ಸುಹಾಸ್ ಶೆಟ್ಟಿ ಪ್ರತೀಕಾರಕ್ಕೆ ನಡೆದ ರಹೀಂ ಮರ್ಡರ್ ಅಸಲಿ ಕಹಾನಿ.!
ಹತ್ಯೆಗೆ ಹತ್ಯೆ, ರಕ್ತಕ್ಕೆ ರಕ್ತ ಕೊನೆ ಇಲ್ಲವೇ..ಕರಾವಳಿಗೆ ಏನಾಗಿದೆ..? ಕೋಮು ಹತ್ಯೆಗೆ ಅಮಾಯಕರು ಬಲಿಯಾಗಬಾರದು ಎಂಬುದು ಜಿಲ್ಲೆಯ ಸರ್ವಧರ್ಮೀಯರ ಪ್ರಾರ್ಥನೆ ಆಗಿತ್ತು. ಆದರೆ ದುರಾದೃಷ್ಟವೋ ಏನೋ ಸುಹಾಸ್ ಶೆಟ್ಟಿ ಪ್ರತೀಕಾರದ ದಾಳಿಗೆ ಅಮಾಯಕ ರಹೀಂ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ದ್ವೇಷ ಭಾಷಣದ ಘರ್ಜನೆಗೆ ಕೊನೆಗೂ ಒಂದು ಹೆಣ ಬಿದ್ದಿದೆ. ಆದರೆ ಹತನಾದ ವ್ಯಕ್ತಿ ಸರ್ವಧರ್ಮೀಯರ ಸ್ನೇಹಿತ ಅನ್ನುವುದೇ ಆಘಾತಕಾರಿ. ರೌಡಿಗಳ ಹೊಡೆದಾಟದಲ್ಲಿ ಅಮಾಯಕರು ಏಕೆ ಬಲಿಯಾಗಬೇಕು.? ಕುಟುಂಬ ನಿರ್ವಹಿಸಲು ದುಡಿದು ತಿನ್ನುವ ಅಮಾಯಕರು ರಕ್ತದಾಹಿಗಳ ಕೋಮು ಚೆಲ್ಲಾಟಕ್ಕೆ ಬಲಿಯಾಗಬೇಕೇ.? ಒಂದಕ್ಕೆ ಮೂರು ಎಂದು ಪ್ರಚೋದನಕಾರಿ ಭಾಷಣ ಬಿಗಿದು ಬೆಚ್ಚಗೆ ಮಲಗಿದವರ ಕೈಗೆ ಕೋಳ ತೊಡಿಸಿ ಜೈಲು ದಾರಿಯನ್ನು ಪೊಲೀಸರು, ಆಡಳಿತಾರೂಢ ಸರಕಾರ ಕರುಣಿಸಿದ್ದರೆ ಇಂದು ಅಮಾಯಕ ಯುವಕನೊಬ್ಬನ ಹೆಣ ಬೀಳುತ್ತಿರಲಿಲ್ಲ. ಅಮಾಯಕ ರಹೀಂ ಹತ್ಯೆಯ ನೇರ ಹೊಣೆ ಹೊರಬೇಕಾದುದು ಸರ್ಕಾರ ಹಾಗೂ ಪೊಲೀಸ್ ಇಲಾಖೆ. ಅಮಾಯಕ ವ್ಯಕ್ತಿಯ ರಕ್ತ ಕುಡಿದು ಬಲಿದಾನ ಸಾರ್ಥಕವಾಗಬಹುದೇ.? ಇದೆಂತಹ ಧರ್ಮ ರಕ್ಷಣೆ.. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಕ್ಷಸ ಕೃತ್ಯವಲ್ಲವೇ.?

