ಪೈಪ್ ಲೈನ್ ಎಡವಟ್ಟಿನಿಂದ ರಸ್ತೆಯಲ್ಲಿ ಗುಂಡಿ; ಗುಂಡಿಯಿಂದಾಗಿ ರಸ್ತೆಗೆ ಬಿದ್ದ ಆಕ್ಟಿವಾ.. ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು.

ಕರಾವಳಿ

ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಪಂ.ವ್ಯಾಪ್ತಿಯ ತಾಮರಾಜೆ ಮಸೀದಿ ಮುಂಭಾಗದಲ್ಲಿ ಇದೇ 10ರಂದು ಮಂಗಳವಾರ ರಾತ್ರಿ ನಡೆದಿದ್ದ ರಸ್ತೆ ಅಪಘಾತ. ಸಾಲೆತ್ತೂರಿನಲ್ಲಿರುವ ಪ್ರಸಿದ್ಧ ವೈದ್ಯರ ಬಳಿ ಪುತ್ತೂರಿನಿಂದ ಸಂಬಂಧಿಕನ ಜೊತೆ ಆಕ್ಟಿವಾದಲ್ಲಿ ಬರುತ್ತಿದ್ದ ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಧರ್ಮಪಾಲ ಗೌಡರ ಪತ್ನಿ ಸುಂದರಿ(48) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞಾಹೀನರಾಗಿದ್ದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಕಾಲ ಐಸಿಯುನಲ್ಲಿದ್ದ ಗಾಯಾಳು ಸುಂದರಿಯವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ರಸ್ತೆಯ ತಳಭಾಗದಲ್ಲಿ ಹಾಕಲಾಗಿದ್ದ ಕೊಳ್ನಾಡು ಗ್ರಾಮ ಪಂಚಾಯತ್ ಕುಡಿಯುವ ನೀರಿನ ಪೈಪ್ ಪದೇ ಪದೇ ಘಾಸಿಗೊಂಡು ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿತ್ತು. ರಾತ್ರಿ ಸಂಚರಿಸುವ ವಾಹನ ಸವಾರರಿಗೆ ರಸ್ತೆಯಲ್ಲಿನ ಮರಣಗುಂಡಿ ಗೋಚರಿಸದೇ ಹಲವು ಅಪಘಾತಗಳು ನಡೆದಿದ್ಜವು. ಪಂಚಾಯತ್ ಬೇಜವಾಬ್ದಾರಿ ಹಾಗೂ ರಾಜ್ಯ ಹೆದ್ದಾರಿ ಅಧಿಕಾರಿಗಳೇ ಅಪಘಾತಕ್ಕೆ ಕಾರಣವೆಂದು ವಾಹನ ಸವಾರರು ಆರೋಪಿಸಿದ್ದಾರೆ.

ಕೆಲದಿನಗಳ ಹಿಂದಷ್ಟೇ ಇದೇ ಗುಂಡಿಗೆ ರಾತ್ರಿ ಹೊತ್ತು ದ್ವಿಚಕ್ರ ಸವಾರರು ಬಿದ್ದು ಅದೃಷ್ಟವಶಾತ್ ಬಚಾವಾಗಿದ್ದರು. ಹಲವು ಅಪಘಾತಗಳು ನಡೆದಿದ್ದರೂ ಎಚ್ಚೆತ್ತುಕೊಳ್ಳದ
ಕೊಳ್ನಾಡು ಗ್ರಾಮ ಪಂಚಾಯತ್ ವ್ಯವಸ್ಥೆ, ಪಿಡಬ್ಲ್ಯೂಡಿ ಅಧಿಕಾರಿಗಳಿಂದಾಗಿ ವೈದ್ಯರಲ್ಲಿಗೆ ಬರುತ್ತಿದ್ದ ಪುತ್ತೂರಿನ ಬಡಕುಟುಂಬದ ಮಹಿಳೆ ಬಲಿಯಾದರು. ರಸ್ತೆ ದುರವಸ್ಥೆಯಿಂದಾಗಿ ವಾಹನ ಅಪಘಾತಗಳು ಸಂಭವಿಸಿದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಇತ್ತೀಚೆಗಷ್ಟೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಪೀಠ ತೀರ್ಪು ನೀಡಿತ್ತು.