ಸರಕಾರಿ ಅಧಿಕಾರಿಗಳೆಂದರೆ ಸಾಕು ಮಾರುದ್ಧ ನಿಲ್ಲುವ ಜನಸಾಮಾನ್ಯರು. ಸರಕಾರಿ ಅಧಿಕಾರಿಗಳೆಂದರೆ ಲಂಚಬಾಕರು, ಜನಸಾಮಾನ್ಯರ ಕೆಲಸ ಮಾಡದೆ ಅಸಭ್ಯವಾಗಿ ವರ್ತಿಸುವವರು, ಇಂತಹದ್ದೇ ಬಹುಪಾಲು ಸುದ್ದಿಗಳನ್ನು ಕೇಳುತ್ತೇವೆ. ಪತ್ರಿಕೆಗಳಲ್ಲಿ ಇಂತಹದ್ದೇ ಸುದ್ದಿ ಕಾಣಸಿಗುತ್ತದೆ. ಸರಕಾರಿ ಅಧಿಕಾರಿಗಳಲ್ಲೂ ಒಳ್ಳೆಯವರು ಇದ್ದಾರೆ. ಸರಕಾರದ ಕೆಲಸವೆಂದರೆ ದೇವರ ಕೆಲಸ ಎಂದು ನಂಬಿಕೊಂಡು ಅದನ್ನು ಚಾಚೂ ತಪ್ಪದೆ ಪಾಲಿಸಿ ಜನಸ್ನೇಹಿಯಾಗಿರುವ ಅನೇಕ ಅಧಿಕಾರಿಗಳು ನಮ್ಮ ಮುಂದಿದ್ದಾರೆ. ಅವರಲ್ಲಿ ಮಂಗಳೂರು ಮಿನಿ ವಿಧಾನಸೌಧದಲ್ಲಿ ಆರ್‌ಆರ್‌ಟಿ ಕಚೇರಿಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ರವಿ ಶೆಟ್ಟಿಯವರು ಕೂಡಾ ಒಬ್ಬರು.
ರವಿ ಶೆಟ್ಟಿ ಒಬ್ಬ ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಜನ ಸಾಮಾನ್ಯರು ಮಂಗಳೂರು ಮಿನಿ ವಿಧಾನಸೌಧದಲ್ಲಿರುವ ರವಿ ಶೆಟ್ಟಿಯವರ ಹೆಸರು ಕೇಳಿದೊಡನೆ ಅವರೊಬ್ಬರು ಒಳ್ಳೆಯ ಅಧಿಕಾರಿ ಅನ್ನುವ ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಕಚೇರಿಗೆ ಕೆಲಸ ಕಾರ್ಯಕ್ಕಾಗಿ ಹಿರಿಯ ನಾಗರಿಕರು ಬಂದರೆ ಎದ್ದು ನಿಂತು ಕೂಡಲೇ ಅವರಿಗೆ ಅಗತ್ಯವಿರುವ ಕೆಲಸಗಳನ್ನು ಖುದ್ದಾಗಿಯೇ ಮಾಡಿ ಕೊಡುತ್ತಾರೆ. ಇಂತಹ ಅಪರೂಪದ ಅಧಿಕಾರಿಯಾಗಿದ್ದಾರೆ ರವಿ ಶೆಟ್ಟಿ. ಪಾಪಪುಣ್ಯದ ಬಗ್ಗೆ ಇವರಿಗೆ ಅಪಾರ ನಂಬಿಕೆ ಇರುವುದರಿಂದಲೇ ಯಾರಾದರೂ ತನ್ನ ಕಚೇರಿಗೆ ಕೆಲಸ ಬಂದರೆ ಅವರನ್ನು ಪ್ರೀತಿಯಿಂದ ಅತಿಥಿಗಳ ರೀತಿ ಕೂರಿಸಿಕೊಂಡು ಅವರಿಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಎಲ್ಲ ಕೆಲಸ ಮುಗಿದು ಫೈಲ್‌ಗೆ ಸಹಿ ಮಾತ್ರ ಬಾಕಿ ಇದ್ದರೂ ಕೆಲವು ಅಧಿಕಾರಿಗಳು ಇವತ್ತು ನಾನು ಬ್ಯುಸಿ ಇದ್ದೇನೆ. ನಾಳೆ ಬನ್ನಿ ಎಂದು ಒರಟಾಗಿ ಮಾತನಾಡುವವರೇ ಸರಕಾರಿ ಇಲಾಖೆಯಲ್ಲಿ ಅಧಿಕ ಮಂದಿ. ಆದರೆ ರವಿ ಶೆಟ್ಟಿ ಇವರಿಗೆಲ್ಲರಿಗಿಂತ ಭಿನ್ನ. ಕೆಲಸಕ್ಕೆಂದು ಬಂದವರೊಡನೆ ಅತ್ಯಂತ ಆತ್ಮೀಯತೆಯಿಂದಲೇ ಮಾತನಾಡುತ್ತಾ, ಅವರ ಕೆಲಸ ಕಾರ್ಯಗಳನ್ನೆಲ್ಲ ಮಾಡಿ ಕೊಡುತ್ತಾರೆ. ಇದನ್ನು ಕಂಡ ಜನಸಾಮಾನ್ಯರು ಹೀಗಲೂ ಇಂತಹ ಅಧಿಕಾರಿಗಳಿರುವುದು ನಮ್ಮ ಪುಣ್ಯ ಆಂತ ಹೇಳುತ್ತಾರೆ.

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗನಾಗಿರುವ ಇವರು ಕರ್ತವ್ಯ ನಿಷ್ಠೆಯಲ್ಲಂತೂ ರಾಜಿಯೇ ಇಲ್ಲ. ಬೆಳಿಗ್ಗೆ 10 ಗಂಟೆಗೆ ಕಚೇರಿಯಲ್ಲಿ ಲಭ್ಯ. ಸಮಯ ಪಾಲನೆಯನ್ನು ಅಷ್ಟೊಂದು ನಿಯತ್ತಾಗಿ ಪರಿಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದ ಜನರಂತೂ ಕಚೇರಿಗೆ ಬಂದರೆ ಸೌಜನ್ಯದಿಂದಲೇ ಇಂತೆಂತಹ ದಾಖಲೆಗಳೆಲ್ಲ ಬೇಕು. ಇಂತೆಂತಹ ಕಚೇರಿಗಳಲ್ಲಿ ಅದೆಲ್ಲ ಸಿಗುತ್ತದೆ ಅಂತ ತಿಳಿಸಿ ಹೇಳುವ ಕೆಲಸ ಮಾಡುತ್ತಾರೆ. ಸರಕಾರಿ ಇಲಾಖೆಯಲ್ಲಿ ಇವರ ಮಾನವೀಯ ಕಾಳಜಿಗಳು ಇತರ ಅಧಿಕಾರಿಗಳಿಗೆ ಮಾದರಿ, ಸರಕಾರಿ ಇಲಾಖೆಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ.
