ಹೊಸ ಕರಡು ನೀತಿ ಜಾರಿ; ಎಂಜಿನಿಯರ್ ಸಂಘಟನೆಗಳ ವಿರೋಧ, ಮರುಪರಿಶೀಲನೆಗೆ ಒತ್ತಾಯ
ಮಂಗಳೂರು ಮಹಾನಗರಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದ್ದ ‘ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿಗಳು 2025’ರ ಕರಡಿಗೆ ಸರ್ಕಾರವು ಅನುಮೋದನೆ ನೀಡುವಾಗ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿದೆ. 2024 ರ ನವೆಂಬರ್ 28 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದಕ್ಕೆ ಸರಕಾರವು 2025 ರ ಫೆಬ್ರವರಿ 5 ರಂದು ಅನುಮೋದನೆ ನೀಡಿತ್ತು. 2025 ರ ಫೆಬ್ರವರಿ 27 ರಂದು ನಡೆದ ಪಾಲಿಕೆ ಕೌನ್ಸಿಲ್ ನ ಕೊನೆಯ ಸಭೆಯಲ್ಲಿ ಅನುಮೋದನೆ ನೀಡಿತ್ತು . ಇದರ ಪ್ರಕಾರ ಡಿಪ್ಲೊಮಾ ಹೊಂದಿದ ಸಿವಿಲ್ ಎಂಜಿನಿಯರ್‌ಗಳು ಎರಡು ಅಂತಸ್ತುಗಳ ಅಥವಾ 7.5 ಮೀಟರ್‌ನಷ್ಟು ಎತ್ತರದ ಕಟ್ಟಡಗಳ ಮೇಲ್ವಿಚಾರಣೆ ನಿರ್ವಹಿಸಲು ಮಾತ್ರ ಅಂತಿಮ ಕರಡಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ನಗರದಲ್ಲಿ ನಿರ್ಮಾಣ ಚಟುವಟಿಕೆಯ ಮೇಲ್ವಿಚಾರಣೆ ನಡೆಸುವ ವೃತ್ತಿಪರರಲ್ಲಿ ಬಿಇ ಪದವೀಧರರಿಗಿಂತ ಡಿಪ್ಲೊಮಾ ಪಡೆದ ಸಿವಿಲ್ ಎಂಜಿನಿಯರ್‌ಗಳ ಸಂಖ್ಯೆಯೇ ಜಾಸ್ತಿ. ಸರ್ಕಾರ ಪ್ರಕಟಿಸಿರುವ ಕಟ್ಟಡ ಉಪವಿಧಿಯ ಅಂತಿಮ ಕರಡು ಯಥಾವತ್ತಾಗಿ ಜಾರಿಯಾದಲ್ಲಿ ಕಟ್ಟಡಗಳ ಪರವಾನಗಿ ಪಡೆಯಲು ಮತ್ತು ನಿರ್ಮಾಣ ಚಟುವಟಿಕೆ ಮೇಲ್ವಿಚಾರಣೆಗೆ ಸಮಸ್ಯೆ ಉಂಟಾಗಲಿದೆ ಎಂದು ನಿರ್ಮಾಣ ಕ್ಷೇತ್ರದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಟ್ಟಡಗಳ ಉಪವಿಧಿ 2025ರ ಕರಡನ್ನು ರೂಪಿಸುವಾಗ ಪಾಲಿಕೆಯು ವೃತ್ತಿಪರ ಎಂಜಿನಿಯರ್‌ಗಳ ಪದವಿ ಮತ್ತು ಅನುಭವ ಆಧರಿಸಿ ಯಾರು ಯಾವ ಕೆಲಸ ನಿರ್ವಹಿಸಬಹುದು ಎಂದು ನಿಖರವಾಗಿ ವ್ಯಾಖ್ಯಾನಿಸಲಾಗಿತ್ತು. ಕಟ್ಟಡ ನಿರ್ಮಾಣದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕೆ ‘ಎಂಪ್ಯಾನೆಲ್ಡ್ ಎಂಜಿನಿಯರ್’ಗಳನ್ನು ಗುರುತಿಸುವ ಪ್ರಸ್ತಾವ ಬೈಲಾದ ಕರಡಿನಲ್ಲಿತ್ತು. ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಸ್ಥಳ ಪರಿಶೀಲನೆ ನಡೆಸಿ ಮಂಜೂರಾತಿ ಪಡೆದುಕೊಂಡ ರೀತಿಯಲ್ಲೆ ಕಟ್ಟಡ ನಿರ್ಮಾಣವಾಗುತ್ತಿದೆಯೇ, ಸೆಟ್ ಬ್ಯಾಕ್ ಬಿಡಲಾಗಿದೆಯೇ ಎಂಬ ಬಗ್ಗೆ ಪ್ಯಾನೆಲ್‌ನ ಎಂಜಿನಿಯರ್ ನೀಡುವ ವರದಿ ಆಧರಿಸಿ ಪಾಲಿಕೆ ಅಧಿಕಾರಿಗಳು ಪ್ರಮಾಣಪತ್ರ ನೀಡುವ ಅಂಶ ಕರಡಿನಲ್ಲಿತ್ತು.

