ಮಾತಿನ ಜಾದೂಗಾರ, ಬ್ಯಾರಿ ಸಮುದಾಯದ ನಾಯಕ, ದಿವಂಗತ ಮಾಜಿ ಶಾಸಕ ಬಿ.ಎ. ಉಮರಬ್ಬ

ಕರಾವಳಿ

ಸಮಾಜವಾದಿ ಚಿಂತಕ; ಸರ್ವಾಧಿಕಾರ ಬೇಡ-ಸ್ವಾಭಿಮಾನ ಬೇಕು ಎಂಬ ಘೋಷಣೆ ಮೊಳಗಿಸಿದ ನಾಯಕ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅತೀ ಹೆಚ್ಚು ಸುದ್ದಿಯಾದ ಬ್ಯಾರಿ ಸಮೂದಾಯದ ಶಾಸಕ ದಿವಂಗತ ಬಿ. ಎ. ಉಮರಬ್ಬ. ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಅಷ್ಟೊಂದು ಪ್ರಭಾವಿ ಪಕ್ಷ ಆಗಿರದ ಸಮಯದಲ್ಲಿ ಕಾಂಗ್ರೇಸ್ ಪಕ್ಷದ ಒಳಗೊಳಗೆಯೇ ಜಾತಿ ರಾಜಕೀಯ ತಾಂಡವಾಡುತಿತ್ತು. ಅ ಸಮಯದಲ್ಲಿ ಅಲ್ಪ ಸಂಖ್ಯಾತ ನಾಯಕನೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಬೇಕಾದರೆ ಗಾಡ್ ಫಾದರ್ ಅವಶ್ಯಕತೆ ಇತ್ತು. ಇದ್ಯಾವುದು ಇಲ್ಲದೆ ತನ್ನದೇ ಸ್ವ ವರ್ಚಸ್ಸು, ನಡವಳಿಕೆ ಮತ್ತು ಉತ್ತಮ ಮಾತುಗಾರಿಕೆಯಿಂದ ಶಾಸಕರಾಗಿ ಒಂದೇ ಅವಧಿಯಲ್ಲಿ ರಾಜ್ಯದಲ್ಲಿ ಅದರಲ್ಲೂ ವಿಧಾನ ಸೌಧದಲ್ಲಿ ಸಖತ್ ಸುದ್ದಿ ಮಾಡಿದ ಮತ್ತು ಆಗಿನ ಪತ್ರಿಕೆಗಳ ಮುಖ್ಯ ಆಕರ್ಷಣೆಯ ವರದಿ ಉಮ್ಮರಬ್ಬರ ಮಾತಿನ ಶೈಲಿಯಾಗಿತ್ತು. ವಿಟ್ಲ ಕ್ಷೇತ್ರದಲ್ಲಿ ನಾಲ್ಕು ವರ್ಷಗಳ ಕಾಲ ಶಾಸಕರಾಗಿ ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಘುಟಾನುಘಟಿ ಕಾಂಗ್ರೆಸ್ ಮುಖಂಡರಿಗೆ ತಲೆನೋವಾಗಿದ್ದ ಉಮ್ಮರಬ್ಬ ರಾಜಿಕೀಯವಾಗಿ ಇದೇ ರೀತಿ ಬೆಳೆದರೆ ತಮ್ಮ ವರ್ಚಸ್ಸು, ಇಮೇಜ್ ಎಲ್ಲವೂ ಕುಗ್ಗುತ್ತೆ ಎಂಬ ಕಾರಣಕ್ಕೆ ಮುಂದೆ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೇಟ್ ನೀಡದಂತೆ ತಡೆಯುವಲ್ಲಿ ಬಂಟವಾಳ ಮೂಲದ ಆಗಿನ ಎಂ.ಪಿ ಆಗಿದ್ದ ಕಾಂಗ್ರೇಸ್ ನಾಯಕರೊಬ್ಬರು ಸಕ್ಸಸ್ ಆದರು. ಮುಂದೆ ಕಾಂಗ್ರೇಸ್ ಗೆ ಸಡ್ಡು ಹೊಡೆದು ಪಕ್ಷೆತರರಾಗಿ ಸ್ಪರ್ದಿಸಿ ಕೆಲವೇ ಮತಗಳ ಅಂತರದಲ್ ಪರಾಜಯಗೊಂಡರು ಬಿ. ಎ ಉಮ್ಮರಬ್ಬ ಎಂಬ ಗತ್ತಿನ ರಾಜಕಾರಣಿ. ಅ ಸ್ಥಾನವನ್ನು ಚುಂಬುವಂತಹ ನಾಯಕರು ಇಂದಿನವರಗೂ ಬ್ಯಾರಿ ಸಮುದಾಯದಲ್ಲಿ ಹುಟ್ಟಿ ಬಂದಿಲ್ಲ. ಈಗಿರುವ ಕೆಲ ನಾಯಕರು ಕೇವಲ ಮುಖಸ್ತುತಿಯ ನಾ(ಲಾ)ಯಕರು. ಉಮರಬ್ಬರವರ ನಂತಹ ನಾಯಕ ಬ್ಯಾರಿ ಸಮುದಾಯದಲ್ಲಿ ಇನ್ನೊಮ್ಮೆ ಹುಟ್ಟಿಬರಲಿ ಎಂದು ಆಶಿಸೋಣ

