ಯೋಗಿ ನಾಡಿನಲ್ಲಿ ಭಾವಿ ಪತಿಯೆದುರೇ ಎಂಟು ಮಂದಿ ದುಷ್ಕರ್ಮಿಗಳಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ರಾಷ್ಟ್ರೀಯ

ಬಿಜೆಪಿ ಮುಖಂಡ ಸೇರಿ ಎಂಟು ಮಂದಿ ಆರೋಪಿಗಳ ಬಂಧನ

ಯುವತಿಯೊಬ್ಬಳನ್ನು ಆಕೆಯ ಭಾವಿ ಪತಿಯೆದುರೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಯೋಗಿ ಅಧಿತ್ಯನಾಥ್ ರಾಜ್ಯಭಾರ ಮಾಡುತ್ತಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಭಾವಿ ಗಂಡನ ಎದುರೇ ಯುವತಿಯನ್ನು ಬಿಜೆಪಿ ಮುಖಂಡನ ಸಹಿತ ಎಂಟು ಮಂದಿಯ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಸಂತ್ರಸ್ಥ ಯುವತಿ ಮತ್ತು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಶೀಘ್ರದಲ್ಲೇ ನಿಶ್ಚಯವಾಗಿತ್ತು. ಆದರೆ ಆತನ ಎದುರೇ ಯುವತಿಯನ್ನು ವಿವಸ್ತ್ರಗೊಳಿಸಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಏಪ್ರಿಲ್ 10 ರಂದು ಸಂತ್ರಸ್ಥ ಯುವತಿ ಮತ್ತು ಆಕೆಯ ನಿಶ್ಚಿತ ವರ ಪಡಿತರ ಚೀಟಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಕಾಲುವೆಯ ಬಳಿಯ ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದರು. ಅವರಿಬ್ಬರೇ ಅಲ್ಲಿರುವುದನ್ನು ನೋಡಿದ ಗುಂಪೊಂದು ಅವರ ಹತ್ತಿರ ಹೋಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಬಳಿಕ ವರನನ್ನು ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲದೇ ದುಷ್ಕರ್ಮಿಗಳು ಅವರ ಬಳಿ ಇದ್ದ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ದೂರಿನ ಪ್ರಕಾರ, ಹಲವು ಪುರುಷರು ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಒಬ್ಬೊಬ್ಬರಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಈ ಪ್ರಕರಣ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್ ಎಂಬಾತ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತ್ವರಿತ ನ್ಯಾಯಕ್ಕಾಗಿ ಪೊಲೀಸರು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಯೋಜಿಸುತ್ತಿದ್ದಾರೆ.