ಕಂದಾಯ, ರೆಕಾರ್ಡ್, ಸರ್ವೇ ಇಲಾಖೆಯಲ್ಲಿ ನುಂಗಣ್ಣರು.!
ಮೂಡಬಿದ್ರೆ ತಾಲ್ಲೂಕಾದ ನಂತರ ವರ್ಷದ ಹಿಂದೆ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ತಲೆ ಎತ್ತಿ ನಿಂತಿದೆ. ಆಡಳಿತ ಸೌಧ ನೋಡುಗರ ಕಣ್ಮನ ಸೆಳೆಯುತ್ತಿದೆ. ಅಷ್ಟೊಂದು ಅಚ್ಚುಕಟ್ಟಾಗಿ ಆಡಳಿತ ಸೌಧ ಇದೆ. ಇದನ್ನು ಅಲ್ಲಗಳೆಯಲಾಗದು. ಆದರೆ ಕಟ್ಟಡ ಚಂದವಿದ್ದರೆ ಸಾಕಾ, ಅಲ್ಲಿನ ಸಾರ್ವಜನಿಕರಿಗೆ ಉತ್ತಮ ಸೇವೆ ಲಭಿಸಬೇಡವೇ? ಚಂದದ ಆಡಳಿತ ಸೌಧದ ಒಳಹೊಕ್ಕರೆ ಗಬ್ಬೆದ್ದು ನಾರುವ ಅಧಿಕಾರಿಗಳ ಬಗ್ಗೆ ಇಲ್ಲಿನ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ತಾಲೂಕು ಆಡಳಿತ ಸೌಧದಲ್ಲಿ ನಡೆಯುತ್ತಿರುವುದೇನು? ಇಲ್ಲಿದೆ ಪಕ್ಕಾ ಡೀಟೈಲ್ಸ್.
ಮೂಡಬಿದ್ರೆಗೆ ಶಿಕ್ಷಣ ಕಾಶಿ ಅನ್ನುವ ಹೆಸರಿದೆ. ಮಿಜಾರಿನಿಂದ ಆಳ್ವಾಸ್ ವರೆಗೆ ಹತ್ತಾರು ವಿದ್ಯಾಸಂಸ್ಥೆಗಳು ತಲೆ ಎತ್ತಿದೆ. ತೋಡಾರು ಬಳಿಯ MITE ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಹೆಸರುವಾಸಿ. ಆಳ್ವಾಸ್ ಅಂದಾಜು 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ವಿದ್ಯಾಸಂಸ್ಥೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಸರು ತಂದುಕೊಟ್ಟವರು. ಜೈನ ಬಸದಿಗಳಿಗೂ ಈ ನಾಡು ಫೇಮಸ್. ಬಸದಿಗಳ ನಾಡು ಅನ್ನುವ ಅನ್ವರ್ಥ ನಾಮವಿದೆ. ಇಂತಹ ಹಿನ್ನೆಲೆ ಹೊಂದಿರುವ ಮೂಡಬಿದ್ರೆ ಮಂಗಳೂರು ತಾಲೂಕಿಗೆ ಒಳಪಟ್ಟಿತ್ತು. ಇತ್ತೀಚಿನ ಕೆಲ ವರ್ಷಗಳ ಹಿಂದೆ ಮೂಡಬಿದ್ರೆ ಪ್ರತ್ಯೇಕ ತಾಲೂಕಾಗಿ ಅಸ್ತಿತ್ವಕ್ಕೆ ಬಂತು. ಬೆದ್ರ ತಾಲೂಕಾದರೂ ಕೆಲವೊಂದು ಸರಕಾರಿ ಸಂಸ್ಥೆ ಮಾತ್ರ ಇಲ್ಲಿದೆ. ಉಳಿದದಕ್ಕೆ ಮಂಗಳೂರನ್ನೇ ಆಶ್ರಯಿಸಿಕೊಂಡು ಬರಬೇಕಿದೆ.