ಇವರ ಬಗ್ಗೆ ಬ್ಯಾರಿ ಇನ್ಫೋ. ಕಾಮ್ ವೆಬ್ ಸೈಟ್ ನಿಂದ ಅನುವಾದಿಸಿದ ವರದಿ ಇಲ್ಲಿದೆ

1991ರ ನವೆಂಬರ್ 25ರ ಮುಂಜಾನೆ ನಾಡಿನ ಎಲ್ಲಾ ಪತ್ರಿಕೆಗಳು ತಮ್ಮ ಮುಖಪುಟಗಳಲ್ಲಿ ಹೊತ್ತು ತಂದ ಮಾಜಿ ಶಾಸಕ ಬಿ.ಎ.ಉಮರಬ್ಬರ ದುರಂತ ಮರಣ ವಾರ್ತೆಯನ್ನು ನೋಡಿ ಇಡೀ ರಾಜ್ಯ ಆಶ್ಚರ್ಯ, ದುಃಖ, ನೋವಿನಿಂದ ಒಂದು ಕ್ಷಣ ಸ್ತಬ್ಧವಾಗಿತ್ತು. ಜಿಲ್ಲೆಯ ರಾಜಕೀಯದಲ್ಲಿ ಇತಿಹಾಸ ನಿರ್ಮಿಸಿದ ಓರ್ವ ಅಪೂರ್ವ ವ್ಯಕ್ತಿ ಇಷ್ಟು ಬೇಗ ನಮ್ಮೆಲ್ಲರನ್ನು ಅಗಲಿ ಹೋಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಎಲ್ಲವೂ ಆ ಸೃಷ್ಟಿಕರ್ತನ ತೀರ್ಮಾನ. ಉಮರಬ್ಬ ಕೇವಲ ಓರ್ವ ರಾಜಕಾರಣಿ ಆಗಿದ್ದವರಲ್ಲ. ಅವರು ಪ್ರತಿಭೆಗಳ ಆಗರವಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಬೈಕಂಪಾಡಿಯಲ್ಲಿ ಬಿ.ಕೆ. ಅಬ್ದುಲ್ ಖಾದರ್-ಬೀಫಾತಿಮ ದಂಪತಿಯ ಪುತ್ರನಾಗಿ 1950ರ ಡಿಸೆಂಬರ್ 7ರಂದು ಬಿ.ಎ.ಉಮರಬ್ಬ ಜನಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯಲ್ಲಿ ಅಬ್ದುಲ್ ಖಾದರ್ ಉದ್ಯಮಿ ಮತ್ತು ಕೃಷಿಕರಾಗಿದ್ದರು. ಈಗಲೂ ಶಿವಮೊಗ್ಗದಲ್ಲಿರುವ ‘ಮೋಡರ್ನ್ ಟಾಕೀಸ್‌ನ್ನು ಕಟ್ಟಿಸಿದ್ದು ಕೂಡ ಅಬ್ದಲ್ ಖಾದರ್, ಉಮರಬ್ಬರು ತನ್ನ ಬಾಲ್ಯವನ್ನು ಕಮ್ಮರಡಿಯಲ್ಲೇ ಕಳೆದಿದ್ದು, ಕಮ್ಮರಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆ, ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜು, ಶಿವಮೊಗ್ಗದ ದೇಶೀಯ ವಿದ್ಯಾ ಶಾಲೆ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಲಿತು ಪದವೀಧರರಾಗಿದ್ದರು.

