ಕರಾವಳಿಯ ಆರ್ ಎಸ್ ಎಸ್ ನ ಹಿಂದುತ್ವವಾದಿಗಳು ಚೂರಿ, ತಲವಾರು ಹಿಡಿದು ಬೀದಿಗೆ ಇಳಿಯಲ್ಲ. ಕೊಲೆ ಮಾಡಿ ಜೈಲು ಸೇರಿಲ್ಲ, ಕೊಲೆ ಆಗಿಲ್ಲ.
ಕೋಮುವಾದಕ್ಕಾಗಿ ಕೊಂದು ಸತ್ತವರೆಲ್ಲರೂ ಭೂಗತ ಲೋಕದ ಕ್ರಿಮಿನಲ್ ಗಳೇ ಹೊರತು ಹಿಂದುತ್ವವಾದಿಗಳಲ್ಲ.
✍️. ನವೀನ್ ಸೂರಿಂಜೆ, ಪತ್ರಕರ್ತರು
“ಹಿಂದುತ್ವವಾದಿ ಸಂಘಟನೆಗಳ ಹೆಸರಲ್ಲಿ ಕೊಂದು ಸತ್ತವರೆಲ್ಲರೂ ಕ್ರಿಮಿನಲ್/ಅಂಡರ್ ವಲ್ಡ್ ನವರೇ ಹೊರತು ಹಿಂದುತ್ವವಾದಿಗಳಲ್ಲ” ಎಂಬ ನನ್ನ ಹೇಳಿಕೆ ಚರ್ಚೆಯಾಗುತ್ತಿದೆ.
ನಾನು ಪತ್ರಕರ್ತನಾಗಿ ಸುಮಾರು ಎರಡು ದಶಕಗಳಿಂದ ಕರಾವಳಿಯ ಕೋಮುವಾದದ ಬಗ್ಗೆ ವರದಿಯನ್ನು ಮಾಡುತ್ತಿದ್ದೇನೆ. ಈ ಪೈಕಿ ಮಂಗಳೂರಲ್ಲಿ ವರದಿಗಾರನಾಗಿದ್ದಷ್ಟೂ ಕಾಲ ಕೋಮುವಾದ, ರೈತರ ಭೂಸ್ವಾಧೀನ, ಮಕ್ಕಳ ಕಳ್ಳಸಾಗಾಟ, ನೈತಿಕ ಪೊಲೀಸ್ ಗಿರಿ ಘಟನೆಗಳನ್ನು ಹೊರತುಪಡಿಸಿ ಬೇರೆ ವಿಷಯಗಳ ವರದಿಯನ್ನೇ ಮಾಡಿಲ್ಲ. ಆದ್ದರಿಂದಲೇ ಅಥಾರಿಟೇಟಿವ್ ಆಗಿ ಕರಾವಳಿ ಕೋಮುವಾದದ ಬಗ್ಗೆ ಮಾತನಾಡಬಲ್ಲೆ.
ಹಿಂದುತ್ವ ಸಂಘಟನೆಗಳು ಕ್ರಿಮಿನಲ್/ಭೂಗತ ಜಗತ್ತನ್ನು ಹೇಗೆ ಬಳಸುತ್ತವೆ ಎಂಬುದಕ್ಕೆ ಕರಾವಳಿ ಕೋಮುವಾದ ಚರಿತ್ರೆ ಸಾಕ್ಷಿ ಹೇಳುತ್ತದೆ. ಕರಾವಳಿಯಲ್ಲಿ ಕೊಲೆಯಾದ ಹಿಂದುತ್ವವಾದಿ ಎನಿಸಿಕೊಂಡ ವ್ಯಕ್ತಿಗಳು ಆರ್ ಎಸ್ ಎಸ್ ಹಿನ್ನಲೆಯವರೆ ? ಅವರುಗಳು ಒಂದೇ ಒಂದು ದಿನ ಆರ್ ಎಸ್ ಎಸ್ ಪಥಸಂಚಲನದಲ್ಲೂ ಭಾಗಿಯಾದವರಲ್ಲ.
