ಈದ್ ಮಿಲಾದ್ ಮೆರವಣಿಗೆಗೆ ಮುತ್ತಿಗೆ ಹಾಕುವ ಸಂಘಪರಿವಾರದ “ಬಿ. ಸಿ ರೋಡ್ ಚಲೋ” ಕೋಮು ಪ್ರಚೋದಕ

ಕರಾವಳಿ

ಮತೀಯ ಕೊಲೆ, ಹಲ್ಲೆ ಪ್ರಕರಣದ ಅಪಾಯಕಾರಿ ವ್ಯಕ್ತಿಗಳು ಇದ್ದರೂ, ಪೊಲೀಸ್ ಇಲಾಖೆ ಪ್ರತಿಭಟನಾ ಸಭೆ ಎಂದು ಸ್ಥಳದಲ್ಲೇ ಪರಿಗಣಿಸಿ ಅವಕಾಶ ಒದಗಿಸಿದ್ದು ನಿಜಕ್ಕೂ ಆಘಾತಕಾರಿ ಸಂಗತಿ.

ಕಾಮ್ರೇಡ್ ಮುನೀರ್ ಕಾಟಿಪಳ್ಳ

ಬಿ ಸಿ ರೋಡ್ ನಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಮುತ್ತಿಗೆ ಹಾಕುವ ಸಂಘಪರಿವಾರದ “ಬಿ ಸಿ ರೋಡ್ ಚಲೋ” ಕೋಮು ಪ್ರಚೋದಕ ಗುಂಪಿನಲ್ಲಿ ವರ್ಷಗಳ ಹಿಂದೆ ಬಂಟ್ವಾಳದ ಕಲಾಯಿ ಎಂಬಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆ ಪ್ರಕರಣದ ಆರೋಪಿಗಳು ಮತ್ತು ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿಗಳು ಇದ್ದದ್ದು ವರದಿಯಾಗಿದೆ.

ಅನುಮತಿ ಇಲ್ಲದೆ ಈ ರೀತಿ ಭಿನ್ನ ಧರ್ಮದ ಹಬ್ಬದ ಮೆರವಣಿಗೆ ತಡೆಯುವ ಸಮಾಜ ಕಂಟಕ ಕಾರ್ಯಕ್ರಮದಲ್ಲಿ ಮತೀಯ ದ್ವೇಷದಿಂದ ಕೊಲೆ, ಹಲ್ಲೆ ಪ್ರಕರಣದ ಅಪಾಯಾಕಾರಿ ವ್ಯಕ್ತಿಗಳು ಇದ್ದರೂ, ಪೊಲೀಸ್ ಇಲಾಖೆ ಇಂತಹ ಕಾರ್ಯಕ್ರಮವನ್ನು ಪ್ರತಿಭಟನಾ ಸಭೆ ಎಂದು ಸ್ಥಳದಲ್ಲೇ ಪರಿಗಣಿಸಿ ಅವಕಾಶ ಒದಗಿಸಿದ್ದು ನಿಜಕ್ಕೂ ಆಶ್ಚರ್ಯಕಾರಿ, ಆಘಾತಕಾರಿ ಸಂಗತಿ. ಅದಲ್ಲದೆ ಈ ಗುಂಪು ಬಿ. ಸಿ ರೋಡ್ ನಲ್ಲಿ ಸೇರಿ ಪ್ರಚೋದನಾಕಾರಿಯಾಗಿ ವರ್ತಿಸುತ್ತಿರುವಾಗ ಸ್ಥಳದಲ್ಲಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗಳ ಸಹಿತ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು ಎಂಬುದು ನಂಬಲು ಕಷ್ಟವಾಗುವ ವಿದ್ಯಾಮಾನ. ರಾಜ್ಯ ಸರಕಾರದ ಗೃಹ ಇಲಾಖೆ ಇದಕ್ಕೆ ಉತ್ತರ ನೀಡಬೇಕು. ಕೋಮುಶಕ್ತಿಗಳ ಮುಂದೆ ಈ ಪೊಲೀಸ್ ಇಲಾಖೆ ಈ ಮಟ್ಟಿಗೆ ಮಂಡಿಯೂರುವುದು ಕಲ್ಪಿಸಿಕೊಳ್ಳಲೂ ಕಷ್ಟವಾಗುವ ವಿಷಯ.