ವಿದ್ಯಾರ್ಥಿ ಜೀವನದಲ್ಲೇ ಉಮರಬ್ಬ ಸಾಹಿತ್ಯ, ಸಂಘಟನೆ ಮತ್ತು ಮಾತುಗಾರಿಕೆಯಿಂದಾಗಿ ಬಹಳ ಜನಪ್ರಿಯರಾಗಿದ್ದರು. ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ಆಗಿನ ಸಮಾಜವಾದಿ ನೇತಾರರುಗಳಾಗಿದ್ದ ಶಾಂತವೇರಿ ಗೋಪಾಲ ಗೌಡ, ಕೋಣಂದೂರು ಲಿಂಗಪ್ಪರ ಆಪ್ತರಾಗಿದ್ದರು. ಡಾ. ರಾಮಮನೋಹರ ಲೋಹಿಯಾ ಅವರ ರಾಜಕೀಯದ ಆದರ್ಶ ವ್ಯಕ್ತಿಯಾಗಿದ್ದರು. ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೂ ಬಹಳ ಆತ್ಮೀಯರಾಗಿದ್ದರು.
ಉಮರಬ್ಬ ಮೈಸೂರಿನಲ್ಲಿ ಕಲಿಯುತ್ತಿರುವಾಗ ಸಮಾನ ಮನಸ್ಕರ ಒಂದು ದೊಡ್ಡ ಗುಂಪಿತ್ತು. ಸಾಹಿತಿಗಳಾದ ಆಲನಹಳ್ಳಿ ಶ್ರೀಕೃಷ್ಣ, ದೇವನೂರ ಮಹದೇವ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಈ ಗುಂಪಿಗೆ ಪ್ರಖ್ಯಾತ ಪತ್ರಕರ್ತ ಪಿ. ಲಂಕೇಶ್ ಮಾರ್ಗದರ್ಶಕರಾಗಿದ್ದರು. ವಿದ್ಯಾರ್ಥಿಯಾಗಿದ್ದ ಉಮರಬ್ಬರ ಪ್ರತಿಭೆಯನ್ನು ಗುರುತಿಸಿದ ಆಗಿನ ರಾಜ್ಯ ಸರ್ಕಾರ 1970ರಲ್ಲಿ ಜಪಾನ್ ದೇಶದಲ್ಲಿ ನಡೆದ “ಎಕ್ಸ್‌ಪೋ-70′ ಉತ್ಸವಕ್ಕೆ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಕಳುಹಿಸಿತ್ತು. ಆಗ ವೀರೇಂದ್ರ ಪಾಟೀಲರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಬ್ಯಾರಿ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಬೆಳೆದ ಉಮರಬ್ಬರ ಬದುಕು ವೈವಿಧ್ಯಮಯವಾಗಿತ್ತು. ಬದುಕಲಿಕ್ಕಾಗಿ ಹೊಟೇಲ್‌ನಲ್ಲಿ ಕ್ಯಾಶಿಯರ್ ಆಗಿ, ಪ್ರೆಸ್ಸಿನಲ್ಲಿ ಪೂಫ್ ರೀಡರ್ ಆಗಿ, ಕಾಟಿಪಳ್ಳದ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿ, ನವ ಮಂಗಳೂರು ಬಂದರಿನಲ್ಲಿ ಗುಮಾಸ್ತನಾಗಿ ದುಡಿದವರು.
