ಶಿಕ್ಷಣ ಕಾಶಿಯೋ.. ಸುಸೈಡ್ ಹಾಟ್ ಸ್ಪಾಟೋ..?

ಕರಾವಳಿ

ಆಳ್ವಾಸ್ ಸಾವಿನ ಸರಮಾಲೆಗೆ ಅಂತ್ಯ ಇಲ್ಲವೇ..? ಶಿಕ್ಷಣ ಸಂಸ್ಥೆ ಇನ್ನಾದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ

ಜೈನಕಾಶಿಯೆಂದು ಹೆಸರಾಗಿರುವ ಮೂಡಬಿದ್ರೆ ಶೈಕ್ಷಣಿಕ ಕಾಶಿಯೆಂದು ಕರೆಯಲು ಮುಖ್ಯ ಕಾರಣ ಮೋಹನ್ ಆಳ್ವಾ ರವರ ಆಳ್ವಾಸ್ ಶಿಕ್ಷಣ ಸಂಸ್ಥೆ. ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸಿದ್ಧಿ ಪಡೆದಿದೆ. ಮೂವತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆಳ್ವಾಸ್ ವಿರಾಸತ್, ಜಾಂಬೂರಿ ,ನುಡಿಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಆಳ್ವಾಸ್ ಗೆ ಸರಿಸಾಟಿ ಯಾರೂ ಇಲ್ಲ. ಜೈನರ ಕಾಶಿ ಬೆದ್ರದಲ್ಲಿ ವಿದ್ಯಾಗಿರಿಯದ್ದೇ ಸಾಮ್ರಾಜ್ಯ.

ಇಷ್ಟೆಲ್ಲಾ ಹಿರಿಮೆ- ಗರಿಮೆಯನ್ನು ಹೊಂದಿರುವ ಆಳ್ವಾಸ್ ನಲ್ಲಿ ನಿಗೂಢ ಆತ್ಮಹತ್ಯಾ ಪ್ರಕರಣಗಳು ಕೊನೆ ಇಲ್ಲದಂತೆ ನಡೆಯುತ್ತಿರುವುದು, ಬಾಳಿ ಬದುಕಬೇಕಾದ ಎಳೆ ಜೀವಗಳು ಸದ್ದಿಲ್ಲದೆ ಫ್ಯಾನ್, ಹಗ್ಗಕ್ಕೆ ಬಲಿಯಾಗುತ್ತಿರುವುದು ಬಹುಶಃ ಜಿಲ್ಲೆಯಲ್ಲೇ ಆಳ್ವಾಸ್ ಸುಸೈಡ್ ನ ರಾಜಧಾನಿಯಾಗಿ ಮಾರ್ಪಟ್ಟಿದೆ. ಅದರಲ್ಲೂ ಬಹುತೇಕ ವಿದ್ಯಾರ್ಥಿನಿಯರೇ ಆತ್ಮಹತ್ಯೆಗೆ ಬಲಿಯಾಗುತ್ತಿರುವುದು ಬೆಚ್ಚಿಬೀಳಿಸುವ ಸಂಗತಿ. ಪೋಷಕರು ಹಲವಾರು ಕನಸುಗಳು ಹೊತ್ತು ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಿ ಮರಳಿ ಬರಳಿ ಎಂದು ಇಲ್ಲಿ ಕಳುಹಿಸಿದರೆ ಅವರೆಲ್ಲ ಉಸಿರು ಚೆಲ್ಲಿ ಮನೆಗೆ ಮರಳುತ್ತಿರುವುದು ಯಾವ ಪೋಷಕರಿಗಾದರೂ ಇಂತಹ ದುರ್ಗತಿಯನ್ನು ಅರಗಿಸಿಕೊಳ್ಳಲು ಸಾಧ್ಯ. ಬಹುತೇಕ ಆತ್ಮಹತ್ಯೆಗೈಯುವ ವಿದ್ಯಾರ್ಥಿಗಳು ಹೊರ ಜಿಲ್ಲೆಯವರಾಗಿದ್ದರಿಂದ ಆಳ್ವಾಸ್ ಕ್ಯಾಂಪಸ್ ನಿಂದ ಆಚೆ ಸುದ್ದಿ ಬರುತ್ತಿಲ್ಲ. ಒಟ್ಟಾರೆ ಸಾವಿನ ಸರಮಾಲೆಯಾಗಿ ಆಳ್ವಾಸ್ ಬದಲಾಗಿದ್ದು, ಶಿಕ್ಷಣ ಸಂಸ್ಥೆ ಇನ್ಯಾದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

