ತುಳುನಾಡಿನ ಮಹಾಚೇತನಗಳಾದ ವಿ.ಟಿ ರಾಜಶೇಖರ, ಡೇಸಾ, ಅಸ್ಸಾದಿ ಇವರಿಗೆ ನುಡಿ ನಮನ

ಕರಾವಳಿ

ದಮನಿತರ ಧ್ವನಿಯಾಗಿದ್ದ ಈ ಮೂವರು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದರೆ ಇವರ ಜೀವನ ಚರಿತ್ರೆ ಪಠ್ಯದಲ್ಲಿ ಸೇರಿಸಿ: ಗಣ್ಯರ ಒಕ್ಕೊರಲ ಅಭಿಪ್ರಾಯ

ಇತ್ತೀಚೆಗೆ ನಮ್ಮನ್ನಗಲಿದ ವಿ.ಟಿ ರಾಜಶೇಖರ, ಪಿ.ಬಿ ಡೇಸಾ, ಪ್ರೊ. ಮುಝಫರ್ ಅಸ್ಸಾದಿ ಸ್ಮರಣಾರ್ಥ ಅವರ ಸ್ನೇಹಿತ ಬಳಗದಿಂದ ನಗರದ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂವರು ಮಹಾ ಚೇತನಗಳು ತುಳುನಾಡಿನವರು ಅನ್ನುವುದೇ ನಮ್ಮ ಹೆಮ್ಮೆ. ಅವರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿಸುವ ಮೂಲಕ ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಅಭಿಪ್ರಾಯ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರಿಂದ ಕೇಳಿಬಂತು.

ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಎನ್, ನ್ಯಾಯವಾದಿ ಬಿ.ಎ ಮುಹಮ್ಮದ್ ಹನೀಫ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಲೋಲಾಕ್ಷ, ವಿ.ಟಿ ರಾಜಶೇಖರ್ ಪುತ್ರ ಸಲೀಲ್ ಶೆಟ್ಟಿ, ಪಿ.ಬಿ ಡೇಸಾರ ಪುತ್ರಿ ಪ್ರೀತಿಕಾ ಮೊದಲಾದ ಗಣ್ಯರು ಮೂವರು ಮಹಾಚೇತನಗಳ ಬಗ್ಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿ.ಟಿ ರಾಜಶೇಖರ ಶೆಟ್ಟಿ ದಮನಿತರ ಧ್ವನಿಯಾಗಿದ್ದರು. ಲೇಖನದಲ್ಲಿ ಯಾವುದೇ ರಾಜಿ ಇರಲಿಲ್ಲ. ಕಂಡದ್ದನ್ನು ನಿರ್ಭೀತಿಯಾಗಿ ಬರೆಯುತ್ತಿದ್ದ ದಿಟ್ಟ ಪತ್ರಕರ್ತರು ಆಗಿದ್ದರು. ಶೋಷಿತ ಸಮುದಾಯದಿಂದ ಬಂದವರಲ್ಲದಿದ್ದರೂ ಶೋಷಿತ ಸಮುದಾಯವನ್ನು ಅರ್ಥೈಸಿಕೊಂಡ ಪರಿ ಅದ್ಭುತವಾದುದು. ದಲಿತ ವಾಯ್ಸ್ ಮೂಲಕ ಜನಾನುರಾಯಿಯಾಗಿದ್ದರು.

ಪಿ.ಬಿ ಡೇಸಾ ದೌರ್ಜನ್ಯಕ್ಕೊಳಗಾದವರ ಪರ ಅವರ ಹೋರಾಟಗಳು ಪ್ರಜಾಸತ್ತೆಯನ್ನು ಗಟ್ಟಿಗೊಳಿಸುವಂತದ್ದು. ದಮನಿತರ ಪರವಾಗಿದ್ದವು. ಅವರ ಹೋರಾಟದ ಸ್ಪೂರ್ತಿ ಇತರರಿಗೂ ಮಾದರಿಯಾಗುವಂತದ್ದು. ಪಿಯುಸಿಎಲ್ ಮೂಲಕ ಮಾನವ ಹಕ್ಕುಗಳ ಹೋರಾಟಕ್ಕೆ ನಿರಂತರವಾಗಿ ಶ್ರಮಿಸಿದ ಡೇಸಾ ಹೋರಾಟಗಳು ಯುವ ಸಮುದಾಯಕ್ಕೆ ಸ್ಪೂರ್ತಿಯ ಚಿಲುಮೆ.

ಪ್ರೊ. ಮುಝಾಫರ್ ಅಸ್ಸಾದಿ ಧೀಮಂತ ಪ್ರಾಧ್ಯಾಪಕರಾಗಿದ್ದವರು, ಚಿಂತನೆಯ ಕಣಜ ಆಗಿದ್ದರು. ಅವರ ಬರವಣಿಗೆಗಳು ಸಮಾಜದ ಕಣ್ಣು ತೆರೆಸುವಂತಿದ್ದವು. ಆದರೆ ಅವರು ಬರೆಯುತ್ತಾ ಹೋದರಷ್ಟೇ, ಸಂಘಟನೆ ಕಟ್ಟಿಕೊಳ್ಳಲಿಲ್ಲ. ಹೀಗಾಗಿ ಅವರಿಗೆ ವಿವಿ ಉಪಕುಲಪತಿಮಾಗುವ ಅವಕಾಶ ಸಿಗದೇ ಹೋಯಿತು.

ನುಡಿನಮನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಮಂಗಳೂರಿನ ನ್ಯಾಯವಾದಿ, ಅಹಿಂದ ಹೋರಾಟಗಾರ, ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಬಿ. ಎ. ಮುಹಮ್ಮದ್ ಹನೀಫ್ ಅವರ ಶ್ರಮವನ್ನು ಶ್ಲಾಘಿಸಬೇಕಿದೆ. ತುಳುನಾಡಿನ ಮೂವರು ಮಹಾಚೇತನಗಳಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಪ್ರಶಂಸೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ವಿ.ಟಿ ರಾಜಶೇಖರ್ ಪುತ್ರ ಸಲೀಲ್ ಶೆಟ್ಟಿ, ಪಿ.ಬಿ ಡೇಸಾ ಪುತ್ರಿ ಪ್ರೀತಿಕಾ, ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಎನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಚಿಂತಕ ಲೋಲಾಕ್ಷ, ಮಂಗಳೂರು ವಿ.ವಿ ಪ್ರಾಧ್ಯಾಪಕ ಉಮೇಶ್ ಚಂದ್ರ, ಕಾಂತಪ್ಪ ಅಲಂಗಾರು, ಯಾದವ್ ಶೆಟ್ಟಿ, ಖಾಲಿದ್ ತಣ್ಣೀರುಬಾವಿ, ಯೂಸುಫ್ ವಕ್ತಾರ್, ಬಾವಾಪದರಂಗಿ, ಟಿ.ಆರ್ ಭಟ್, ಯೋಗಿಶ್ ಶೆಟ್ಟಿ ಜೆಪ್ಪು, ರಘುವೀರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.