ಪ್ರಧಾನಿ ಇಂದಿರಾ ಗಾಂಧಿ 1975ರ ಜೂನ್ 25ರಂದು ಭಾರತಕ್ಕೆ ತುರ್ತುಪರಿಸ್ಥಿತಿ ಹೇರಿದಾಗ ಭುಗಿಲೆದ್ದ ವಿರೋಧಿ ಆಂದೋಲನದಲ್ಲಿ ಸೇರಿಕೊಳ್ಳುವುದರ ಮೂಲಕ ಉಮರಬ್ಬ ರಾಜಕೀಯ ಪ್ರವೇಶ ಮಾಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಮರಬ್ಬ ನಡೆಸಿದ ಗುಪ್ತ ಚಟುವಟಿಕೆಗಳು ಅನೇಕರಿಗೆ ತಿಳಿದಿಲ್ಲ. ಬಂಧನದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ ಅವರು ತಮ್ಮ ಭಾಷಣ, ಸಂಘಟನಾ ಚಾತುರ್ಯದಿಂದಾಗಿ ರಾಜ್ಯದಲ್ಲೇ ಗುರುತಿಸಲ್ಪಟ್ಟಿದ್ದರು. ಜಯಪ್ರಕಾಶ ನಾರಾಯಣರ ಅಭಿಮಾನಿಯಾಗಿದ್ದ ಅವರು 1977ರ ಜನವರಿ 23ರಂದು ಎಲ್ಲಾ ವಿರೋಧ ಪಕ್ಷಗಳ ಒಗ್ಗೂಡುವಿಕೆಯೊಂದಿಗೆ ಉದಯವಾದ “ಜನತಾ ಪಕ್ಷದ ಅಧಿಕೃತ ಸದಸ್ಯರಾದರು.
ಉಮರಬ್ಬರ ಕಾರ್ಯವೈಖರಿ ಮತ್ತು ಪ್ರತಿಭೆಯನ್ನು ಗುರುತಿಸಿ 1977ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಟಿಕೆಟ್ ನೀಡಿ “ವಿಟ್ಕ” ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿತು. ಆಗ ಉಮರಬ್ಬ ಕೇವಲ 27 ವರ್ಷದ ಯುವಕ.

ಆ ದಿನಗಳಲ್ಲಿ ಜಿಲ್ಲೆಯ ಮುಸ್ಲಿಮರಿಗೆ “ಜನತಾ ಪಕ್ಷ’ ಒಂದು ಅಪರಿಚಿತ ಪಕ್ಷವಾಗಿತ್ತು. ರಾಜ್ಯದಲ್ಲಿ ದೇವರಾಜ ಅರಸು ಮತ್ತು ಇಂದಿರಾಗಾಂಧಿಯವರ ಪ್ರಭಾವ ಬಹಳ ಇತ್ತು. ಆದರೂ ಉಮರಬ್ಬರ ಸ್ಪರ್ಧೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಅವರ ಭಾಷಣ ಕೇಳಲು ಹಳ್ಳಿ ಹಳ್ಳಿಗಳಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಉಮರಬ್ಬ ಮನೆ ಮಾತಾದರು. ಅವರ ಭಾಷಣದ ಧ್ವನಿ ಸುರುಳಿಗಳು ಜಿಲ್ಲೆಯಾದ್ಯಂತ ಪ್ರತಿಧ್ವನಿಸಿತು. ವಿಟ್ಲದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಕಮ್ಯುನಿಸ್ಟ್ ಪಕ್ಷದ ಬಿ.ವಿ. ಕಕ್ಕಿಲ್ಲಾಯ ಸ್ಪರ್ಧಿಸಿದ್ದರು. ಬಹಳ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಸಣ್ಣ ಮತಗಳ ಅಂತರದಿಂದ ಪರಾಭವಗೊಂಡಿದ್ದರೂ ಎಲ್ಲಾ ವರ್ಗದ ಜನರ ಪ್ರೀತಿಗೆ ಉಮರಬ್ಬ ಪಾತ್ರರಾಗಿದ್ದರು.

