ ಆಸೆಗಾಗಿ ಒಂದಿಷ್ಟು ಪುಡಿಗಾಸು ಪಡೆದು ಅಕ್ರಮ ಕೋಳಿ ಅಂಕ ನಡೆಸಲು ಒಪ್ಪಿಗೆ ನೀಡುತ್ತಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕಟ್ಟುನಿಟ್ಟಾಗಿ ಅಕ್ರಮ ಕೋಳಿ ಅಂಕವನ್ನು ಮಟ್ಟಹಾಕುವ ಮೂಲಕ ಜನರ ಶಾಂತಿಯುತ ಬದುಕಿಗೆ ಕೈಜೋಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.