ಸುಹಾಸ್ ಶೆಟ್ಟಿ ಯಾವತ್ತೂ ಕೂಡಾ ಆರ್ ಎಸ್ ಎಸ್ ಶಾಖೆಗೆ ಹೋದವರಲ್ಲ. ದಲಿತ ದೌರ್ಜನ್ಯ, ಕೀರ್ತಿ ಎಂಬ ಹಿಂದೂ ಯುವಕನ ಕೊಲೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬಿಜೆಪಿ ಸರ್ಕಾರವೇ ಅವರನ್ನು ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸಿತ್ತು. ಅವರನ್ನು ಭಜರಂಗದಳವು ಅಮಾಯಕ ಫಾಸಿಲ್ ನ ಕೊಲೆಯಲ್ಲಿ ಬಳಸಿತ್ತು.

ಇದು ಮಾತ್ರವಲ್ಲ, ಹಿಂದುತ್ವ ಸಂಘಟನೆಗಳು ತಮಗೆ ಬೇಕಾದಾಗ ಕ್ರಿಮಿನಲ್/ ಭೂಗತ ಲೋಕದ ವ್ಯಕ್ತಿಗಳನ್ನು ಹಿಂದುತ್ವ ನಾಯಕರನ್ನಾಗಿಯೂ, ಹಿಂದುತ್ವದ ನಾಯಕರನ್ನು ಕ್ರಿಮಿನಲ್ ಗಳನ್ನಾಗಿಯೂ ಬಿಂಬಿಸುತ್ತದೆ.
ಕುಳಾಯಿಯ ಸವಿತಾ ಸಮಾಜಕ್ಕೆ ಸೇರಿದ ಹಿಂದುತ್ವದ ಹಿತೈಷಿ ಹರೀಶ್ ಭಂಡಾರಿಯನ್ನು ಕೋಡಿಕೆರೆ ಗ್ಯಾಂಗ್ ಕೊಂದಾಗ ಹಿಂದೂ ಸಂಘಟನೆಗಳ ಪಾಲಿಗೆ ಕೋಡಿಕೆರೆ ಗ್ಯಾಂಗ್ ಕ್ರಿಮಿನಲ್ ಗಳಾಗಿದ್ದರು. ಅದೇ ಕೋಡಿಕೆರೆ ಗ್ಯಾಂಗ್ ಗುರುಪುರದ ಕಬೀರ್ ನನ್ನು ಕೊಲೆ ಮಾಡಿದಾಗ ಏಕಾಏಕಿ ಹಿಂದುತ್ವವಾದಿ ಎನ್ನಿಸಿಕೊಳ್ಳುತ್ತದೆ.
ಕೋಡಿಕೆರೆಯ ತಂಡದ ಶಿವರಾಜ್ ನನ್ನು ಅದೇ ತಂಡದ ಸದಸ್ಯರು ಕೊಂದಾಗ ಕೊಡಿಕೆರೆ ಗ್ಯಾಂಗ್ ನಲ್ಲಿ ಇರುವವರು ಹಿಂದೂ ವಿರೋಧಿ ಕ್ರಿಮಿನಲ್ ಗಳು. ಅದೇ ತಂಡ ಮುಸ್ಲೀಮರ ಮೇಲೆ ಹಲ್ಲೆ ನಡೆಸಿದಾಗ ಹಿಂದುತ್ವವಾದಿಗಳಾದರು.

ಮಂಜು ಅಲಿಯಾಸ್ ಕಡ್ಲೆ ಮಂಜನ ತಂಡ ಮುಸ್ಲೀಮರ ಮೇಲೆ ಹಲ್ಲೆಗಳನ್ನು ಮಾಡಿದಾಗ ಕಡ್ಲೆ ಮಂಜ ಗ್ಯಾಂಗ್ ಹಿಂದುತ್ವದ ಗ್ಯಾಂಗ್ ಆಗಿತ್ತು. ಹಾಗಾಗಿ ಕಡ್ಲೆ ಮಂಜನನ್ನು ಅವನದ್ದೇ ತಂಡ ಕೊಂದಾಗ ಅವನ ಸಹಚರರು ಹಿಂದೂ ವಿರೋಧಿಗಳು ಅನ್ನಿಸಿಕೊಂಡರು. ಆ ಬಳಿಕ ಮಂಜನನ್ನು ಕೊಂದವರು ಮುಸ್ಲೀಮರ ಮೇಲೆ ಹಲ್ಲೆ ನಡೆಸಿದಾಗ ಅವರು ದೇಶಪ್ರೇಮಿ ಹಿಂದುತ್ವವಾದಿಗಳು !
