ಹಣದಾಸೆಗಾಗಿ ಡಬಲ್ ಮರ್ಡರ್. ನಂಬಿಗಸ್ಥ ಗೆಳೆಯರಿಂದಲೇ ಇಬ್ಬರ ಹತ್ಯೆ, ಆರೋಪ ಸಾಬೀತು. ಇಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆ.

ಕರಾವಳಿ

ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ಕಬಳಿಸುವ ಉದ್ದೇಶದಿಂದ ಇಬ್ಬರು ಗೆಳೆಯರಾದ ನಫೀರ್‌ ಮತ್ತು ಪಹೀಮ್ ರವರನ್ನು ಹತ್ಯೆಗೈದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾಸರಗೋಡು ನಿವಾಸಿಗಳಾದ ಮೊಹಮ್ಮದ್‌ ಮುಹಜೀರ್‌ ಸನಾಫ್‌, ಮೊಹಮ್ಮದ್‌ ಇರ್ಷಾದ್‌, ಮೊಹಮ್ಮದ್‌ ಸಫ್ವಾನ್‌ ಎಂಬ ಅಪರಾಧಿಗಳಿಗೆ ಏಪ್ರಿಲ್ 9 ರಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ. ತಲಶ್ಯೇರಿ ನಿವಾಸಿ ನಫೀರ್‌ ಮತ್ತು ಕೋಝಿಕೋಡ್‌ ಪಹೀಮ್ ಹತ್ಯೆಯಾದವರು.

ತಲಶ್ಯೇರಿ ನಿವಾಸಿ ನಫೀರ್‌ ಮತ್ತು ಕೋಝಿಕೋಡ್ ನಿವಾಸಿ ಪಹೀಮ್‌ ಗೆಳೆಯರಾಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ನಫೀರ್‌ ದುಬೈನಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ್ದು, ಅದನ್ನು ಚಿನ್ನದ ವಾರಸುದಾರರಿಗೆ ನೀಡದೆ ಪಹೀಮ್‌ ಜತೆಗೂಡಿ ಮಾರಾಟ ಮಾಡಲು ಯೋಜನೆ ರೂಪಿಸಿ, ಚಿನ್ನದೊಂದಿಗೆ ಇಬ್ಬರೂ ಗೋವಾಕ್ಕೆ ತೆರಳಿ, ಸ್ನೇಹಿತರಾದ ಸನಾಫ್‌, ಇರ್ಷಾದ್‌, ಸಫ್ವಾನ್‌ ಜತೆಗೂಡಿ ಸುಮಾರು 3 ಕೆ.ಜಿ. ಚಿನ್ನವನ್ನು 73 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಾರೆ. ಈ ಸಂದರ್ಭ ಮೂರು ಮಂದಿ ಆರೋಪಿಗಳು ಎಲ್ಲಾ ಹಣವನ್ನು ಲಪಟಾಯಿಸುವ ಉದ್ದೇಶದಿಂದ ನಫೀರ್‌ ಮತ್ತು ಪಹೀಮ್‌ನನ್ನು ಕೊಲೆಗೆ ಸ್ಕೆಚ್‌ ರೂಪಿಸುತ್ತಾರೆ.