‘ದೇವರು ಕೊಟ್ಟರೂ ಪೂಜಾರಿ ಬಿಡುತ್ತಿಲ್ಲ ‘ ಅನ್ನುತ್ತಾರಲ್ಲ ಹಂಗಾಗಿ ಬಿಟ್ಟಿದೆ ಮೂಡಬಿದ್ರೆ ತಾಲೂಕು ಆಡಳಿತ ಸೌಧದ ಪರಿಸ್ಥಿತಿ. ನೀಟಾಗಿರುವ, ಚಂದ ಚಂದದ ಕೋಣೆಯಿದ್ದರೂ ಇಲ್ಲಿ ಪರ್ಮನೆಂಟ್ ತಹಶೀಲ್ದಾರ್ ಇಲ್ಲದೇ ಇರುವುದು ಇಲ್ಲಿನ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಮೂಲ್ಕಿ ತಾಲೂಕು ತಹಶೀಲ್ದಾರರಾದ ಪ್ರದೀಪ್ ಕುರ್ಡೇಕರ್ ಬೆದ್ರದ ಪ್ರಭಾರ ತಹಶೀಲ್ದಾರ್. ವಾರದಲ್ಲಿ ಎರಡೋ, ಮೂರು ದಿನ ಮಾತ್ರ ಇಲ್ಲಿಗೆ ಬರುತ್ತಾರೆ. ಏಕೆಂದರೆ ಮೂಲ್ಕಿಗೆ ಇವರು ತಹಶೀಲ್ದಾರ್. ತಹಶೀಲ್ದಾರ್ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಆದರೆ ತಾಲ್ಲೂಕಿಗೆ ಪರ್ಮನೆಂಟ್ ತಹಶೀಲ್ದಾರ್ ಇಲ್ಲದೇ ಇರುವುದರಿಂದ ಕಂದಾಯ ಇಲಾಖೆಯ ಸಂಪೂರ್ಣ ಹೊಣೆ ಇಲ್ಲಿನ ಡಿ.ಟಿ (ಉಪತಹಸೀಲ್ದಾರ್) ಗಳಿಬ್ಬರ ಹೆಗಲಿಗೆ. ಸಿಕ್ಕಿದ್ದು ಸೀರುಂಡೆ ಅನ್ನುವಂತೆ ಇಲ್ಲಿ ಡಿ.ಟಿ ಗಳದ್ದೇ ದರ್ಬಾರ್. ಹೇಳೋರಿಲ್ಲ, ಕೇಳೋರಿಲ್ಲ, ಇವರು ಆಡಿದ್ದೇ ಆಟ ಅನ್ನುವಂತಾಗಿದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿಯೇ ಝಂಡಾ ಹೂಡಿರುವ ಉಪ ತಹಶೀಲ್ದಾರ್ ಗಳಾದ ರಾಮು, ತಿಲಕ್ ಎಂಬಿಬ್ಬರು ‘ಆಳಿದುಳಿದ ಊರಿಗೆ ಉಳಿದೋನೇ ಅರಸ’ ಅನ್ನುವಂತೆ ಮೂಡಬಿದ್ರೆ ತಾಲೂಕು ಆಡಳಿತ ಸೌಧದಲ್ಲಿ ರಾಜ ದರ್ಬಾರ್ ನಡೆಸುತ್ತಿದ್ದಾರೆ. ಲಂಚ ಕೊಡದೆ ಇವರು ಕೆಲಸನೇ ಮಾಡಲ್ವಂತೆ. ಬೇರೆ ಯಾರಾದರೂ ತಮ್ಮ ಸ್ಥಾನಕ್ಕೆ ಧಕ್ಕೆ ತಂದಾರು ಅನ್ನುವ ಚಿಂತನೆಯಲ್ಲಿಯೇ ಇವರು ಕೆಲಸ ಮಾಡುವವರು. ಮೊದಲೇ ಇಲ್ಲಿಗೆ ಪರ್ಮನೆಂಟ್ ತಹಶೀಲ್ದಾರ್ ಇಲ್ಲ. ಜನಸಾಮಾನ್ಯರು ಇವರ ಬಳಿಗೆ ಕೆಲಸಕ್ಕೆ ಬರುವುದು ಕಾಮನ್. ಸಾರ್ವಜನಿಕರನ್ನು ಸತಾಯಿಸುವುದೆಂದರೆ ಇವರಿಗೆ ಬಹಳಷ್ಟು ಸಂತೋಷ. ಬ್ರೋಕರ್ ಮುಖಾಂತರ ಫೈಲ್ ಬಂದರೆ ಕೆಲಸ ಸಲೀಸು. ಇಲ್ಲವಾದರೆ ಇವರ ಕಚೇರಿಯಲ್ಲಿಯೇ ಫೈಲ್ ಮೂವ್ ಆಗುವುದೇ ಇಲ್ಲ. ಇಬ್ಬರು ಡಿ.ಟಿ ಗಳಲ್ಲಿ ರಾಮು ಸುರತ್ಕಲ್ ಮೂಲದವರಾದರೆ, ತಿಲಕ್ ಗಂಜಿಮಠದವರು. ಆಡಳಿತ ಸೌಧ ವನ್ನೇ ಅಡ್ಡೆ ಮಾಡಿಕೊಂಡು ಬಿಟ್ಟಿದ್ದಾರೆ. ಸಾರ್ವಜನಿಕರಿಗೆ ಸಖತ್ ಹಿಂಸೆ ಕೊಡುತ್ತಿದ್ದಾರೆ. ಸರಕಾರಿ ಭೂಮಿ ಒತ್ತುವರಿಯಾದರೂ, ಇವರು ಕ್ರಮ ತೆಗೆದುಕೊಳ್ಳುತ್ತಿಲ್ಲವಂತೆ. ಕಬಳಿಕೆದಾರರೊಂದಿಗೆ ಸಖ್ಯ ಬೆಳೆಸಿ ಡೀಲ್ ಮಗ ಡೀಲ್ ಕುದುರಿಸಿಕೊಳ್ಳುತ್ತಾರೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ.

ಇನ್ನು ಡಿ.ಟಿ ಜವಾಬ್ದಾರಿ ಹೊಂದಿರುವ ಬಾಲಚಂದ್ರ ಅನ್ನುವ ಅಧಿಕಾರಿಯೊಬ್ಬರಿದ್ದಾರೆ. ಇವರು ಒಳ್ಳೆಯ ಅಧಿಕಾರಿ. ಪ್ರಾಮಾಣಿಕ ಮನುಷ್ಯ. ಲಂಚ ಮುಟ್ಟದೆ ಕೆಲಸ ಮಾಡಿಕೊಡುತ್ತಾರೆ. ಈ ಬಾಲಚಂದ್ರ ಬಾಲ ಬಿಚ್ಚಿದರೆ ತಮ್ಮ ಸ್ಥಾನಕ್ಕೆ ಕುತ್ತು ತರಬಹುದು ಅಂದುಕೊಂಡು ಇವರಿಬ್ಬರು ಲಾಬಿ ನಡೆಸಿ ಡಿ.ಟಿ ಕೆಲಸದ ಜವಾಬ್ದಾರಿಯನ್ನು ನೀಡದೆ ಚುನಾವಣಾ ಶಾಖೆಗೆ ತಳ್ಳಿ ಬಿಟ್ಟಿದ್ದಾರೆ.
