ಪೋಕ್ಸೋ ಪ್ರಕರಣದ ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..

ಕರಾವಳಿ

ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವಿನಲ್ಲಿ ದುಷ್ಕೃತ್ಯ..

ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕ ಕುದ್ದುಪದವು ಜಂಕ್ಷನಲ್ಲಿರುವ ಮಹಮ್ಮದ್ ಅಶ್ರಫ್ ಮಾಲಿಕತ್ವದ ಎಂ.ಎಮ್.ಸ್ಟೋರ್ಸ್ ಅಂಗಡಿಗೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದಲ್ಲಿ ಮಹಮ್ಮದ್ ಅಶ್ರಫ್ ನನ್ನು ವಿಟ್ಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಕೇವಲ ಐದು ದಿನದಲ್ಲೇ ಆರೋಪಿ ಅಶ್ರಫ್ ಜಾಮೀನು ಪಡೆದು ಹೊರ ಬಂದಿದ್ದ. ಈ ವಿಚಾರ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅಶ್ರಫ್ ಅವರ ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರೊಬ್ಬರು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದರಿಂದ ಸಂಪೂರ್ಣ ಬೆಂಕಿಗಾಹುತಿ ಆಗುವುದು ತಪ್ಪಿದಂತಾಗಿದೆ. ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ದುಷ್ಕೃತ್ಯ ಎಸಗಿದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.