ಕೈಕಂಬ-ಪೊಳಲಿ-ಬಿ.ಸಿ.ರೋಡು ಮಧ್ಯಭಾಗದಲ್ಲಿ ಕಾಣಸಿಗುವ ಊರೇ ಕೊಳತ್ತಮಜಲು. ಅಂದು ಎಂದಿನಂತೆ ಬೆಳಿಗ್ಗೆ ಏಳು ಗಂಟೆಗೆ ಮನೆಯಿಂದ ಹೊರಟಿದ್ದ ರಹೀಂ ಮಧ್ಯಾಹ್ನ ಬಿ.ಸಿ.ರೋಡಿಗೆ ಹೋಗಿ ಮರಳಿ ಬರುತ್ತಿದ್ದ ಸಂದರ್ಭ ಆತನಿಗೆ ಮರಳಿನ ಆರ್ಡರ್ ಒಂದು ಬಂದಿತ್ತು. ತನ್ನ ಜೊತೆಗಾರ ಖಲಂದರ್ ಶಾಫಿ ಜೊತೆಗೆ ತನ್ನ ಪಿಕಪ್ ವಾಹನದಲ್ಲಿ ಮರಳು ತುಂಬಿಸಿ ಆಸುಪಾಸಿನ ಕಾಂಬೋಡಿ ಇರಾ ಅನ್ನುವ ಪ್ರದೇಶಕ್ಕೆ ಮರಳು ತಂದು ಆನ್ ಲೋಡ್ ಮಾಡಿದ್ದ. ಅದು ಮಧ್ಯಾಹ್ನ 3.30 ರ ಸಮಯ. ಆಗ ಅಲ್ಲಿಗೆ ಬಂದ 7-8 ಮಂದಿ ದುಷ್ಕರ್ಮಿಗಳ ತಂಡ ಯದ್ವಾ ತದ್ವಾ ತಲವಾರು ಬೀಸಿತ್ತು. ತಲವಾರು ಬೀಸಿದ ರಭಸಕ್ಕೆ ರಹೀಂ ನ ತಲೆಭಾಗ ಸೀಳಿ ಹೋಗಿತ್ತು. ಸ್ಪಾಟಲ್ಲೇ ರಹೀಂ ದೆಡ್ ಆಗಿದ್ದ. ರಹೀಂ ನ ಜೊತೆಗಿದ್ದ ಖಲಂದರ್ ಶಾಫಿ ಮೇಲೂ ದುರ್ಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಶಾಫಿ ಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ರಹೀಂ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಹತ್ಯೆಗೀಡಾದ ರಹೀಂ ಆಗಲಿ, ಗಾಯಗೊಂಡ ಖಲಂದರ್ ಶಾಫಿ ಆಗಲೀ ಯಾರೊಂದಿಗೂ ವೈಯಕ್ತಿಕ ದ್ವೇಷ ಹೊಂದಿದವರಲ್ಲ. ಸರ್ವಧರ್ಮೀಯರೊಂದಿಗೂ ಒಳ್ಳೆಯ ಒಡನಾಟ ಹೊಂದಿದವರಾಗಿದ್ದರು. ರಹೀಂ ಕೊಳತ್ತಮಜಲಿನ ಮಸೀದಿಯ ಪ್ರಧಾನ ಕಾರ್ಯದರ್ಶಿ ಆಗಿದ್ದವ. ಕಾಂಬೋಡಿ ಅಂತಹ ನಿರ್ಜನ, ಜನ ಓಡಾಡದಂತಹ ಪ್ರದೇಶಕ್ಕೆ ಮರಳು ಆರ್ಡರ್ ಮಾಡಿರುವ ಹಿಂದೆ ಕೂಡ ಗುಮಾನಿ ಇದ್ದು, ಕರೆದು ಕೊಲ್ಲಿಸುವ ಸ್ಕೆಚ್ ಈ ಮೊದಲೇ ಹಾಕಿದ್ದರಾ ಅನ್ನುವ ಅನುಮಾನ ಮೂಡಿದೆ. ಮೇ 1 ರಂದು ಬಜಪೆಯಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಗೆ ಪ್ರತೀಕಾರವಾಗಿ ಮುಸ್ಲಿಂ ಹೆಸರಿನ ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿತವಾಗಿದೆ ಅನ್ನುವ ಗುಸು ಗುಸು ಹರಡಿತ್ತು. ಇದರ ಭಾಗವಾಗಿಯೇ ಅಮಾಯಕ ರಹೀಂ ಮುಸ್ಲಿಂ ಅನ್ನುವ ಕಾರಣಕ್ಕೆ ಕೊಲೆಯಾದ ಅನ್ನುವ ಸುದ್ದಿ ಈಗ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಸುಹಾಸ್ ಶೆಟ್ಟಿ ಹತ್ಯೆಯ ನಂತರ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಧರ್ಮ ದಂಗಲ್ ರೀತಿ ಬದಲಾಗಿ ಹೋಗಿತ್ತು. ಕನಿಷ್ಠ ಏಳೆಂಟು ಮುಸ್ಲಿಂ ಯುವಕರಿಗೆ ಚೂರಿ ಇರಿತದ ಪ್ರಕರಣಗಳು ನಡೆದವು. ಸುಹಾಸ್ ಶೆಟ್ಟಿ ಪ್ರತೀಕಾರ ನಿಮ್ಮದೇ ಭಾಷೆಯಲ್ಲಿ ನೀಡುತ್ತೇವೆ ಎಂದು ಬಹಿರಂಗವಾಗಿಯೇ ಹತ್ತಾರು ಕೋಮು ಪ್ರಚೋದನಕಾರಿ ಭಾಷಣಗಳು ನಡೆದಾಗಲೂ ಇಲ್ಲಿನ ಪೊಲೀಸ್ ಇಲಾಖೆ, ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಕೈ ಕಟ್ಟಿ ಕುಳಿತ ಪರಿಣಾಮ ಇದೀಗ ಅಮಾಯಕನೊಬ್ಬ ಹತ್ಯೆಯಾಗಿದೆ. ಕರಾವಳಿಯಲ್ಲಿ ಕೋಮು ದ್ವೇಷ ಎಷ್ಟರಮಟ್ಟಿಗೆ ಹಾಸು ಹೊಕ್ಕಾಗಿದೆ ಅನ್ನುವುದಕ್ಕೆ ರಹೀಂ ಹತ್ಯೆ ಪ್ರತ್ಯಕ್ಷ ಸಾಕ್ಷಿ.

