ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ‘ಒನ್ ಮಿನಿಟ್ ಅಪಾಲಜಿ’ ಕೃತಿ ಇದೆ ಅದನ್ನು ಓದಿ; ನ್ಯಾಯಾಧೀಶರ ಸಲಹೆ.

ರಾಜ್ಯ

ಬೆಂಗಳೂರು: ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಕಾನೂನು ಹೋರಾಟದಲ್ಲಿರುವ ಐಎಎಸ್- ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ.ರೂಪಾ ಮೌದ್ಗೀಲ್ ಅವರಿಗೆ ರಾಜಿ ಸಂಧಾನ ಮಾಡಿಕೊಳ್ಳುವಂತೆ ಹಾಗೂ ‘ಒನ್ ಮಿನಿಟ್ ಅಪಾಲಜಿ’ ಎಂಬ ಇಂಗ್ಲಿಷ್ ಕೃತಿಯನ್ನು ಓದುವಂತೆ ಇಬ್ಬರಿಗೂ ನಗರದ 5ನೇ ಎಸಿಎಂಎಂ ನ್ಯಾಯಾಲಯ ಸಲಹೆ ನೀಡಿದೆ.

ರೂಪಾ ಅವರು 2023ರ ಫೆ.18 ಮತ್ತು 19ರಂದು ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್ ಪ್ರಕಟಿಸಿ ತೇಜೋವಧೆ ಮಾಡಿದ್ದಾರೆ. ಅವರಿಂದ ಒಂದು ಕೋಟಿ ರುಾಪಾಯಿ ಪರಿಹಾರವಾಗಿ ಕೊಡಿಸಿಕೊಡಬೇಕು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ 2023ರ ಮಾ.3ರಂದು ಮ್ಯಾಜಿಸ್ಟೇಟ್ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದರು.

ಬುಧವಾರ 5ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವಿಜಯ ಕಮಾರ್ ಜಾಟ್ಲಾ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ರೋಹಿಣಿ ಮತ್ತು ರೂಪಾ ಉಪಸ್ಥಿತರಿದ್ದರು. ರೋಹಿಣಿ ಮನವಿ ಮೇರೆಗೆ ಪಾಟಿ ಸವಾಲು ಪ್ರಕ್ರಿಯೆಯನ್ನು ನ್ಯಾಯಾಲಯ ಗೌಪ್ಯವಾಗಿ ನಡೆಸಿತು. ರೂಪಾ ಪರ ವಕೀಲ ಪಿ.ಪ್ರಸನ್ನ ಕುಮಾ‌ರ್ ಅವರು ಸುಮಾರು 45 ನಿಮಿಷಗಳ ಕಾಲ ರೋಹಿಣಿ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು.

ನಂತರ ಇಬ್ಬರು ಅಧಿಕಾರಿಗಳನ್ನುದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ನೀವಿಬ್ಬರೂ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದೀರಿ. ಉತ್ತಮ ಹೆಸರುಗಳಿಸಿದ್ದೀರಿ. ನೀವು ಸಮಾಜಕ್ಕೆ ಇನ್ನೂ ಸೇವೆ ಮಾಡಬೇಕಿದೆ. ನಿಮ್ಮ ಸಮಯವನ್ನು ಸಮಾಜ ಮತ್ತು ಸಾರ್ವಜನಿಕರ ಸೇವೆಗೆ ಬಳಸಬೇಕಿದೆ. ಅದು ಬಿಟ್ಟು ಕೋರ್ಟ್ ಕಲಾಪಕ್ಕೆ ಬಂದು ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವಂತಾಗಬಾರದು. ಹಾಗಾಗಿ, ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ಇದನ್ನು ನಾನು ನಿಮಗೆ ಹೇಳುವ ಅಗತ್ಯವಿಲ್ಲ. ಆದರೆ, ಸಮಾಜದ ಹಿತ ದೃಷ್ಟಿಯಿಂದ ಹೇಳಿದ್ದೇನೆ ಅಷ್ಟೇ. ನೀವು ಯೋಚಿಸಿ ನಿರ್ಧಾರದ ತಿಳಿಸಿದರೆ, ಅದರಂತೆ ಪ್ರಕರಣವನ್ನು ನ್ಯಾಯಾಲಯ ಮುಂದುರಿಸಲಿದೆ’ ಎಂದು ತಿಳಿಸಿದರು. ಅಲ್ಲದೆ, ‘ಇಂಗ್ಲಿಷ್‌ನಲ್ಲಿ ‘ಒನ್ ಮಿನಿಟ್ ಅಪಾಲಜಿ’ ಪುಸ್ತಕ ಇದೆ. ಅದನ್ನು ನೀವಿಬ್ಬರು ಓದಿ. ಅದರಿಂದ ನಿಮಗೆ ಏನಾದರೂ ಪ್ರಯೋಜನವಾಗಬಹುದು’ ಎಂದು ನ್ಯಾಯಾಧೀಶರು ಅವರಿಗೆ ಸಲಹೆ ನೀಡಿ, ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದರು. ಸುಪ್ರೀಂಕೋರ್ಟ್ ಕೂಡ ಈ ಹಿಂದೆ ಇಬ್ಬರೂ ಅಧಿಕಾರಿಗಳಿಗೂ ಇದೇ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.