ದ.ಕ ಜಿಲ್ಲೆಯಲ್ಲಿ ಉಳುವವನೇ ಹೊಲದೊಡೆಯ ಕಾನೂನು ಜಾರಿಗೊಳಿಸಲು ಕಮ್ಯುನಿಸ್ಟ್ ನಾಯಕರು ಭೂ ಮಾಲೀಕರನ್ನು ದಿಟ್ಟವಾಗಿ ಎದುರಿಸಿ ನಡೆಸಿದ ಸಮರಧೀರ ಹೋರಾಟದ ಫಲವಾಗಿ ಬಡ ರೈತರು ಭೂಮಿಯ ಒಡೆಯರಾಗಲು ಸಾಧ್ಯವಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಕಾರ್ಮಿಕ ವರ್ಗದ ಹಾಗೂ ಜನಸಾಮಾನ್ಯರ ಯಾವುದೇ ಪ್ರಶ್ನೆಗಳು ಎದುರಾದಾಗ ಅವುಗಳ ವಿರುದ್ದ ಹೋರಾಟ ನಡೆಸಿ ಜನತೆಯ ಗಟ್ಟಿ ಧ್ವನಿಯಾಗುವಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರವೇ ಹಿರಿದಾದದ್ದು.ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ತ್ಯಾಗ ಬಲಿದಾನದ ಪರಂಪರೆಯನ್ನು ಕೂಡ ಕಮ್ಯುನಿಸ್ಟ್ ಪಕ್ಷ ಹೊಂದಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಅಬಿಪ್ರಾಯ ಪಟ್ಟರು.
ಅವರು ಸಿಪಿಐಎಂ ಕುತ್ತಾರು ಯುವಜನ ಶಾಖೆಯ ಸಮ್ಮೇಳನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ CPIM ಯುವನಾಯಕರಾದ ಡಾ.ಜೀವನ್ ರಾಜ್ ಕುತ್ತಾರುರವರು ಮಾತನಾಡುತ್ತಾ,ಜಾಗತಿಕ ಮಟ್ಟದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಭಾವ ವಿಸ್ತಾರಗೊಳ್ಳುತ್ತಿದ್ದು, ಯುವಜನತೆ ಅತ್ಯಧಿಕ ಸಂಖ್ಯೆಯಲ್ಲಿ ಸಮಾಜವಾದಿ ಸಿದ್ದಾಂತದತ್ತ ಆಕರ್ಷಣೆಗೊಳಗಾಗುತ್ತಿದ್ದಾರೆ.ಇತ್ತೀಚಿಗೆ ಜಗತ್ತಿನ ಹಲವು ದೇಶಗಳಲ್ಲಿ ಎಡಪಂಥೀಯ ಸರಕಾರಗಳು ಅಸ್ತಿತ್ವಕ್ಕೆ ಬಂದಿರುವುದೇ ಸಾಕ್ಷಿ.ಬಂಡವಾಳಶಾಹಿ ಸಿದ್ದಾಂತದ ಲಾಭಕೋರತನ ಬಹುಸಂಖ್ಯಾತ ಜನರನ್ನು ಹಸಿವಿನ ಕೂಪಕ್ಕೆ ತಳ್ಳುತ್ತಿದ್ದು ಜನತೆಯ ಬದುಕನ್ನೇ ಸರ್ವನಾಶಮಾಡುತ್ತಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಹಿರಿಯ ಮುಖಂಡರಾದ ಕಾಂ. ರಾಮಚಂದ್ರ ತೇವುಲ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.ಈ ವೇಳೆ ಜಿಲ್ಲಾ ಸಮಿತಿ ಸದಸ್ಯರಾದ ಕಾಂ. ಕೃಷ್ಣಪ್ಪ ಸಾಲ್ಯಾನ್,ಮುನ್ನೂರು ಗ್ರಾಮ ಸಮಿತಿ ಕಾರ್ಯದರ್ಶಿ ಕಾಂ. ಶೇಖರ್ ಕುಂದರ್, ಗ್ರಾಮ ಸಮಿತಿ ಸದಸ್ಯರಾದ ಚಂದ್ರಹಾಸ್. ಡಿ, ಸುನೀಲ್ ತೇವುಲ, ಶಾಖಾ ಕಾರ್ಯದರ್ಶಿ ಶ್ರಾವಣ್ ತೇವುಲ ಉಪಸ್ಥಿತರಿದ್ದರು.
ಸಮ್ಮೇಳನವು ಸ್ಥಳೀಯ ರಸ್ತೆಗಳ ಅವ್ಯವಸ್ಥೆ ಹಾಗೂ ಬಡಜನರಿಗೆ ನಿವೇಶನ ನೀಡಬೇಕೆಂಬ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿತು. ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಸುನಿಲ್ ತೇವುಲರವರನ್ನು ನೂತನ ಶಾಖಾ ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು. ಕೊನೆಯಲ್ಲಿ ದಿವ್ಯರಾಜ್ ತೇವುಲರವರು ವಂದನಾರ್ಪಣೆಗೈದರು.