ಜನತಾ ಪಕ್ಷದಲ್ಲಾದ ಬೆಳವಣಿಗೆಗಳಿಂದ ಉಮರಬ್ಬ ಬಹಳ ನಿರಾಶರಾದರು. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಜನತಾ ಪಕ್ಷ ಸರ್ಕಾರ “ಮತಾಂತರ ನಿಷೇಧ ಕಾಯಿದೆ’ ಜಾರಿಗೆ ತಂದಾಗ ಉಮರಬ್ಬ ಆ ಪಕ್ಷದಲ್ಲಿ ಇದ್ದೇ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿದರು. ಮಾತ್ರವಲ್ಲ ಆ ಕರಾಳ ಕಾಯಿದೆಯ ವಿರುದ್ಧ ಜನಾಂದೋಲನ ಸೃಷ್ಟಿಸಿದರು. ಕೆಲವೇ ಸಮಯದ ನಂತರ ಒಳಜಗಳ, ಕಚ್ಚಾಟದಿಂದ ಜನತಾ ಪಕ್ಷ ಒಡೆದು ಛಿದ್ರವಾಯಿತು. ಅದರೊಂದಿಗೆ ಉಮರಬ್ಬರ ರಾಜಕೀಯ ಕನಸುಗಳೂ ನುಚ್ಚು ನೂರಾಯಿತು. ಗೊಂದಲದಲ್ಲಿ ಮುಳುಗಿದ ಉಮರಬ್ಬರಿಗೆ ಜನಸೇವೆ ಮಾಡಲು ವೇದಿಕೆಯೇ ಇಲ್ಲದಂತಾದಾಗ ಕಾಂಗ್ರೆಸ್ ಪಕ್ಷ ಅವರನ್ನು ಕೈ ಬೀಸಿ ಕರೆಯಿತು. ಅದಾಗಲೇ ಉಮರಬ್ಬರ ರಾಜಕೀಯ ಗುರು ವೀರೇಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿಯಂತಹ ನಾಯಕರ ಬೆಂಬಲವೂ ಇತ್ತು. ಅನೇಕ ಕನಸುಗಳನ್ನು ಹೊತ್ತು ಕಾಂಗ್ರೆಸ್ ಪಕ್ಷ ಸೇರಿದ ಉಮರಬ್ಬರಿಗೆ ಪಕ್ಷವು ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ನೀಡಿತು. ನಿರೀಕ್ಷೆಯಂತೆ ಬಿ.ಎ.ಉಮರಬ್ಬ 1985ರಲ್ಲಿ ಶಾಸಕರಾಗಿ ಆಯ್ಕೆಯಾದರು.
ಉಮರಬ್ಬರ ಪ್ರತಿಭೆಗೆ ತಕ್ಕ ಅವಕಾಶ ದೊರೆಯಿತು. ಸದನದಲ್ಲಿ ವಿರೋಧ ಪಕ್ಷದ ಶಾಸಕರಾಗಿ ಉಮರಬ್ಬ ಮಿಂಚಿದರು. ನಾಲ್ಕು ವರ್ಷ ಶಾಸಕರಾಗಿದ್ದ ಉಮರಬ್ಬರ ಪ್ರತಿಭೆ ಮತ್ತು ಶಕ್ತಿಗೆ ವಿಧಾನ ಸೌಧ ಸಾಕ್ಷಿಯಾಯಿತು. ಉಮರಬ್ಬ ಮಾತಾಡುತ್ತಾರೆ ಎಂದಾಗ ಇಡೀ ಸದನ ಶಾಸಕರಿಂದ, ಪತ್ರಕರ್ತರಿಂದ ಮತ್ತು ಗ್ಯಾಲರಿಯಲ್ಲಿ ವೀಕ್ಷಕರಿಂದ ತುಂಬಿ ತುಳುಕುತ್ತಿತ್ತು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಬಗ್ಗೆ ಒಂದು ವಿಶೇಷ ಗ್ರಂಥವನ್ನು ಎಂ.ವಿ. ಕಾಮತ್‌ರಿಂದ ಬರೆಸಿದ್ದರು. ‘ಚೆಲುವ ಕನ್ನಡ ನಾಡು’ ಹೆಸರಿನ ಆ ಗ್ರಂಥದಲ್ಲಿ ಅನೇಕ ತಪ್ಪು ಮಾಹಿತಿಗಳು ಇದ್ದವು. ಆ ಗ್ರಂಥದ ಲೋಪ ದೋಷಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಉಮರಬ್ಬರು ಅಂದು ಮಾಡಿದ ಭಾಷಣ ಸದನದಲ್ಲಾದ ಅತ್ಯುತ್ತಮ ಭಾಷಣ ಎಂದು ದಾಖಲಾಯಿತು. ನಾಡಿನ ಎಲ್ಲಾ ಪತ್ರಿಕೆಗಳೂ ಉಮರಬ್ಬರ ಕನ್ನಡ ಭಾಷಾ ಜ್ಞಾನವನ್ನು ಹಾಡಿ ಹೊಗಳಿದವು.