ಎಕ್ಕೂರು ಬಾಬ ಕರಾವಳಿಯ ಫೇಮಸ್ ಡಾನ್ ಎನ್ನುವುದನ್ನು ಯಾರೂ ಅಲ್ಲಗಳೆಯಲ್ಲ. ಅವರು ಹಿಂದುತ್ವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.
ಪೊಳಲಿ ಅನಂತು ಎಂಬಾತ ಕಮಲಾಕ್ಷ ಎಂಬ ಭೂಗತ ಜಗತ್ತಿನ ವ್ಯಕ್ತಿಯ ಜೊತೆ ಇದ್ದಾಗ ರೌಡಿಯಾಗಿದ್ದ. ಬೇರೆ ಬೇರೆ ಕಾರಣಕ್ಕಾಗಿ ಮುಸ್ಲಿಂರ ಮೇಲೆ ಹಲ್ಲೆ, ಕೊಲೆ ಮಾಡಿದಾಗ ಪೊಳಲಿ ಅನಂತು ಹಿಂದುತ್ವವಾದಿಯಾದ ! ಇದೇ ಪೊಳಲಿ ಅನಂತು ರೌಡಿ ಎಂಬ ಕಾರಣಕ್ಕಾಗಿ ಶವಮೆರವಣಿಗೆ ಮಾಡಕೂಡದು ಎಂದು ಕಲ್ಲಡ್ಕ ಪ್ರಭಾಕರ ಭಟ್ ಆದೇಶಿಸಿದ್ದರು.

ಪೊಳಲಿ ಅನಂತು ಕೊಲೆಯಾದಾಗ ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್ ತಕ್ಷಣ ಸಿಗಲಿಲ್ಲ. ಕಾರುಗಳೂ ನಿಲ್ಲಲಿಲ್ಲ. ಪೊಳಲಿ ಅನಂತು ಶವಯಾತ್ರೆ ಮಾಡಬೇಕು ಎಂದು ಅಂದಿನ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ನಿರ್ಧರಿಸಿದ್ದರು. ಆಗ ಕಲ್ಲಡ್ಕ ಪ್ರಭಾಕರ ಭಟ್ಟರು ಮಹೇಂದ್ರ ಕುಮಾರ್ ಗೆ ಫೋನ್ ಮಾಡಿ “ಪೊಳಲಿ ಅನಂತು ಒಬ್ಬ ರೌಡಿ. ಆತನ ಶವಯಾತ್ರೆ ಮಾಡಬೇಡಿ” ಎಂದು ಸೂಚನೆ ನೀಡಿದರು. ಆದರೆ ಮಹೇಂದ್ರ ಕುಮಾರ್ ಅದನ್ನು ಧಿಕ್ಕರಿಸಿ ಶವಯಾತ್ರೆ ನಡೆಸಿದ್ದರು. ಭೂಗತಲೋಕದಿಂದ ಬಂದು ಹಿಂದುತ್ವವಾದಿಯಾಗಿ ಸತ್ತ ಪೊಳಲಿ ಅನಂತು ಕೊನೆಗೂ ಆರ್ ಎಸ್ ಎಸ್ ನ ಪ್ರಭಾಕರ ಭಟ್ಟರ ಬಾಯಲ್ಲಿ ರೌಡಿಯೆಂದೇ ಕರೆಸಿಕೊಂಡು ಸಾಯಬೇಕಾಯ್ತು.
ಇಷ್ಟು ಮಾತ್ರವಲ್ಲ, ಅರ್ ಎಸ್ ಎಸ್ / ಬಿಜೆಪಿಯ ತಾಳಕ್ಕೆ ಕುಣಿಯದ ಪ್ರಖರ ಹಿಂದುತ್ವವಾದಿಗಳನ್ನು ಖುದ್ದು ಆರ್ ಎಸ್ ಎಸ್ ‘ರೌಡಿ’ ಎಂದು ಕರೆಯುತ್ತದೆ.
