ಅಣಬೆಗಳಂತೆ ಅಲ್ಲಲ್ಲಿ ಕುಂತಿದ್ದಾರೆ ನಕಲಿ ಡಾಕ್ಟ್ರುಗಳು.! ಆರೋಗ್ಯ ಇಲಾಖೆ ಕಾರ್ಯಾಚರಣೆ 623 ನಕಲಿ ಡಾಕ್ಟರ್ ಗಳು ಪತ್ತೆ

ಕರಾವಳಿ

ದಕ್ಷಿಣ ಕನ್ನಡದಲ್ಲಿ 17, ಉಡುಪಿಯಲ್ಲಿ 3 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ

ಆರೋಗ್ಯ ಇಲಾಖೆ ಈ ವರ್ಷದಲ್ಲಿ 623 ನಕಲಿ ವೈದ್ಯರನ್ನು ಇಲಾಖೆ ಪತ್ತೆ ಹಚ್ಚಿದ್ದು ಇವರ ಮೇಲೆ ಕ್ರಮಕ್ಕೆ ಮುಂದಾಗಿದೆ. ಕೋಲಾರ, ವಿಜಯಪುರ, ತುಮಕೂರು ಭಾಗದಲ್ಲೇ ಹೆಚ್ಚು ಫೇಕ್ ವೈದ್ಯರಿದ್ದಾರೆ ಎನ್ನುವುದು ಬಹಿರಂಗವಾಗಿದೆ.

ರಾಜ್ಯದಲ್ಲಿ ಆಗಾಗ ಸಂಚಲನ ಸೃಷ್ಟಿಸುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿರುವಾಗ ಆರೋಗ್ಯ ಇಲಾಖೆ ಕೂಡ ತನ್ನ ಅಧಿಕಾರಿಗಳ ಜತೆಗೆ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ನಕಲಿ ವೈದ್ಯರ ಪತ್ತೆ ಜತೆಗೆ ಇದಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಅಧಿಕ ನಕಲಿ ಕ್ಲಿನಿಕ್ , ಲ್ಯಾಬ್ ಗಳಿಗೂ ಬೀಗ ಜಡಿಯಲಾಗಿದೆ.

ರಾಜ್ಯದಲ್ಲಿ ನಕಲಿ ವೈದ್ಯರಿಲ್ಲದ ಜಿಲ್ಲೆಗಳೇ ಇಲ್ಲ. ಇದರಲ್ಲಿ 2023 ರಿಂದ 2024 ರ ಸೆಪ್ಟೆಂಬರ್ ತನಕದ ದಾಳಿಯಲ್ಲಿ ಕೋಲಾರ ಜಿಲ್ಲೆಯಲ್ಲಿ 115 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ. ಇದರ ಜತೆಗೆ ತುಮಕೂರಿನಲ್ಲಿ 84, ವಿಜಯನಗರದಲ್ಲಿ 81, ಕಲಬುರ್ಗಿ ಯಲ್ಲಿ 64 ನಕಲಿ ವೈದ್ಯರು ಹೆಚ್ಚಿರುವ ಜಿಲ್ಲೆಗಳು ಉಳಿದಂತೆ ದಕ್ಷಿಣ ಕನ್ನಡದಲ್ಲಿ 17, ಉಡುಪಿಯಲ್ಲಿ 3 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ. ಆರೋಗ್ಯ ಇಲಾಖೆ ಈಗ ನಕಲಿ ವೈದ್ಯರ ಕುರಿತು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ.

“ಹೆಣ್ಣು ಭ್ರೂಣ ಹತ್ಯೆಯ ಪ್ರಕರಣ ಬೆಳಕಿಗೆ ಬಂದ ಬಳಿಕ ನಕಲಿ ವೈದ್ಯರ ಕುರಿತು ಆರೋಗ್ಯ ಇಲಾಖೆ ಕ್ರಮ ಜರುಗಿಸಲು ಮುಂದಾಗಿದೆ. ಆದರೆ ಇಲಾಖೆ ಈ ಮೊದಲೇ ಎಚ್ಚರಗೊಂಡಿದ್ದರೆ ಸಾಕಷ್ಟು ಲಾಭವಾಗುತ್ತಿತ್ತು. ಬರೀ ಕಚೇರಿಯಲ್ಲಿ ಕೂತು ಲಕ್ಷ ವೇತನ ಪಡೆಯುವ ಇಲಾಖೆಯ ಸಿಬ್ಬಂದಿಗಳು ಫೀಲ್ಡ್ ಗೆ ಇಳಿದು ನಕಲಿಗಳ ಅಸಲಿಯತ್ತನ್ನು ಬಹಿರಂಗ ಪಡಿಸಬೇಕಾಗಿದೆ.

ಮೊದಲ ಬಾರಿಗೆ ಸಿಕ್ಕಿಬಿದ್ದ ನಕಲಿ ವೈದ್ಯರಿಗೆ 25 ಸಾವಿರ ರೂಪಾಯಿ ದಂಢ, ಎರಡನೇ ಬಾರಿ ಸಿಕ್ಕಿ ಬಿದ್ದರೆ 2.5 ಲಕ್ಷ ರೂಪಾಯಿ ಮತ್ತು ಒಂದು ವರ್ಷ ಜೈಲು ಶಿಕ್ಷೆ , ಮೂರನೇ ಬಾರಿಗೆ ಸಿಕ್ಕಿಬಿದ್ದರೆ 5 ಲಕ್ಷ ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ . ಈ ಬಾರಿ ಬಹುತೇಕ ನಕಲಿ ವೈದ್ಯರಲ್ಲಿ ಅಲೋಪತಿಯ ಬದಲು ಇತರ ವೈದ್ಯಕೀಯ ಕ್ಷೇತ್ರದಲ್ಲಿರುವವರೆ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಇಲಾಖೆ ಇಂತಹ ವೈದ್ಯರಿಗೆ ಐದಾರು ಬಾರಿ ನೋಟಿಸ್ ಕೊಟ್ಟರೂ ಪದೇ ಪದೇ ಅಣಬೆಯಂತೆ ಎದ್ದು ನಿಲ್ಲುವ ಕೆಲಸವಂತೂ ನಡೆಯುತ್ತಾ ಇದೆ.