ಎರಡು ಮೂರು ದಿನಗಳ ಹಿಂದೆಯಷ್ಟೇ ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ, ಚಿತ್ರದುರ್ಗ ಮೂಲದ ಪ್ರಸ್ತುತ ಬೆಂಗಳೂರು ದಾಸರಹಳ್ಳಿ ಭುವನೇಶ್ವರ ನಗರದ ನಿವಾಸಿ ಡಿ.ಬಿ.ಸೂಸನ್ನ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ತಾನು ವಾಸವಿದ್ದ ಫಲ್ಗುಣಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ ನಿಗೂಢವಾಗಿದ್ದು. ಮೃತ ವಿದ್ಯಾರ್ಥಿನಿಯ ಪೋಷಕರು ತನ್ನ ಮಗಳ ಸಂಶಯಾಸ್ಪದ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರ ಮೇಲೆ ಅನುಮಾನವಿದೆ, ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಅದರಂತೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ನವೆಂಬರ್ ತಿಂಗಳಿನಲ್ಲಿ ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿಬಿಎಂ ವಿದ್ಯಾರ್ಥಿ ಶಶಾಂಕ್ ಯಮುನಾ ಬಾಲಕರ ವಸತಿ ನಿಲಯದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಶಶಾಂಕ್ ಮೂಲತಃ ತಮಿಳುನಾಡಿನ ಚನ್ನಗಿರಿ ಹೊಸೂರು ನಿವಾಸಿಯಾಗಿದ್ದು, ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕಾಲೇಜಿನ ಉಪನ್ಯಾಸಕರು ಹಾಗೂ ಸಹಪಾಠಿಗಳ ಅಚ್ಚುಮೆಚ್ಚಿನ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ಎಲ್ಲರ ಪ್ರೀತಿ , ಸ್ನೇಹಕ್ಕೆ ಪಾತ್ರರಾಗಿದ್ದ. ಬ್ರಿಲಿಯಂಟ್ ಸ್ಟೂಡೆಂಟ್ ಆಗಿದ್ದ ಶಶಾಂಕ್ ಸ್ವಾರಿ..ಸ್ವಾರಿ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿ ಶೋಕಸಾಗರದಲ್ಲಿ ಮುಳುಗಿಸಿದ್ದ.

ಆಳ್ವಾಸ್ ಸಾವಿನ ಸರಮಾಲೆಗೆ ದೀರ್ಘ ಇತಿಹಾಸವೇ ಇದೆ. ಅದರಲ್ಲೂ ಹೆಚ್ಚು ಸುದ್ಧಿ ಮಾಡಿದ್ದು ಎಸ್ಸೆಸ್ಸೆಲ್ಸಿ ಸ್ಟೂಡೆಂಟ್ ಕಾವ್ಯಾಳ ಸೂಸೈಡ್ ಕೇಸ್. ಬಹುತೇಕ ಆತ್ಮಹತ್ಯೆಗೈಯುವವರು ಜಿಲ್ಲೆಯ ಹೊರಗಿನವರಾಗಿದ್ದರಿಂದ ಅಷ್ಟೇನೂ ಸುದ್ಧಿಯಾಗುತ್ತಿರಲಿಲ್ಲ. ಆದರೆ ಕಾವ್ಯ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ನಿವಾಸಿಯಾಗಿದ್ದಳು. “ಅಮ್ಮಾ ಶನಿವಾರ ಬರುವಾಗ ತನ್ನ ಇಷ್ಟದ ಪಿಂಕ್ ಚೂಡಿದಾರ್ ತಗೊಂಡ್ ಬಾ, ಒಟ್ಟಿಗೆ ಹನುಮಾನ್ ದೇವಾಲಯಕ್ಕೆ ಹೋಗೋಣ ‘ ಎಂದು ತನ್ನ ಮುದ್ದಿನ ಮಗಳ ವಾಯ್ಸ್ ಕೇಳಿ ಆರಾಮವಾಗಿ ಮಲಗಿದ್ದ ತಾಯಿಗೆ ಮರುದಿನ ತನ್ನ ಹದಿನೈದರ ಹರೆಯದ ಮಗಳು ಆಳ್ವಾಸ್ ಶವಾಗಾರದಲ್ಲಿ ಮಲಗಿದ್ದಾಳೆ ಎಂಬ ಸುದ್ದಿ ಕೇಳಿದರೆ ಹೇಗಾಗಬೇಡ..? ಅಷ್ಟೊಂದು ಲವಲವಿಕೆಯಿಂದಿದ್ದ ಕಾವ್ಯ ದುರಂತ ಕಾವ್ಯವಾಗಿದ್ದಳು. ಆಳ್ವಾಸ್ ನಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಈ ಅಸಹಜ ಸಾವು ದೊಡ್ಡ ಮಟ್ಟದ ಸುದ್ಧಿಗೆ ಗ್ರಾಸವಾಗಿತ್ತು. ಆಳ್ವಾಸ್ ಶಿಕ್ಷಣ ಸಂಸ್ಥೆ ವಿರುದ್ಧ ಆಕ್ರೋಶ, ಪ್ರತಿಭಟನೆಗಳು ನಡೆದಿದ್ದವು. ಆದರೆ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ತಂದ ಪ್ರತಿಭಾವಂತೆ, ಸ್ಟಾರ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಟಾರ್ ಗಿರಿ ಪಡೆದಿದ್ದ ಕಾವ್ಯಾಳ ಅಸಹಜ ಸಾವು ನಿಗೂಢವಾಗಿಯೇ ಉಳಿಯಿತು.