ಇನ್ನು ಕೇಸ್ ವರ್ಕರ್ ಆಗಿ ಇಲ್ಲೇ ಝಂಡಾ ಹೂಡಿರುವ ಅಪೂರ್ವಳದ್ದು ಇನ್ನೊಂದು ಅಪರೂಪ ಕಥೆ. ಇದೀಗ ಕೇಸ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಿರೋ ಈಕೆಗೆ ತನ್ನಿಂದ ಮೇಲೆ ಇನ್ಯಾರಿಲ್ಲ. ‘ನಾನೇ ಸುಪ್ರೀಂ’ ಅನ್ನೋ ದುರಹಂಕಾರ ತಲೆಗೆ ಅಡರಿ ಹೋಗಿದೆ. ಇಲ್ಲಿ ಸರಕಾರದ ಸುತ್ತೋಲೆಗಳಿಗೆ ಬೆಲೆಯೇ ಇಲ್ಲ. ಈಕೆಯ ಪುಟುಗೋಸಿ ಕಾನೂನುಗಳಿಗೆ ಮಾತ್ರ ಇಲ್ಲಿ ಬೆಲೆ ಇರೋದು! ಫೈಲ್ ಗಳನ್ನು ಪೆಂಡಿಂಗ್ ಇಟ್ಟು ಸತಾಯಿಸುವುದೇ ಈಕೆಯ ಕೆಲಸ. ‘ಭೂಮಿ’ ಯಲ್ಲಿ ಇದ್ದವಳನ್ನು ಕೇಸ್ ವರ್ಕರ್ ಮಾಡಿದ ಪುಣ್ಯಾತ್ಮರು ಯಾರೋ.?
ಸರ್ವೇ ಇಲಾಖೆಯಲ್ಲಿಯ ರೆಕಾರ್ಡ್ ರೂಮಿನ ಒಳಗಡೆ ಸರ್ವೇಯರ್ ಗಳು ಮಾತ್ರ ಇರಬೇಕು. ಅವರೇ ಸ್ಕೆಚ್ ತಯಾರಿಸಿ, ಅವರೇ ಸೀಲು ಹಾಕಿ ಸಹಿ ಹಾಕಿ ಕೊಡಬೇಕು. ಮತ್ತೆ ಸುಪರಿಡೆಂಟ್ ಟೇಬಲ್ ಗೆ ಹೋಗಬೇಕು. ಅವರಲ್ಲಿಯ ಸರ್ವೇ ನಂಬರ್ ಹಾಗೂ ಇಡೀ ಗ್ರಾಮದ ಸ್ಕೆಚ್ ಗೆ ತಾಳೆ ಮಾಡಿ ನೋಡಿ, ಸರಿಯಾಗಿದ್ದಲ್ಲಿ ಸೀಲ್ ಹಾಕಿ ಸಹಿ ಹಾಕಿ ಕೊಡಬೇಕು. ಆ ಬಳಿಕ ತಹಶೀಲ್ದಾರ್ ಇದನ್ನು ಸಿಸ್ಟಮ್ ನಲ್ಲಿ ಕ್ರಾಸ್ ಚೆಕ್ ಮಾಡಿ, ಚೆಕ್ ಬಂದಿ ತಾಳೆ ಆಗುತ್ತಾ ನೋಡಿ, ಸೀಲು ಹಾಕಿ ಸಹಿ ಹಾಕಿ ಕೊಡುವುದು ಸರ್ವೇ ಇಲಾಖೆಯ ಕ್ರಮ. ಆದರೆ ಮೂಡಬಿದ್ರೆ ಸರ್ವೇ ಇಲಾಖೆಯ ಕ್ರಮಗಳು ಹಾಗಲ್ಲ. ಅಲ್ಲಿಯ ವಿಚಾರ ಬೇರೇನೇ. ಇಲ್ಲಿ ಎಲ್ಲರಿಗೂ ಒಂದು ದಾರಿಯಾದರೆ ಕಳ್ಳನಿಗೊಂದು ದಾರಿ ಅಂತಾರಲ್ಲ ಹಾಗಾಗಿದೆ ಇಲ್ಲಿ.

