ಶೋಷಿತರ ಮಕ್ಕಳಿಗೆ ‘ನಾಮ, ಕೇಸರಿ ಶಾಲೇ’ ಗತಿ.. ದೊಡ್ಡವರ ಮಕ್ಕಳು ವಿದೇಶದಲ್ಲಿ ಉನ್ನತ ವಿದ್ಯಾರ್ಜನೆ.!
ಬಿಜೆಪಿ ಹಾಗೂ ಅದರ ಜತೆ ಗುರುತಿಸಿಕೊಂಡಿರುವವರು, ರಾಜಕೀಯ ಲಾಭಕ್ಕಾಗಿ ಹಿಂದೂಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಸಂಘಪರಿವಾರದ ಸಂಘಟನೆಗಳು ನಮಸ್ತೆ ಸದಾ ವತ್ಸಲಾ ಮಾತೃಭೂಮಿಯಲ್ಲಿ ಹಿಂದೂ ಧರ್ಮ ಹಾಗೂ ಭಾರತ ಮಾತೆಯನ್ನು ರಕ್ಷಣೆ ಮಾಡುತ್ತೇವೆ ಎಂದು ದಿನಕ್ಕೆ ಎರಡು ಬಾರಿ ಹಾಡುತ್ತಾರೆ. ಆದರೆ ನಿಜವಾಗಿ ಹಿಂದೂ ಧರ್ಮಕ್ಕೆ ಅಪಾಯವಿರುವುದು ಕೋಮುವಾದಿ ಹಿಂದೂಗಳಿಂದ ಅನ್ನುವುದಂತೂ ಸ್ಪಷ್ಟ.

ಹಿಂದೂ ಧರ್ಮದ ಶೋಷಿತ ಸಮುದಾಯದ ಯುವಕರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಶಿಕ್ಷಣ , ಉದ್ಯೋಗದ ಬಗ್ಗೆ ಅರಿವು ಮೂಡಿಸಬೇಕಾದ ಸಮಯದಲ್ಲಿ ಧರ್ಮ ಅಪಾಯದಲ್ಲಿದೆ ಎಂದು ಹೇಳಿ ನಾಮ, ಕೇಸರಿ ಶಾಲು ಹಾಕಿ ಧರ್ಮದ ರಕ್ಷಣೆಗೆ ಕಳುಹಿಸಲಾಗುತ್ತದೆ. ಭಾಷಣ ಮಾಡುವವರ, ರಾಜಕಾರಣಿಗಳ, ದೊಡ್ಡವರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆಯುತ್ತಿದ್ದಾರೆ. ಆದರೆ ಪ್ರಚೋದನಕಾರಿ ಭಾಷಣಕ್ಕೆ ಚಪ್ಪಾಳೆ ತಟ್ಟುವವರ ಮಕ್ಕಳು ಧರ್ಮ ರಕ್ಷಣೆಯ ಉನ್ಮಾದದಲ್ಲಿದ್ದಾರೆ. ನಿಜವಾಗಿಯೂ ಹಿಂದೂ ಸಮಾಜಕ್ಕೆ ಇತರ ಸಮುದಾಯದಿಂದ ಯಾವುದೇ ಅಪಾಯವಿಲ್ಲ. ಆದರೆ ಧರ್ಮದಲ್ಲಿರುವ ಧರ್ಮಾಂಧರಿಂದಲೇ ಅಪಾಯವಿರುವುದು. ಆದರೆ ಈ ಸತ್ಯವನ್ನು ಮುಚ್ಚಿಟ್ಟು ಯುವಕರ ತಲೆಗೆ ಕೋಮು ವಿಷ ಬೀಜ ಬಿತ್ತಲಾಗುತ್ತಿದೆ.