ಉಮರಬ್ಬ ‘ಮಾತಿನ ಜಾದೂಗಾರ’ ಎಂದರೂ ಅತಿಶಯೋಕ್ತಿಯಾಗಲಾರದು. ಯಾವುದೇ ಸಭೆ, ಸಮಾರಂಭ, ವಿಚಾರ ಗೋಷ್ಠಿಗಳಲ್ಲಿ ಉಮರಬ್ಬರ ಭಾಷಣ ಇದೆ ಎಂದು ಗೊತ್ತಾದರೆ ಜನ ಸಾಗರವೇ ಸೇರುತ್ತಿತ್ತು. ಅವರ ಮಾತುಗಳಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ವಿಷಯವನ್ನು ಜನರ ಮುಂದೆ ಮಂಡಿಸುವ ಅವರ ಶೈಲಿ ಅಪೂರ್ವವಾಗಿತ್ತು. 1989ರಲ್ಲಿ ಧರ್ಮಸ್ಥಳದಲ್ಲಿ ನೆರವೇರಿದ ಸರ್ವ ಧರ್ಮ ಸಮ್ಮೇಳನದಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಉಮರಬ್ಬ ನೀಡಿದ ಉಪನ್ಯಾಸ ಬಹಳ ಸುಂದರವಾಗಿತ್ತು. ಉಮರಬ್ಬರ ನಿಧನದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ತಮ್ಮ ಶ್ರದ್ಧಾಂಜಲಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಜಾತಿ-ಮತ, ಮೇಲು -ಕೀಳು ಮತ್ತು ಇದ್ದವನು, ಇಲ್ಲದವನು, ಆ ಪಕ್ಷ, ಈ ಪಕ್ಷವೆಂಬ ಯಾವ ಭೇದ ಭಾವ, ತಾರತಮ್ಯವೂ ಇಲ್ಲದ ಉಮರಬ್ಬ ನೇರ ಸ್ವಭಾವದ, ಸ್ವಾಭಿಮಾನಿ ವ್ಯಕ್ತಿ. ಚಮಚಾಗಿರಿ, ದೊಗ್ಗು ಸಲಾಮ್ ಅವರಿಗೆ ಸಾಧ್ಯವೇ ಇಲ್ಲ. ಅವರ ರಾಜಕೀಯ ದುರಂತಕ್ಕೆ ಅವರ ಈ ಸ್ವಭಾವವೇ ಕಾರಣವಾದದ್ದು ಮಾತ್ರ ವಿಪರ್ಯಾಸ.

1989ರಲ್ಲಿ ವಿಧಾನ ಸಭೆಗೆ ಚುನಾವಣೆ ಘೋಷಣೆಯಾದಾಗ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ ಕೊಟ್ಟು ಉಮರಬ್ಬ ಒಬ್ಬರಿಗೆ ಮಾತ್ರ ಟಿಕೆಟ್ ನಿರಾಕರಿಸಿತು. ಉಮರಬ್ಬ ಎದೆ ಗುಂದಲಿಲ್ಲ. “ಸರ್ವಾಧಿಕಾರ ಬೇಡ-ಸ್ವಾಭಿಮಾನ ಬೇಕು” ಎಂಬ ಘೋಷಣೆಯೊಂದಿಗೆ ‘ಆನೆ’ ಚಿಹ್ನೆಯಲ್ಲಿ ವಿಟ್ಲ ಕ್ಷೇತ್ರದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. “ಗೆಲ್ಲುವುದು ಮುಖ್ಯವಲ್ಲ. ನನ್ನ ವಿಚಾರ ಧಾರೆಗಳನ್ನು ಜನರಿಗೆ ಮುಟ್ಟಿಸುವುದು ಮುಖ್ಯ’ ಎಂದು ಹೇಳಿದ ಉಮರಬ್ಬ ಚುನಾವಣೆಯಲ್ಲಿ ಸೋತರೂ ಬಲು ದೊಡ್ಡ ಅಭಿಮಾನಿ ಬಳಗವನ್ನು