ಮೂಡಬಿದ್ರೆ ಸರ್ವೇ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿದೆ. ಲಂಚದ ತಾಣ ಅಂದರೂ ತಪ್ಪಲ್ಲ. ಇಲ್ಲಿಂದ ಒಮ್ಮೆ ಎತ್ತಂಗಡಿಯಾಗಿದ್ದ ಕೇಸ್ ವರ್ಕರ್ ಶಕುಂತಲಾ ಮತ್ತೆ ಝಂಡಾ ಹೂಡಿದ್ದಾಳೆ. ರೆಕಾರ್ಡ್ ರೂಂ ನಲ್ಲಿ ಈಕೆಯೇ ಎಲ್ಲ! ಈಕೆ ಹೇಳಿದ್ದೇ ವೇದವಾಕ್ಯ! ಆಕೆ ಹೇಳಿದ ಡಿಮ್ಯಾಂಡ್ ಕೊಟ್ಟರೆ ಆ ಕೂಡಲೇ ನಿಮಗೆ ಸ್ಕೆಚ್ ಗ್ಯಾರಂಟಿ! ಅದಿಲ್ಲವಾ.. ತಿಂಗಳಾದರೂ ಫೈಲ್ ನಿಮಗೆ ಸಿಗಲ್ಲ. ಇಲ್ಲಿಯ ನಾಗರಿಕರು ಬಾಯಿ ಬಾಯಿ ಬಡಿಕೊಳ್ಳುತ್ತಿರುವುದು ನೋಡಿದರೆ ಇಲ್ಲಿ ಅದೇನಲ್ಲಾ ಆಗುತ್ತಿದೆ ಅಂತ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.
ಇನ್ನು ಇಲ್ಲಿನ ರೆಕಾರ್ಡ್ ರೂಂ ಬಕಾಸುರರಿಗೆ ಸ್ವರ್ಗವಾಗಿ ಬಿಟ್ಟಿದೆ. ಪೋಡಿ ಫೈಲ್ ತಿದ್ದುವುದು, ಆಕಾರ್ ಬಂದ್ ತಿದ್ದುವುದು, ಕೆಲವೊಮ್ಮೆ ಎಫ್ ಎಂಬಿನೂ ತಿರುಗಿಸುತ್ತಾರೆ. ಹಣ ಕೊಟ್ಟರೆ ಆಯಿತು ಎಂಬಂತಾಗಿದೆ. ಇಲ್ಲಿ ಏಜೆಂಟರುಗಳದ್ದೇ ದರ್ಬಾರ್. ಇಲ್ಲಿ ಕೂತಿರುವ ಶಂಕರ್ ಅನ್ನುವ ಬಕಾಸುರನಿಗೆ ಎಷ್ಟು ಕೊಟ್ಟರೂ ಸಾಕಾಗಲ್ವಂತೆ. ಮೊನ್ನೆಯಷ್ಟೇ ವೃದ್ಧ ಮಹಿಳೆಯೊಬ್ಬಳು ರೆಕಾರ್ಡ್ ರೂಂ ಗೆ ಹೋಗಿ ಫೈಲ್ ಗಾಗಿ ಕಾದು ಕಾದು ಸುಸ್ತಾಗಿ ಕಣ್ಣೀರು ಹಾಕಿದ್ದು ಇದೆ. ಈ ರೆಕಾರ್ಡ್ ರೂಮಿನ ಬಕಾಸುರರು ಆ ಅಜ್ಜಿಯನ್ನು ವರ್ಷಗಟ್ಟಲೆ ಆ ಇಲಾಖೆ, ಈ ಇಲಾಖೆ ಅಂತ ಸುಖಾಸುಮ್ಮನೆ ಅಲೆದಾಡಿಸಿದ್ದಾರೆ. ಕೊನೆಗೆ ಆ ಫೈಲ್ ರೆಕಾರ್ಡ್ ರೂಮಿನಲ್ಲೇ ಭದ್ರವಾಗಿತ್ತು. ವರ್ಷಗಟ್ಟಲೆ ಕಾಯಿಸಿದ್ದು ಮಾತ್ರವಲ್ಲ ಆ ಅಜ್ಜಿಯಿಂದಲೂ ಕಾಸು ಕಿತ್ತುಕೊಂಡಿದ್ದಾರೆ. ಇವರೆಲ್ಲ ಅಧಿಕಾರಿಗಳ? ನರ ಭಕ್ಷಕರಾ?
