ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವ್ಯವಸ್ಥೆ: ಸಾರ್ವಜನಿಕರು ಗರಂ

ಕರಾವಳಿ

ಅದ್ಯಪಾಡಿ ನಿವಾಸಿಗಳ ರೋಧನೆ ಕೇಳುವವರ್ಯಾರು..?

ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆಯಾದಾಗ ಮೊದಲು ಖುಷಿ ಪಟ್ಟಿದ್ದು ಅದ್ಯಪಾಡಿ ಗ್ರಾಮದ ನಿವಾಸಿಗಳು. ನಮ್ಮೆಲ್ಲ ಸಂಕಷ್ಟ ಮುಗಿಯಿತು; ನಮ್ಮ ಊರು ಇನ್ನು ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತದೆ ಅಂದುಕೊಂಡಿದ್ದರು . ಇವರು ಅಂದುಕೊಂಡಿದ್ದೇ ಬೇರೆ ಆದದ್ದೇ ಬೇರೆ. ಇಲ್ಲಿನ ನಿವಾಸಿಗಳ ರೋಧನೆ ಕೇಳುವವರೇ ಇಲ್ಲದಂತಾಗಿದೆ.

ಅದ್ಯಪಾಡಿ ಗ್ರಾಮದ ಸನಿಹದಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತಿ ನಿಂತಿದೆ. ಅಂದಿನಿಂದ ಇಲ್ಲಿನ ಗ್ರಾಮಸ್ಥರಿಗೆ ಶನಿಕಾಟ ಆರಂಭವಾಗಿದೆ. ಮೊದಲು ಬಜಪೆ ಪೇಟೆಗೆ ತೆರಳಲು ಎರಡು ಕಿಲೋಮೀಟರ್ ಸಾಗಿದರೆ ಸಾಕಿತ್ತು. ಆದರೆ ಇದೀಗ ಏರ್ ಪೋರ್ಟ್ ವಿಸ್ತರಣೆಯಾದ ನಂತರ ಬಜಪೆ ಪೇಟೆಗೆ, ಶಾಲಾ ಕಾಲೇಜುಗಳಿಗೆ ಮಕ್ಕಳು ತೆರಳಲು ಹತ್ತು ಕಿಲೋ ಮೀಟರ್ ಸುತ್ತು ಬಳಸಿಕೊಂಡು ಬರಬೇಕು. ಇನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆದ ನಂತರ ಊರಿನ ಕನಿಷ್ಠ ಅಭಿವೃದ್ಧಿ ಬಿಡಿ ಕುಗ್ರಾಮವಾಗಿ ಬದಲಾಗಿದೆ. ಏರ್ ಪೋರ್ಟ್ ಬಂದರೆ ಊರು ಹಾಗೆ ಆಗುತ್ತೆ ಹೀಗೆ ಆಗುತ್ತೆ ಅಂತ ಟಾಂ ಟಾಂ ಹಾಕಿದ್ದೇ ಬಂತು. ಇಲ್ಲಿನವರಿಗೆ ಸಮಸ್ಯೆ ತಪ್ಪಿದಲ್ಲ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದಲ್ಲ ಒಂದು ವಿವಾದದಿಂದಲೇ ಸುದ್ಧಿಯಾಗಿರುವುದೇ ಹೆಚ್ಚು. ಇದೀಗ ವಿಮಾನ ನಿಲ್ದಾಣ ಆಡಳಿತ ಮಂಡಳಿಯವರ ಸಾರ್ವಜನಿಕರ ಬಗ್ಗೆ ಕನಿಷ್ಠ ಕಾಳಜಿ ವಹಿಸದಿರುವುದರ ಬಗ್ಗೆ ಗ್ರಾಮಸ್ಥರು ಗರಂ ಆಗಿದ್ದಾರೆ. ಏರ್ ಪೋರ್ಟ್ ಕಾಮಗಾರಿಯಲ್ಲಿದ್ದ ಲಾರಿಯೊಂದು ಅದ್ಯಪಾಡಿ ಗ್ರಾಮದ ಸಾರ್ವಜನಿಕ ರಸ್ತೆಗೆ ಬಿದ್ದು ಐದು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇಲ್ಲಿನ ನಿವಾಸಿಗಳನ್ನು ಕೆರಳಿಸಿದೆ. ಯಾವುದಾದರೂ ಅನಾಹುತ ನಡೆದರೆ ಯಾರು ಹೊಣೆ? ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯ ತಾಳಿರುವುದು, ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ದುರಂತ ಅನ್ನದೇ ವಿಧಿಯಿಲ್ಲ.