ಅಬ್ದುಲ್ ರಹೀಂ ಕೊಳತ್ತಮಜಲಿನವ .ಈ ಊರಿನ ಅಕ್ಕಪಕ್ಕದಲ್ಲೇ ಬಡಗ ಬೆಳ್ಳೂರು, ಧನುಪೂಜೆ ಹೀಗೆ ಊರುಗಳಿವೆ. ಗುಡ್ಡಗಾಡು, ತೀರಾ ನಿರ್ಜನ ಪ್ರದೇಶಗಳಿವು. ಆದರೆ ಕೋಮು ಕ್ರೈಂ ಗೆ ಸಂಬಂಧಿಸಿದಂತೆ ಇಲ್ಲಿಗೆ ಕರಾಳ ಇತಿಹಾಸವಿದೆ. ನಿಮಗೆ ನೆನಪಿರಬಹುದು. 2008 ರಲ್ಲಿ ಬಂಟ್ವಾಳದ ರಿಕ್ಷಾ ಡ್ರೈವರ್ ಇಕ್ಬಾಲ್ ಬರ್ಬರ ಹತ್ಯೆ ನಡೆದಿತ್ತು. ಬಾಡಿಗೆಗೆಂದು ಆತನನ್ನು ಕರೆಸಿ ಪಚ್ಚಿನಡ್ಕದ ರಬ್ಬರ್ ತೋಟ ನಿರ್ಜನ ಪ್ರದೇಶಕ್ಕೆ ಕರೆದು ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾಗಿಯಾದವರು ಇದೇ ಧನುಪೂಜೆ ಸುತ್ತಮುತ್ತ ಆವಿತುಕೊಂಡಿದ್ದರು. ಹಂತಕರ ನೆರವಿಗೆ ಇಲ್ಲಿನ ಕೆಲವರು ಸಾಥ್ ನೀಡಿದ್ದರು. ಇಲ್ಲಿಂದಲೇ ಆರಂಭವಾಗಿತ್ತು ಕೋಮು ಕ್ರೈಂ ಇತಿಹಾಸ. ಇಲ್ಲಿನ ಕೆಲ ಯುವಕರಿಗೆ ಮತಾಂಧ ತರಬೇತಿ ನೀಡಿ, ಅವರಿಗೆ ಕೋಮು ವಿಷವ ತುಂಬಿಸಿ, ಅವರನ್ನು ಕ್ರಿಮಿನಲ್ ಕೃತ್ಯಕ್ಕೆ ಪ್ರೇರೇಪಿಸುವ ಕೆಲಸಗಳು ನಡೆಯುತ್ತಿದೆ ಅನ್ನುವ ದೂರುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಇಲ್ಲಿನ ಯುವಕರ ಹೆಸರಲ್ಲಿ ಕಾರ್ಯಚರಿಸುವ ಸಂಘ ವೊಂದು ಇಂತಹ ಕ್ರಿಮಿನಲ್ ಕೃತ್ಯಕ್ಕೆ ಯುವಕರನ್ನು ಬಳಸುತ್ತಿದ್ದಾರೆ ಅನ್ನುವ ಆರೋಪ ಇದೆ. ಇತ್ತೀಚೆಗೆ ಪೊಳಲಿ ದೇವಸ್ಥಾನದ ಜಾತ್ರೆಯಲ್ಲಿ ಸೌಹಾರ್ದದಿಂದ ಎರಡು ಪಂಗಡದವರು ವ್ಯಾಪಾರ ವಹಿವಾಟು ಮಾಡುತ್ತಿದ್ದರೆ ಈ ಭಾಗದ ಇಬ್ಬರು ಸಹೋದರರು ಈ ಬಗ್ಗೆ ಪೊಳಲಿ ದೇವಸ್ಥಾನ ಕಮಿಟಿಗೆ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಲು ಬಿಡಬಾರದು ಅನ್ನುವ ದೂರು ನೀಡಿದ್ದರು. ಈ ಭಾಗದ ಯುವಕರೇ ಇದರ ಮುಂಚೂಣಿಯಲ್ಲಿದ್ದರು. ಇವರೆಲ್ಲರಿಗೆ ಸಾಥ್ ನೀಡುತ್ತಿರುವುದು ಈ ಇಬ್ಬರು ಸಹೋದರರಂತೆ. ಇದೀಗ ರಹೀಂ ಹತ್ಯೆಯ ಹಿಂದೆ ಸುಮಾರು ಹದಿನೈದಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ದೀಪಕ್, ಸುಮಿತ್ ಎಂಬ ಎರಡು ಹೆಸರುಗಳು ರಿವೀಲ್ ಆಗಿದೆ. ಅ ಪರಿಸರದ ಸುತ್ತಮುತ್ತಲಿನ ಕ್ರಿಮಿನಲ್ ತಂಡದ ಕೈವಾಡ ಇದೀಗ ರಹೀಂ ಹತ್ಯೆಯಲ್ಲೂ ಕೇಳಿ ಬರುತ್ತಿದೆ.