ಗೆದ್ದಿದ್ದರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅವರು ಬಿತ್ತಿದ ಸ್ವಾಭಿಮಾನದ ಬೀಜ ಮೊಳಕೆಯೊಡೆಯಿತು. ಉಮರಬ್ಬ ಸೋತು ಗೆದ್ದರು. ಕಾಂಗ್ರೆಸ್ ಪಕ್ಷಕ್ಕೆ ಅವರ ಶಕ್ತಿಯ ಅರಿವಾಯಿತು. ಪುನಃ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಆ ನಂತರ ಅವರಿಗೆ ಪಕ್ಷದಲ್ಲಿ ವಿಶೇಷ ಸ್ಥಾನಮಾನ ನೀಡಲಾಯಿತು. ಇಂಟಕ್ ಕಾರ್ಮಿಕ ಸಂಘಟನೆಯ ರಾಜ್ಯ ಘಟಕದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಎನ್.ಎಂ. ಅಡ್ಯಂತಾಯ, ಬಿ. ರಮಾನಾಥ ರೈ, ವಿನಯ್‌ ಕುಮಾರ್ ಸೊರಕೆ, ವಿಜಯ ಕುಮಾರ ಶೆಟ್ಟಿ, ಅಭಯಚಂದ್ರ ಜೈನ್ ಮುಂತಾದವರ ಸಮಕಾಲೀನರಾಗಿದ್ದ ಬಿ.ಎ. ಉಮರಬ್ಬ ರಾಜಕೀಯದ ಅತ್ಯುನ್ನತ ಎತ್ತರದ ಹೊಸ್ತಿಲನ್ನು ತಲುಪುತ್ತಿರುವಾಗಲೇ ಅವರ ಆಯುಷ್ಯ ಮುಗಿಯಿತು. 1991 ನವೆಂಬರ್ 24ರಂದು ಬೆಂಗಳೂರಿನಲ್ಲಿ ತನ್ನ ಸ್ಕೂಟರ್‌ನಲ್ಲಿ ತೆರಳುತ್ತಿರುವಾಗ ಹಿಂದಿನಿಂದ ಬಂದ ಬಿಎಂಟಿಸಿ ಬಸ್ಸು ಢಿಕ್ಕಿ ಹೊಡೆದ ಅಪಘಾತದಲ್ಲಿ ಉಮರಬ್ಬ ಸ್ಥಳದಲ್ಲೇ ಅಸುನೀಗಿದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ. ಉಮರಬ್ಬರ ವ್ಯಕ್ತಿತ್ವಕ್ಕೆ ಅವರ ಮರಣಾ ನಂತರ ಅವರಿಗೆ ಸಿಕ್ಕಿದ ಗೌರವವೇ ಸಾಕ್ಷಿ. ಓರ್ವ ಮಾಜಿ ಶಾಸಕನಾಗಿದ್ದರೂ ಸಹ ಅವರ ಮೃತದೇಹವನ್ನು ಬೆಂಗಳೂರಿನಿಂದ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ಸಕಲ ಪೊಲೀಸ್ ಗೌರವದೊಂದಿಗೆ ತರಲಾಯಿತು. ಪೊಲೀಸ್ ಗೌರವ ತೋಪಿನೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರಾಜಕೀಯ, ಸಾಹಿತ್ಯ, ಧಾರ್ಮಿಕ, ಪತ್ರಿಕಾ ರಂಗ ಹೀಗೆ ಅವರ ನಿಧನಕ್ಕೆ ಸಂತಾಪದ ರಾಶಿಯೇ ಹರಿದು ಬಂತು. ಸಹಸ್ರಾರು ಜನರು ತುಂಬು ಹೃದಯದ ಶ್ರದ್ಧಾಂಜಲಿಯು ಉಮರಬ್ಬರ ನೆನಪನ್ನು ಇಂದಿಗೂ ಹಸಿರಾಗಿ ಉಳಿಸಿದೆ.

ಕೃಪೆ: bearyinfo.com