ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್ ಮಿಶ್ರಾ ಅವರು ‘ಸೆಕ್ಷನ್ 6ಎ’ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, ಭಿನ್ನ ನಿಲುವು ತಳೆದಿರುವ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ, ‘ಈ ಸೆಕ್ಷನ್ ಅಸಾಂವಿಧಾನಿಕ’ ಎಂದು ಹೇಳಿದ್ದಾರೆ.
‘ಅಸ್ಸಾಂ ಒಪ್ಪಂದವು ಅಕ್ರಮ ವಲಸೆ ಸಮಸ್ಯೆಗೆ ಕಂಡುಕೊಂಡ ರಾಜಕೀಯ ಪರಿಹಾರವಾದರೆ, ಸೆಕ್ಷನ್ 6ಎ ಶಾಸನಾತ್ಮಕ ಪರಿಹಾರವಾಗಿದೆ’ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ‘ಇತರ ದೇಶಗಳಿಂದ ಭಾರತಕ್ಕೆ ವಲಸೆ ಬರುವುದನ್ನು ತಗ್ಗಿಸಬೇಕು ಹಾಗೂ ಅದಾಗಲೇ ವಲಸೆ ಬಂದಿರುವವರಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡುವ ಉದ್ಧೇಶದಿಂದ ಸೆಕ್ಷನ್ 6ಎ ಅನ್ನು ಸೇರಿಸಲಾಗಿದೆ’ ಎಂದು ತಾವೇ ಬರೆದ ತೀರ್ಪಿನಲ್ಲಿ ಸಿಜೆಐ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಸುಂದ್ರೇಶ್ ಹಾಗೂ ಮನೋಜ್ ಮಿಶ್ರಾ ಅವರು ಸಿಜೆಐ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ‘ಸೆಕ್ಷನ್ 6ಎ’ ದ ಸಿಂಧುತ್ವ ಎತ್ತಿ ಹಿಡಿದಿದ್ದರೂ, ನ್ಯಾಯಮೂರ್ತಿ ಸೂರ್ಯಕಾಂತ್ ಪ್ರತ್ಯೇಕ ತೀರ್ಪು ಬರೆದಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳಾದ ಅಸ್ಸಾಂ ಪಬ್ಲಿಕ್ ವರ್ಕ್ಸ್, ಅಸ್ಸಾಂ ಸನ್ಮಿಲಿತ ಮಹಾಸಂಘ ಹಾಗೂ ಇತರರು ಸೇರಿದಂತೆ 17 ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.
ಡಿ.ವೈ.ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ ಬಾಂಗ್ಲಾದೇಶ ಯುದ್ಧದ ಬಳಿಕ ಉದ್ಭವಿಸಿದ್ದ ಸನ್ನಿವೇಶ ಹಿನ್ನೆಲೆಯಲ್ಲಿ ಪೌರತ್ವ ಕಾಯ್ದೆಯ ಈ ಸೆಕ್ಷನ್ನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. 1966ರ ಜನವರಿ 1ರಿಂದ 1971ರ ಮಾರ್ಚ್ 25ರ ನಡುವೆ ಅಸ್ಸಾಂಗೆ ಬಂದಿರುವ ವಲಸಿಗರಿಗೆ ಕಾಯ್ದೆಯ ಈ ಸೆಕ್ಷನ್ ಭಾರತೀಯ ಪೌರತ್ವ ನೀಡಲು ಅವಕಾಶ ಕಲ್ಪಿಸುತ್ತದೆ. ವಿಶೇಷವಾಗಿ ಈ ಅವಧಿಯಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಗೆ ಈ ಸೆಕ್ಷನ್ನ ಪ್ರಯೋಜನ ಸಿಗುತ್ತದೆ. ಆಗಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಫುಲ್ಲಕುಮಾರ್ ಮಹಂತ ನೇತೃತ್ವದ ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ (ಎಎಎಸ್ಯು) ನಡುವೆ ಏರ್ಪಟ್ಟ ‘ಅಸ್ಸಾಂ ಒಪ್ಪಂದ’ದಂತೆ 1985ರಲ್ಲಿ ಈ ಅವಕಾಶವನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಸ್ಸಾಂ ಒಪ್ಪಂದದಲ್ಲಿ ವಿವರಿಸಿರುವಂತೆ ವಲಸಿಗರು ಎಂದು ಪರಿಗಣಿಸಲಾಗುವ ಜನರಿಗೆ ಈ ಸೆಕ್ಷನ್ನಡಿ ಪೌರತ್ವ ನೀಡಲಾಗುತ್ತದೆ.