ಬಜಿಲಕೇರಿ ಕಮಲಾಕ್ಷ ಎಂಬ ಹಿರಿಯ ಹಿಂದುತ್ವವಾದಿ ಮುಖಂಡ ತನ್ನ ಯೌವನದ ಕಾಲದಲ್ಲಿ ಸ್ಥಳೀಯ ಮುಸ್ಲೀಮರೊಂದಿಗೆ ಗಲಾಟೆ ಮಾಡಿಕೊಂಡಾಗ ಅವರು ಹಿಂದುತ್ವದ ಪ್ರಖರ ನಾಯಕರಾಗಿದ್ದರು. ಅವರು ಕಾರ್ಪೋರೇಷನ್ ಟಿಕೆಟ್ ಕೇಳಿದಾಗ ಅವರನ್ನೇ ಬಿಜೆಪಿಗರು ‘ಕ್ರಿಮಿನಲ್’ ಎಂದು ಕರೆದರು. ಹಿಂದೂ ಸಂಘಟನೆಯನ್ನು ತಳಮಟ್ಟದಲ್ಲಿ ಕಟ್ಟಿದವರು ಟಿಕೆಟ್ ಕೇಳಿದಾಕ್ಷಣ ಬಿಜೆಪಿ ಪಾಲಿಗೆ ರೌಡಿಯಾದರು.
ಕರಾವಳಿ ಅಂಡರ್ ವಲ್ಡ್ ನಲ್ಲಿ ಒಂದು ಕಾಲದ ಫೇಮಸ್ ಹೆಸರಾಗಿರುವ ಬರ್ಕೆ ಯದ್ದು ಅವರು ಸ್ಥಳೀಯ ಕುದ್ರೋಳಿ ಮುಸ್ಲೀಮರ ಜೊತೆ ಗಲಾಟೆ ಮಾಡಿದಾಗ ಅವರು ಹಿಂದುತ್ವದ ಹೀರೋ ಆಗಿದ್ದರು. ಆ ಬಳಿಕ ಅವರು ಸೌಹಾರ್ಧ ಸಮಾಜದ ಭಾಗವಾಗಬೇಕು ಎಂದು ಪರಿವರ್ತನೆಯಾದಾಗ ಅವರನ್ನು ಬಿಜೆಪಿ ಮತ್ತು ಹಿಂದುತ್ವ ನಾಯಕರು ಕ್ರಿಮಿನಲ್ ಅನ್ನಲಾರಂಭಿಸಿದರು.
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನೀಲ್ ಕುಮಾರ್ ಗೆಲುವು ಸಾಧಿಸಿದ್ದರು.
ಫಲಿತಾಂಶದ ನಂತರ 2023ರ ಮೇ 14ರಂದು ಕಾರ್ಕಳ ಬಂಡಿಮಠ ಬಸ್ ನಿಲ್ದಾಣದ ಬಳಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಸುನೀಲ್ ಕುಮಾರ್ ಮಾತನಾಡಿದ್ದರು. ಈ ವೇಳೆ ಅವರು, ‘ಪ್ರಮೋದ್ ಮುತಾಲಿಕರೇ, ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್ ಗ್ಯಾಂಗಿನ ನೆಪದಲ್ಲಿ ನೀವು ಎಷ್ಟು ಬಾರಿ ಮಾಡಿಸಿದ್ದೀರ? ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಕಲಬುರಗಿ ಜೈಲಿನಲ್ಲಿ ಇದ್ದಾರೆ” ಎಂದು ಆರೋಪಿಸಿದ್ದರು. ಈ ಆರೋಪದ ಬಗ್ಗೆ ಪ್ರಮೋದ್ ಮುತಾಲಿಕರು ಸುನೀಲ್ ಕುಮಾರ್ ವಿರುದ್ದ ಪ್ರಕರಣವನ್ನೂ ದಾಖಲಿಸಿದ್ದಾರೆ.
ಸುನೀಲ್ ಕುಮಾರ್ ಪ್ರಕಾರ ಪ್ರಮೋದ್ ಮುತಾಲಿಕ್ ಅವರು ಹತ್ತಾರು ಹಿಂದೂಗಳನ್ನೆ ಹತ್ಯೆ ಮಾಡಿದ ಟೈಗರ್ ಗ್ಯಾಂಗಿನ ರೌಡಿ. ಪ್ರಮೋದ್ ಮುತಾಲಿಕ್ ಪ್ರಕಾರ, ಬಿಜೆಪಿಗರು ಹಿಂದುತ್ವವಾದಿಗಳನ್ನೇ ರೌಡಿಗಳೆನ್ನುವ ಅಪಾಯಕಾರಿಗಳು !