ಮೂರು ವರ್ಷಗಳ ಅನುಭವ ಹೊಂದಿರುವ ಡಿಪ್ಲೊಮಾ ಸಿವಿಲ್ ಎಂಜಿನಿಯರ್ 2 ಮಹಡಿಗಳ, ಆರು ವರ್ಷಗಳ ಅನುಭವ ಹೊಂದಿರುವವರು 4 ಮಹಡಿಗಳವರೆಗೆ, 9 ವರ್ಷಗಳ ಅನುಭವವಿರುವವರು 6 ಮಹಡಿಗಳವರೆಗಿನ ಕಟ್ಟಡಕ್ಕೆ ಯೋಜನೆ ರೂಪಿಸಿ ಮಂಜೂರಾತಿ ಪಡೆಯಲು ಬೈಲಾ ಕರಡಿನಲ್ಲಿ ಅವಕಾಶವಿತ್ತು. ಬೈಲಾ ಕರಡನ್ನು ಅಂತಿಮಗೊಳಿಸುವಾಗ ಸರ್ಕಾರ, ಎಂಜಿನಿಯರ್‌ಗಳ ವಿದ್ಯಾರ್ಹತೆ ಮತ್ತು ಅವರ ಸಾಮರ್ಥ್ಯವು 2027ರ ಅ.30ರಂದು ಹೊರಡಿಸಲಾಗಿದ್ದ ಅಧಿಸೂಚನೆ ಪ್ರಕಾರವೇ ಇರಬೇಕು ಎಂದು ಷರತ್ತು ವಿಧಿಸಿದೆ. ಹಾಗಾಗಿ ಡಿಪ್ಲೊಮಾ ಸಿವಿಲ್ ಎಂಜಿನಿಯರ್‌ಗಳು 100 ಚದರ ಮೀಟರ್‌ವರೆಗೆ ಹಾಗೂ ಎರಡು ಮಹಡಿಗಳ ಗರಿಷ್ಠ 7.5 ಮೀ ಎತ್ತರದ ಕಟ್ಟಡಗಳಿಗೆ ಮಾತ್ರ ಮಂಜೂರಾತಿ ಪಡೆದು ಮೇಲ್ವಿಚಾರಣೆ ನೋಡಿಕೊಳ್ಳಬಹುದಾಗಿದೆ.
ಇದನ್ನು ಕೈಬಿಡುವಂತೆ ಕ್ರೆಡೈ ಮಂಗಳೂರು ಘಟಕ, ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್, ಇಂಡಿಯನ್ ಇನ್‌ಸ್ಟಿಟ್ಯೂಷನ್ ಆಫ್ ಆರ್ಕಿಟೆಕ್ಟ್ಸ್‌ನ ಮಂಗಳೂರು ಶಾಖೆಗಳು ಒತ್ತಾಯಿಸಿವೆ. ಎಂಜಿನಿಯರ್‌ಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಅಂಶಗಳನ್ನು ಪಾಲಿಕೆಯ ಪರಿಷತ್ತಿನಲ್ಲಿ ಅಂಗೀಕಾರಗೊಂಡ ಕಟ್ಟಡ ಉಪವಿಧಿಗಳ ಕರಡಿನಲ್ಲಿರುವಂತೆಯೇ ಯಥಾವತ್ತಾಗಿ ಉಳಿಸಬೇಕು ಎಂದು ಪಾಲಿಕೆಗೆ ಹಾಗೂ ಸರ್ಕಾರಕ್ಕೆ ಎಂಜಿನಿಯರ್ ಸಂಘಟನೆಗಳು ಆಗ್ರಹಿಸಿವೆ.
