ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಕರ್ನಾಟಕ ರಾಜ್ಯದ ಹಲವೆಡೆ ಮತ್ತು ಕೇರಳ ರಾಜ್ಯದಲ್ಲಿ ವಿಳಾಸ ಬದಲಾವಣೆ ಮಾಡಿಕೊಂಡು ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಕೊನೆಗೂ ಬಂಟ್ವಾಳ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 07.11.2004 ರಂದು ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿ ಬಂಧನಕ್ಕೆ ಸಿಗದೇ ತಲೆಮರೆಸಿಕೊಂಡಿದ್ದ ಪಾಣಾಜೆ ಗ್ರಾಮ, ಪುತ್ತೂರು ನಿವಾಸಿ ಮೊಹಮ್ಮದ್ ಶರೀಫ್ (44) ಎಂಬಾತನನ್ನು ದಿನಾಂಕ 06.11.2024 ರಂದು ಕೇರಳದ ಕಾಸರಗೋಡಿನಲ್ಲಿ ವಶಕ್ಕೆ ಪಡೆದಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಇತ್ತೀಚಿಗೆ ಕೊಲೆ ಪ್ರಕರಣ ಒಂದರಲ್ಲಿ ಕೇರಳದ ಮಂಜೇಶ್ವರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ರವರ ನೇತೃತ್ವದಲ್ಲಿ, ಪಿಎಸ್ಐ ರವರುಗಳಾದ ಹರೀಶ್ ಎಂ ಆರ್ ಮತ್ತು ಮೂರ್ತಿ ಹಾಗೂ ಸಿಬ್ಬಂದಿಗಳಾದ ಹರಿಶ್ಚಂದ್ರ ಮತ್ತು ಗಣೇಶ ರವರು ಆರೋಪಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