ಏರ್ಪೋರ್ಟ್ ಗುತ್ತಿಗೆದಾರರ ದಬ್ಬಾಳಿಕೆಯಂತೂ ಹೇಳತೀರದಂತಾಗಿದೆ. ಯು.ಪಿ, ಬಿಹಾರ ಮೊದಲಾದ ಕಡೆಯ ಗುತ್ತಿಗೆದಾರರೇ ಇಲ್ಲಿ ಖಾಯಂ. ಅವರದ್ದೇ ರಾಜ ದರ್ಬಾರ್. ಸಿಕ್ಕ ಸಿಕ್ಕ ಮರಗಳನ್ನು ಕಡಿದು ಬೇಕಾಬಿಟ್ಟಿ ಸಾಗಿಸುವುದು; ಯಾವುದೇ ಕಾನೂನು ಇವರಿಗೆ ಅನ್ವಯಿಸುವುದಿಲ್ಲವೇ? ಗುತ್ತಿಗೆದಾರರ ದೌರ್ಜನ್ಯ ಮಿತಿಮೀರುತ್ತಿದೆ. ಇಲ್ಲಿನ ರಸ್ತೆಗಳ ಕಾಮಗಾರಿಯಂತೂ ತೀರಾ ಕಳಪೆ ಮಟ್ಟದ್ದು. ಮಕ್ಕಳು, ವೃದ್ಧರು ಎನ್ನದೆ ಈ ರಸ್ತೆಯಲ್ಲಿ ನಡೆದಾಡಲೂ ಕಷ್ಟ ಪಡುವಂತಾಗಿದೆ. ಇಲ್ಲಿ ಭೂಕಬಳಿಕೆಯಲ್ಲೂ ಗುತ್ತಿಗೆದಾರರು ಆಡಿದ್ದೇ ಆಟ. ಇಲ್ಲಿನ ನಿವಾಸಿಗಳನ್ನು ಹೆದರಿಸಿ, ಬೆದರಿಸಿ ಭೂಮಿ ಒತ್ತುವರಿ ಮಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳ ರೋಧನೆಗೆ ನ್ಯಾಯ ದೊರೆಯುತ್ತಿಲ್ಲ. ಗುತ್ತಿಗೆದಾರರ ಅಂಧಾ ದರ್ಬಾರ್ ನಿಂದಾಗಿ ಇಲ್ಲಿನ ನಿವಾಸಿಗಳ ಸ್ಥಿತಿ ದ್ವೀಪದಂತೆ ಆಗಿದೆ. ಹೊರಗೆ ಬರಲೂ ಆಗದೆ ಅರಣ್ಯರೋಧನ ವಾಗಿ ಬಿಟ್ಟಿದೆ ಇಲ್ಲಿನ ನಿವಾಸಿಗಳ ಸ್ಥಿತಿ.

ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳ ಪಾಡಂತೂ ನಾಯಿಪಾಡು. ಏರ್ ಪೋರ್ಟ್ ನವರು ಬೇಕಾಬಿಟ್ಟಿಯಾಗಿ ನೀರನ್ನು ಅದ್ಯಪಾಡಿ ಸುತ್ತಮುತ್ತ ಬಿಡುತ್ತಿರುವುದರಿಂದ ಇಲ್ಲಿನ ಕೃಷಿ ಚಟುವಟಿಕೆಗಳು ಸಂಪೂರ್ಣ ಹಾನಿಯಾಗಿದೆ. ನೀರಿನ ರಭಸಕ್ಕೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ಇಲ್ಲಿನ ನಿವಾಸಿಗಳು ಆತಂಕಿತರಾಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರ ಕಥೆ -ವ್ಯಥೆ ಕೇಳುವವರೇ ಇಲ್ಲವಾಗಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.