ಈ ಹಿಂದೆ ಆಳ್ವಾಸ್ ನ ಉಪನ್ಯಾಸಕಿಯೊಬ್ಬಳು ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳ್ಳಾರಿ ನಿವಾಸಿಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಗೈದಿದ್ದಳು. ರಕ್ಷಿತಾ ಎಂಬ ಡಿಗ್ರಿ ವಿದ್ಯಾರ್ಥಿನಿ ಹಾಸ್ಟೆಲ್ ನ ಬಾತ್ ರೂಮ್ ನಲ್ಲಿ ಸುಸೈಡ್ ಮಾಡಿಕೊಂಡಿದ್ದಳು. ಈಕೆ ಬೆಂಗಳೂರಿನ ಜಯನಗರ ನಿವಾಸಿಯಾಗಿದ್ದಳು. ಚಿತ್ರದುರ್ಗ ಮೂಲದ ರಚನಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಳು. ಉಡುಪಿ ಜಿಲ್ಲೆಯ ಹೆರ್ಗಂದೂರು ನಿವಾಸಿ ಸಿ.ಎ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಕಳೆದ ಜುಲೈ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೇ ತಿಂಗಳಲ್ಲಿ ಮೈಸೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿ.ಎಂ ದಿವ್ಯ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೂಲತಃ ಬಾಗಲಕೋಟೆ ನಿವಾಸಿ ಆಳ್ವಾಸ್ ಸಂಸ್ಥೆಯ ಉದ್ಯೋಗಿ 24 ವರ್ಷದ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ಇದೇ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದ.17 ವರ್ಷದ ವಿದ್ಯಾರ್ಥಿನಿ ಬೆಂಗಳೂರು ನಿವಾಸಿ ವಿನುತ ಸುಸೈಡ್ ಮಾಡಿಕೊಂಡಿದ್ದಳು. ಹೀಗೆ ಆಳ್ವಾಸ್ ನ ಸಾವಿನ ಪಟ್ಟಿ ಬೆಳೆಯುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು , ಅದರಲ್ಲೂ ಬಹುಪಾಲು ಸಂಖ್ಯೆ ವಿದ್ಯಾರ್ಥಿನಿಯರದ್ದೇ ಅನ್ನುವುದು ಬೆಚ್ಚಿಬೀಳಿಸುವಂತದು. ಈ ಎಲ್ಲ ಸಾವುಗಳ ಹಕೀಕತ್ತು ಸುದ್ಧಿಯಾಗದೇ ಹೆಣದೊಂದಿಗೆ ಸಮಾಧಿ ಆಗಿ ಹೋಗಿದೆ. ಆಳ್ವಾಸ್ ಥಳುಕು ಬಳುಕಿಗೆ ಜೋತು ಬಿದ್ದು ಹಗ್ಗ ತಾವಾಗಿಯೇ ಕುತ್ತಿಗೆಗೆ ಬಿಗಿದುಕೊಳ್ಳುತ್ತಿದ್ದರೋ.. ಇನ್ಯಾರೋ ಬಿಗಿಯುತ್ತಿದ್ದರೋ..?

ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಶಿಕ್ಷಣ -ಸಾಹಿತ್ಯ-ಸಂಸ್ಕೃತಿ ಅಂದರಷ್ಟೇ ಸಾಕಾಗದು, ಮನುಷ್ಯ ಪ್ರೀತಿಯೂ ಮುಖ್ಯವಾಗಬೇಕಿದೆ. ಜಿಲ್ಲೆಯ ಬೇರೆಲ್ಲೂ ಶಿಕ್ಷಣ ಸಂಸ್ಥೆ ಗಳಲ್ಲಿ ನಡೆಯದಂತಹ ತನ್ನ ವಿದ್ಯಾರ್ಥಿಗಳ ಸಾವಿನ ಸರಮಾಲೆಗೆ ಅಂಕುಶ ಹಾಕುವ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಶಿಕ್ಷಣ ಕಾಶಿ ಬದಲು ಸುಸೈಡ್ ಕಾಶಿಯಾಗಿ ಆಳ್ವಾಸ್ ಬದಲಾಗುವುದರಲ್ಲಿ ಅನುಮಾನವೇ ಇಲ್ಲ.