ಶ್ರೀರಾಮ ಸೇನೆಯ ನಾಯಕರಾಗಿದ್ದ ಪ್ರಸಾದ್ ಅತ್ತಾವರ ಅವರು ಹಿಂದೊಮ್ಮೆ ಸಂದರ್ಶನ ನೀಡುತ್ತಾ “ಬಿಜೆಪಿ ಸರ್ಕಾರವು 2008 ರಲ್ಲಿ ನನ್ನನ್ನು ಮತ್ತು ಅರುಣ್ ಕುಮಾರ್ ಪುತ್ತಿಲರನ್ನು ಎನ್ ಕೌಂಟರ್ ಮಾಡಲು ನಿರ್ಧರಿಸಿತ್ತು. ಆಗ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿಯವರು ನಮ್ಮನ್ನು ರಕ್ಷಿಸಿದರು. ನಾವಿಬ್ಬರು ಹಲವು ಸಮಯ ಭೂಗತರಾಗಿದ್ದೆವು” ಎಂದಿದ್ದರು. ಈ ಮಾತು ಏನನ್ನು ಸೂಚಿಸುತ್ತದೆ ?
2023 ರಲ್ಲಿ ಹಿಂದುತ್ವರ ಪ್ರಖರ ನಾಯಕ ಅರುಣ್ ಕುಮಾರ್ ಪುತ್ತಿಲರವರು ಪುತ್ತೂರಿನಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ದಿಸಿದಾಗ ಕಲ್ಲಡ್ಕ ಪ್ರಭಾಕರ ಭಟ್ಟರು ಮಾತನಾಡುತ್ತಾ “ಅರುಣ್ ಕುಮಾರ್ ಪುತ್ತಿಲ ಒಬ್ಬ ರೌಡಿ. ಆತನ ಹಿಂದೆ ಹೋಗಬೇಡಿ” ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಕರಾವಳಿಯ ಉನ್ಮತ್ತ ಹಿಂದುತ್ವವಾದಿ ಯುವಕರ ಕಣ್ಮಣಿ ಪುತ್ತಿಲ ಅವರು ಅರ್ ಎಸ್ ಎಸ್ ಪಾಲಿಗೆ ರೌಡಿಯಾಗಿದ್ದರು.
ಕರಾವಳಿಯ ಆರ್ ಎಸ್ ಎಸ್ ನ ಹಿಂದುತ್ವವಾದಿಗಳು ಯಾರೂ ಕೂಡಾ ಚೂರಿ, ತಲವಾರು ಹಿಡಿದುಕೊಂಡು ಬೀದಿಗೆ ಇಳಿಯಲ್ಲ. ಕೊಲೆ ಮಾಡಿ ಜೈಲು ಸೇರುವುದಾಗಲೀ, ಕೊಲೆ ಮಾಡಿ ಕೊಲೆಯಾಗುವುದಾಗಲೀ ಮಂಗಳೂರು ಆರ್ ಎಸ್ ಎಸ್ ನ ಮೇಲ್ವರ್ಗದ ನಾಯಕರ ಇತಿಹಾಸದಲ್ಲೇ ಇಲ್ಲ. ಹಾಗಾಗಿ ಹಿಂದುತ್ವ ಸಂಘಟನೆಗಳು ಕೊಲೆ ಮಾಡಲು ಮತ್ತು ಕೊಲೆ ಆಗಲು ಭೂಗತ ಲೋಕದ ಕ್ರಿಮಿನಲ್ ಗಳನ್ನು ಬಳಸಿಕೊಳ್ಳುತ್ತದೆ.
ಯಾರನ್ನೂ ಕೊಲ್ಲದ ಫಾಸಿಲ್- ದೀಪಕ್ ರಾವ್ ನಂತಹ ಅಮಾಯಕರು ಎರಡೂ ಕಡೆ ಕೊಲ್ಲಲ್ಪಟ್ಟಿದ್ದಾರೆ. ಯಾರನ್ನೂ ಕೊಲ್ಲದೆ ಸತ್ತ ಇವರುಗಳು ಕೋಮುವಾದದ ನಿಜವಾದ ಸಂತ್ರಸ್ತರು. ಆದರೆ, ಕೋಮುವಾದಕ್ಕಾಗಿ ಕೊಂದು ಸತ್ತವರೆಲ್ಲರೂ ಭೂಗತ ಲೋಕದ ಕ್ರಿಮಿನಲ್ ಗಳೇ ಹೊರತು ಹಿಂದುತ್ವವಾದಿಗಳಲ್ಲ.
