ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಧರ್ಮೀಯರ ಕಿಡ್ನಿ ರೋಗಿಗಳ ಶುಶ್ರೂಷೆಯಲ್ಲಿ ಮುಂಚೂಣಿಯಲ್ಲಿರುವ ಟೀಮ್ B ಹ್ಯೂಮನ್ ಟ್ರಸ್ಟ್ ಗೆ ಉದ್ಯಮಿ ಬಿ.ಎಂ. ಶರೀಫ್ ಸಾರಥ್ಯ

ಕರಾವಳಿ

ಹಲವಾರು ಸಮಾಜಮುಖಿ ಸೇವೆಗಳ ಮೂಲಕ ಸಮಾಜದ ಎಲ್ಲಾ ಧರ್ಮೀಯರ ಸೇವೆ ಮಾಡುತ್ತಿರುವ ಪ್ರತಿಷ್ಠಿತ ಸೇವಾ ಸಂಸ್ಥೆ ಟೀಮ್ ಬೀ ಹ್ಯೂಮನ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ B.M ಶರೀಫ್ ಅಧಿಕಾರ ಸ್ವೀಕರಿಸಿದರು. ಈ ಮೊದಲು ಟ್ರಸ್ಟ್ ನ ಸ್ಥಾಪಕರಾದ ಆಸಿಫ್ ಡೀಲ್ಸ್ ರವರ ನೇತೃತ್ವದಲ್ಲಿ ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿ ಯೋಜನೆಗಳೊಂದಿಗೆ ನಡೆಯುತ್ತಿದ್ದ ಟ್ರಸ್ಟ್ ನ ಕಾರ್ಯಕ್ರಮಗಳು ಇನ್ನು ಮುಂದೆ ಸಾಮಾಜಿಕ ಕಾಳಜಿಯ ಉದ್ಯಮಿ ಶರೀಫ್ ಹಾಜಿಯವರ ಮುಂದಾಳುತ್ವದಲ್ಲಿ ಇನ್ನೂ ಪರಿಣಾಮಕಾರಿಯಾಗಿ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು, ಮುಸ್ಲಿಮ್, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮದ 1874 ಕಿಡ್ನಿ ರೋಗಿಗಳಿಗೆ 20 ಸಾವಿರಕ್ಕಿಂತ ಹೆಚ್ಚು ಡಯಾಲಿಸಿಸ್ ಅನ್ನು ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ನಡೆಸಿರುವ ಟೀಮ್ B ಹ್ಯೂಮನ್ ಸಂಸ್ಥೆಯು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗುತ್ತಿರುವ ಕಿಡ್ನಿ ವೈಫಲ್ಯ ರೋಗದ ನಿರ್ಮೂಲನಕ್ಕೆ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ.

ವಯನಾಡ್ ಸಂತ್ರಸ್ತರು ಸೇರಿದಂತೆ ಕಳೆದ ಹಲವು ವರ್ಷಗಳಲ್ಲಾದ ಪ್ರಾಕೃತಿಕ ವಿಕೋಪಕ್ಕೆ ಒಳಪಟ್ಟ ಪ್ರದೇಶದ ನಾಗರಿಕರಿಗೆ B ಹ್ಯೂಮನ್ ತಂಡ ನೆರವಾಗುತ್ತಾ ಬಂದಿದೆ. ಕೋವಿಡ್ ಕಾಲದಲ್ಲಿ ಸಾವಿರಾರು ರೋಗಿಗಳಿಗೆ ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿ ಜಿಲ್ಲಾಡಳಿತದಿಂದ ಪ್ರಶಂಸೆಗೆ ಒಳಪಟ್ಟ ಸಂಸ್ಥೆಯು, ಈ ದಿನಗಳಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದ ವ್ಯವಸ್ಥೆಯನ್ನು ಮಾಡಿ ಜನರ ಪ್ರೀತಿಗೆ ಪಾತ್ರವಾಗಿತ್ತು.

ಟೀಮ್ B ಹ್ಯೂಮನ್ ಟ್ರಸ್ಟ್ ಜಿಲ್ಲೆಯ ಸೌಹಾರ್ದತೆ, ಸಹಕಾರ ಮತ್ತು ಸಹಬಾಳ್ವೆಯ ವಾತಾವರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ದುಡಿಯುತ್ತಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಇದರಲ್ಲಿ ಯಾವುದೇ ತಾರತಮ್ಯ ಇಲ್ಲ, ನಾವು ಎಲ್ಲರ ಸೇವೆಯನ್ನು ನಮ್ಮಿಂದಾದ ರೀತಿಯಲ್ಲಿ ಮಾಡುತ್ತೇವೆ ಎಂದು ನೂತನ ಅಧ್ಯಕ್ಷರಾದ ಜನಾಬ್ ಶರೀಫ್ ರವರು ಹೇಳಿದರು. ಈಗಾಗಲೇ ಇವರ ಪ್ರೋತ್ಸಾಹದಿಂದ ಪುತ್ತೂರು ಕಮ್ಯೂನಿಟಿ ಸೆಂಟರ್ ನಲ್ಲಿ ನೂರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ವರ್ಷ ಇನ್ನೂರು ಮಕ್ಕಳಿಗೆ ಪ್ರೋತ್ಸಾಹ ನೀಡುವ ಗುರಿ ಸಂಸ್ಥೆಗಿದೆ ಎಂದವರು ತಿಳಿಸಿದರು.

ನಾವು ಪರಸ್ಪರ ಸಹಯೋಗದಿಂದ ಸಮಾಜದ ಸಬಲೀಕರಣ ಕಾರ್ಯಕ್ರಮಗಳನ್ನು ಮಾಡುವ ದಾರುಣ್ಣೂರು ನಂತಹ ಸಂಸ್ಥೆ ಧಾರ್ಮಿಕ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಪ್ರಬುದ್ಧ ಆಲಿಮ್ ಗಳ ನಿರ್ಮಾಣದಲ್ಲಿ ತೊಡಗಿದೆ. ಅದೇ ರೀತಿ ಪ್ರತಿಯೊಂದು ಸಂಘ ಸಂಸ್ಥೆಗಳ ಪ್ರಯತ್ನಕ್ಕೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ. ‘ಟೀಮ್ ಬಿ ಹ್ಯೂಮನ್’ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಈ ಸಂಸ್ಥೆಯ ಮೂಲಕ ಎಲ್ಲಾ ಧರ್ಮೀಯರ ಸೇವೆ ಮಾಡಲು ನನಗೆ ಸಿಕ್ಕಿದ ಅವಕಾಶವನ್ನು ನಾನು ನಿಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು B.M. ಶರೀಫ್ ಹೇಳಿದರು.

✍️. ಸುನ್ನೀ ಟುಡೇ