ಇಂದು ಯುವಕರ, ಸಣ್ಣ ಮಕ್ಕಳ ತಲೆಯಲ್ಲಿ ಮತೀಯತೆಯನ್ನು ತುಂಬುವ ಕೆಲಸ ಮಾಡಲಾಗುತ್ತಿದೆ ಅನ್ನುವುದು ದುರ್ದೈವದ ಸಂಗತಿ. ವೈಯಕ್ತಿಕ ಕಾರಣಕ್ಕಾಗಿ ಮನೆ ಬಿಟ್ಟು, ಪರೀಕ್ಷೆಗೆ ಹೆದರಿ ಓಡಿ ಹೋದರೆ, ನಾಪತ್ತೆ ಆದರೆ, ಕೋಮುವಾದಿ, ಧರ್ಮಾಂದ ಹಿಂದೂಗಳು ಅದನ್ನು ಇನ್ನೊಂದು ಧರ್ಮದ ತಲೆಗೆ ಕಟ್ಟಿ ಸಮಾಜದಲ್ಲಿ ಕ್ಷೋಭೆಯನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಪ್ರೀತಿಸಿ ಓಡಿಹೋದ ಹುಡುಗಿಯರನ್ನು ಲವ್ ಜಿಹಾದ್ ಕಟ್ಟುಕತೆ ಕಟ್ಟಿ ಧರ್ಮ ಅಪಾಯದಲ್ಲಿದೆ ಅನ್ನುವ ನೆರೇಟಿವ್ ಸೃಷ್ಟಿಸುತ್ತಿದ್ದಾರೆ. ಪ್ರೀತಿ, ಭಾತೃತ್ವದ ಸಂಕೇತದ ಹಬ್ಬಗಳನ್ನು ದ್ವೇಷದ ಹಬ್ಬವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹವರಿಂದ ಪ್ರೇರಿತರಾದ ಯುವಕರು ಅನ್ಯ ಧರ್ಮದ ಪ್ರಾರ್ಥನಾಲಯಗಳನ್ನು ಗುರಿ ಮಾಡುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕಬೇಕಾದ ಧಾರ್ಮಿಕ ಸಂಘಟನೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಕೂಡ ಕೋಮುವಾದಿ ನಾಯಕರನ್ನೇ ಭಾಷಣಕ್ಕೆ ಕರೆಯಿಸಿ ಧರ್ಮದಲ್ಲಿ ಮತ್ತಷ್ಟು ಉದ್ರೇಕಕ್ಕೆ ಕಾರಣವಾಗುತ್ತಿದ್ದಾರೆ. ದೊಡ್ಡವರ ಮಕ್ಕಳು ವೈದ್ಯರು, ಇಂಜಿನಿಯರ್ ಆಗಿ ಸಮಾಜದ ಉನ್ನತ ಸ್ತರದಲ್ಲಿ ವಿರಾಜಿಸುತ್ತಿದ್ದರೆ ಬಡವರ ಮಕ್ಕಳು ಧರ್ಮ ರಕ್ಷಣೆಯ ಗುತ್ತಿಗೆ ಪಡೆದು ಬೀದಿಗೆ ಬಂದು, ಬೀದಿ ಹೆಣವಾಗುತ್ತಿದ್ದಾರೆ. ಭವಿಷ್ಯದಲ್ಲಿ ಇದು ಧರ್ಮಕ್ಕೆ, ಸಮಾಜಕ್ಕೆ ಇನ್ನಷ್ಟು ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಧರ್ಮದ ಹಿರಿಯರು, ಧಾರ್ಮಿಕ ಮುಖಂಡರು ಈ ಬಗ್ಗೆ ಆತ್ಮಾವಲೋಕನ ಮಾಡುವ ಕೆಲಸ ಮಾಡಬೇಕಿದೆ. ಇಲ್ಲವಾದರೆ ಹಿಂದೂ ಸಮಾಜ ತಮ್ಮದೇ ಧರ್ಮದಲ್ಲಿರುವ ಕೋಮುವಾದಿಗಳಿಂದ, ಧರ್ಮಾಂದರಿಂದ ಇನ್ನಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