ಹತ್ತು ವರ್ಷಗಳ ಹಿಂದೆ ಮಂಗಳೂರು ಜೈಲಿನಲ್ಲಿ ಮಾಡೂರು ಯೂಸುಫ್, ಗಣೇಶ್ ಶೆಟ್ಟಿ ಎಂಬವರ ಡಬ್ಬಲ್ ಮರ್ಡರ್ ನಡೆದಿತ್ತು. ಮುಸ್ಲಿಂ ಡಾನ್ ಆಗಿ ಗುರುತಿಸಿಕೊಂಡ ಮಾಡೂರು ಯೂಸುಫ್ ಕೊಲೆಗೆ ಆಯುಧ ತಯಾರಾಗಿದ್ದೇ ಇದೇ ಬಡಗ ಬೆಳ್ಳೂರು ಪರಿಸರದಲ್ಲಿ. ಇಲ್ಲಿನ ರಾಜಕಾರಣಿಯೊಬ್ಬನ ಹೆಸರು ಯೂಸುಫ್ ಕೊಲೆಯಲ್ಲಿ ಕೇಳಿ ಬಂದು ಜೈಲಿಗೂ ಹೋಗಿ ಬಂದಿದ್ದನು. ಇನ್ನು ಅ ಪರಿಸರದ ಸುತ್ತಮುತ್ತ ಕೋಮು ಕ್ರಿಮಿನಲ್ ಹಿನ್ನೆಲೆಯ ಹುಡುಗರದ್ದೇ ಕಾರುಬಾರು. ಕುಖ್ಯಾತ ಕ್ರಿಮಿನಲ್ ಗಳಾದ ಆಕಾಶ ಭವನ, ಕುಮ್ದೇಲ್ ಸಹಚರರ ಅಡ್ಡೆಯಾಗಿದೆ ಅನ್ನುವುದು ಇಲ್ಲಿ ಕೇಳಿಬರುತ್ತಿರುವ ಸುದ್ದಿ. ಸಣ್ಣ ಸಣ್ಣ ಯುವಕರನ್ನು ಮತೀಯ ಕೃತ್ಯಕ್ಕೆ ಬಳಸಿಕೊಂಡು ಅವರನ್ನು ಕ್ರೈಂ ಫ್ಯಾಕ್ಟರಿಯ ಹುಡುಗರನ್ನಾಗಿ ರೂಪಿಸಲಾಗುತ್ತಿದೆಯಂತೆ. ಇದಕ್ಕೆ ಕೆಲವು ಮತಾಂಧ ಶಕ್ತಿಗಳು ಇವರ ಬೆನ್ನಿಗೆ ನಿಂತಿದೆ ಅನ್ನುವ ಮಾತುಗಳು ಇವೆ. ಇಂತಹ ಮತಾಂಧ ಶಕ್ತಿಗಳ ಕುಕೃತ್ಯಕ್ಕೆ ದುಡಿದು ತಿನ್ನುವ ಅಮಾಯಕನೊಬ್ಬನ ಬಲಿಯಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದರೆ ಸಾಲದು. ಕ್ರೈಂ ಫೀಲ್ಡಿಗೆ ಎಂಟ್ರಿಯಾಗಿ ಕೋಮು ಕೃತ್ಯದಲ್ಲಿ ಭಾಗವಹಿಸುವ ಅಡ್ಡೆಗಳನ್ನು ಮಟ್ಟ ಹಾಕಬೇಕಿದೆ. ಇಲ್ಲವಾದರೆ ಇನ್ನಷ್ಟು ಅಮಾಯಕರು ಬಲಿಯಾಗಬಹುದು.
