ರಾಜ್ಯದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ನಡೆದ ಪೊಲೀಸ್ ಸಂಸರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದರು. ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿ 6 ಸಾವಿರ ಸಿಸಿ ಕ್ಯಾಮೆರಾಗಳು, 260 ಕ್ಕೂ ಹೆಚ್ಚು ಹೆದ್ದಾರಿಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ. ಜನರ ಪ್ರಾಣ, ಆಸ್ತಿಗಳನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ದವಾಗಿದ್ದು, ಇದಕ್ಕಾಗಿ 2025ರಲ್ಲಿ 10 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ 2,000 ಕೋಟಿ ರೂ. ನೀಡಿದ್ದೇವೆ ಎಂದು ಅವರು ಹೇಳಿದರು.
ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸ್ ಮಕ್ಕಳಿಗಾಗಿ ಏಳು ಪ್ರಮುಖ ಸ್ಥಳಗಳಲ್ಲಿ ಏಳು ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಅವರು ಘೋಷಿಸಿದರು. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಮಂದಿ, ರಾಜ್ಯದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದಲ್ಲಿರುವಾಗಲೇ ಹುತಾತ್ಮರಾಗಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಕೋರುತ್ತಲೇ ಕುಟುಂಬದವರ ದುಃಖದಲ್ಲಿ ಭಾಗಿ ಆಗುತ್ತೇವೆ. ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ, ಜನರ ಪ್ರಾಣ, ಮಾನ ಕಾಪಾಡುವ ಹೊತ್ತಲ್ಲಿ ಇವರೆಲ್ಲಾ ಹುತಾತ್ಮರಾಗಿದ್ದಾರೆ. ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ಪೊಲೀಸ್ ಸಿಬ್ಬಂದಿ. ಇವರ ಜೊತೆಗೆ ಸರ್ಕಾರ ಇರುತ್ತದೆ ಎಂದು ಅವರು ತಿಳಿಸಿದರು.

ಗೃಹ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