ತೀರ್ಪಿನ ಪ್ರಮುಖ ಅಂಶಗಳು
ಪೌರತ್ವ ಕಾಯ್ದೆಯಲ್ಲಿ ಇಂತಹ ಅವಕಾಶ (ಸೆಕ್ಷನ್ 6ಎ) ಸೇರ್ಪಡೆ ಮಾಡುವುದಕ್ಕೆ ಸಂಸತ್ಗೆ ಶಾಸನಬದ್ಧ ಅಧಿಕಾರ ಇದೆ. ಅಸ್ಸಾಂ ಪ್ರವೇಶ ಮಾಡಿದ್ದನ್ನು ಗುರುತಿಸಲು ಹಾಗೂ ಪೌರತ್ವ ನೀಡುವುದಕ್ಕಾಗಿ 1971ರ ಮಾರ್ಚ್ 25 ಅನ್ನು ಕಟ್ಆಫ್ ದಿನಾಂಕ ಎಂದು ನಿರ್ಧರಿಸಿದ್ದು ಸರಿಯಾಗಿದೆ. ಒಂದು ರಾಜ್ಯದಲ್ಲಿ ವಿವಿಧ ಜನಾಂಗೀಯ ಗುಂಪುಗಳಿವೆ ಎಂದರೆ ಅದು ಸಂವಿಧಾನದ 29(1) ವಿಧಿ ಉಲ್ಲಂಘನೆಯಾಗುವುದಿಲ್ಲ.ಅಕ್ರಮ ವಲಸೆಗೆ ಕಡಿವಾಣ ಹಾಕುವುದಕ್ಕೆ ಪ್ರಬಲ ನೀತಿ ರೂಪಿಸುವ ಅಗತ್ಯವಿದೆ. ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸೇರ್ಪಡೆಯು ಸಂವಿಧಾನದ 6 ಮತ್ತು 7ನೇ ವಿಧಿಯ ಉಲ್ಲಂಘನೆಯಾಗುವುದಿಲ್ಲ. ಮಾನವೀಯ ಕಳಕಳಿ ಹಾಗೂ ಸ್ಥಳೀಯ ಜನರ ರಕ್ಷಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೆಕ್ಷನ್ 6ಎ ಸೇರ್ಪಡೆ ಮಾಡಲಾಗಿದೆ. ಅಸ್ಸಾಂಗೆ ವಲಸೆ ಬಂದವರ ಸಂಖ್ಯೆ 40 ಲಕ್ಷ. ಪಶ್ಷಿಮ ಬಂಗಾಳ- 57, ಲಕ್ಷ ಮೇಘಾಲಯ, 30 ಸಾವಿರ ಹಾಗೂ ತ್ರಿಪುರಾಕ್ಕೆ ಬಂದ ವಲಸಿಗರ ಸಂಖ್ಯೆ 3.25 ಲಕ್ಷ. ಆದರೆ ಪಶ್ಚಿಮ ಬಂಗಾಳಕ್ಕೆ ಹೋಲಿಸಿದರೆ ಅಸ್ಸಾಂನ ಜನಸಂಖ್ಯೆ ಹಾಗೂ ಭೂಪ್ರದೇಶ ಕಡಿಮೆ. ಹೀಗಾಗಿ ವಲಸಿಗರಿಂದಾಗಿ ಅಸ್ಸಾಂ ಹೆಚ್ಚು ಸಮಸ್ಯೆ ಎದುರಿಸಬೇಕಾಗುತ್ತದೆ