ಆರೋಪಿಗಳು ತಮ್ಮ ಕಾರ್ಯ ಸಾಧನೆಗಾಗಿ ಅತ್ತಾವರ ದೇವಸ್ಥಾನವೊಂದರ ಹಿಂಬದಿ ಇರುವ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ನಂತರ ಬಾಡಿಗೆ ಕಾರೊಂದನ್ನು ಗೊತ್ತುಪಡಿಸಿ ಅದರಲ್ಲೇ ತಿರುಗಾಡುತ್ತಾರೆ. ಆರೋಪಿಗಳ ಸಹಿತ 5ಮಂದಿ ಇದೇ ಬಾಡಿಗೆ ಮನೆಯಲ್ಲೇ ವಾಸ್ತವ್ಯವಿರುತ್ತಾರೆ. 5ಮಂದಿ ಕೂಡ ಒಡನಾಡಿಗಳಂತೆ ವರ್ತಿಸುತ್ತಿದ್ದು, ಆರೋಪಿಗಳ ಕೊಲೆ ಸ್ಕೆಚ್‌ ಯಾರಿಗೂ ಅನುಮಾನ ಬರಲೇ ಇಲ್ಲ. ಕೊಲೆಗೆ ಪೂರ್ವ ತಯಾರಿಯಾಗಿ ಮೊಹಮ್ಮದ್‌ ಇರ್ಷಾದ್‌ ಚೂರಿ ಖರೀದಿಸಿದ್ದ. 2014 ಜೂ.31ರಂದು ರಾತ್ರಿ ಫಹೀಮ್‌ ಮತ್ತು ನಫೀರ್‌ ತಡರಾತ್ರಿಯವರೆಗೆ ಟಿ.ವಿ. ನೋಡಿ ಪ್ರತ್ಯೇಕ ಕೋಣೆಯಲ್ಲಿಮಲಗಿದ್ದರು. ಇಬ್ಬರೂ ಗಾಢ ನಿದ್ರೆಯಲ್ಲಿದ್ದ ಸಮಯ ಮೂವರು ಆರೋಪಿಗಳು ಚೂರಿಯಿಂದ ತಿವಿದು ಕೊಲೆ ಮಾಡುತ್ತಾರೆ.

ಕೊಲೆ ಮಾಡಿದ ಬಳಿಕ ಇಬ್ಬರ ಮೃತದೇಹಗಳ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಪ್ಲಾಸ್ಟಿಕ್‌ ಗೋಣಿ ಚೀಲಗಳಲ್ಲಿ ಹಾಕಿ, ಡಸ್ಟರ್‌ ಕಾರಿನಲ್ಲಿ ಸಾಗಿಸುತ್ತಾರೆ. ಮೊದಲೇ ಆರೋಪಿಗಳು ತೆಗೆಸಿದ್ದ ದೊಡ್ಡ ಹೊಂಡದಲ್ಲಿ ನಫೀರ್‌ ಮತ್ತು ಪಹೀಮ್‌ ರವರ ಮೃತದೇಹಗಳನ್ನು ಹಾಕಿ ಮಣ್ಣಿನಿಂದ ಮುಚ್ಚುತ್ತಾರೆ.

ಈ 5 ಮಂದಿ ಯುವಕರು ಅತ್ತಾವರದ ಬಾಡಿಗೆ ಮನೆಯಲ್ಲಿವಾಸ್ತವ್ಯವಿದ್ದು, ಇವರ ಓಡಾಟಗಳ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿತ್ತು. ಈ ತಂಡ ಮಾದಕ ಸಾಗಾಟ ಅಥವಾ ಇನ್ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಅನುಮಾನಪಟ್ಟು ಸ್ಥಳಿಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂದು, ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಗಳನ್ನು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ವರದಿ ಸಲ್ಲಿಸುತ್ತಾರೆ.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಮೂವರು ಆರೋಪಿಗಳ ವಿಚಾರಣೆಯಲ್ಲಿ ಅರೋಪ ಸಾಬೀತಾದ ಹಿನ್ನಲೆಯಲ್ಲಿ ಸೋಮವಾರ ಮೂರು ಮಂದಿ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿರುತ್ತಾರೆ. ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಏಪ್ರಿಲ್.9ರಂದು ಶಿಕ್ಷೆ ಪ್ರಮಾಣ ವಿಚಾರಣೆ ನಡೆದು, ಶಿಕ್ಷೆ ಪ್ರಕಟಿಸುವ ಸಾಧ್ಯತೆಯಿದೆ.

ಅಂದಿನ ಮಂಗಳೂರು ದಕ್ಷಿಣ ಠಾಣಾಧಿಕಾರಿ ದಿನಕರ್‌ ಶೆಟ್ಟಿ ಪ್ರಕರಣದ ವಿಚಾರಣೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ನಿವೃತ್ತ ಸರಕಾರಿ ಅಭಿಯೋಜಕ ರಾಜುಪೂಜಾರಿ, ಸರಕಾರಿ ಅಭಿಯೋಜಕರಾದ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದಾರೆ.