ಅಶ್ರಫ್ ಕಲಾಯಿ ಮಾದರಿಯಲ್ಲೇ ರಹಿಮಾನ್ ಕೊಳತ್ತಮಜಲು ಹತ್ಯೆ: ಪಕ್ಕಾ ಕ್ರಿಮಿನಲ್ ಸಹಚರರ ಕೈವಾಡ ಶಂಕೆ

ಕರಾವಳಿ

ಬಂಟ್ವಾಳ ತಾಲೂಕಿನ ಕೊಳತ್ತಮಜಲು ಕಾಂಬೋಡಿ ಇರಾ ಎಂಬಲ್ಲಿ ಮೇ 27 ರಂದು ನಡೆದ ಅಮಾಯಕ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೂ ಈ ಹಿಂದೆ ನಡೆದ ಅಶ್ರಫ್ ಕಲಾಯಿ ಹತ್ಯೆ ಪ್ರಕರಣಕ್ಕೂ ಸಾಮ್ಯತೆ ಕಂಡುಬರುತ್ತಿದೆ. ಅಮಾಯಕ ಅಬ್ದುಲ್ ರಹಿಮಾನ್ ನನ್ನು ಪೂರ್ವನಿಯೋಜಿತವಾಗಿ ಮರಳು ಆರ್ಡರ್ ಮಾಡಿ ಕರೆಸಿಕೊಂಡಿರುವುದು ಇದೀಗ ದೃಢಪಟ್ಟಿದೆ. ದೀಪಕ್ ಎಂಬಾತನ ಮನೆಗೆ ಮರಳು ತಂದು ಆನ್ ಲೋಡ್ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಹಂತಕರು ರಹಿಮಾನ್ ಕುತ್ತಿಗೆಯ ಹಿಂಭಾಗಕ್ಕೆ ಮಚ್ಚಿನಿಂದ ಕಡಿದು ಭೀಕರವಾಗಿ ಕೊಂದಿದ್ದರು.

ಜೂನ್ 21, 2017 ರಂದು ಅಶ್ರಫ್ ಕಲಾಯಿಯನ್ನು ಕೂಡ ಇದೇ ರೀತಿ ಕುತ್ತಿಗೆಯ ಹಿಂಭಾಗಕ್ಕೆ ಕಡಿದು ಕೊಲ್ಲಲಾಗಿತ್ತು. ಅಶ್ರಫ್ ಕಲಾಯಿ ರಿಕ್ಷಾ ಡ್ರೈವರ್. ಸ್ಥಳೀಯವಾಗಿ ಎಸ್ ಡಿ ಪಿ ಐ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಸಮಾಜ ಸೇವೆ ಮಾಡುತ್ತಿದ್ದ ಯುವಕನಾಗಿದ್ದ. ಸ್ಥಳೀಯ ಅಂಗವಿಕಲರಾಗಿರುವ ಸುಂದರ ಪೂಜಾರಿ ಎಂಬವರು ಅಶ್ರಫ್ ರಿಕ್ಷಾದಲ್ಲೇ ಪರ್ಮನೆಂಟಾಗಿ ಬೀಡಿ ಬ್ರಾಂಚಿಗೆ ಹೋಗುತ್ತಿದ್ದರು. ಅಂದು ಕೂಡ ಎಂದಿನಂತೆ ಬೆಂಜನಪದವಿನ ಕರಾವಳಿ ಸೈಟ್ ನಲ್ಲಿರುವ ಬೀಡಿ ಬ್ರಾಂಚ್ ಗೆ ಅಶ್ರಫ್ ರಿಕ್ಷಾದಲ್ಲೇ ತೆರಳಿದ್ದರು. ಈ ಕರಾವಳಿ ಸೈಟ್ ಹಿಂದೂ ಬೆಲ್ಟ್ ಏರಿಯಾ. ಅಶ್ರಫ್ ಕೂಡ ಹಿಂದೂಗಳೊಂದಿಗೆ ಅನ್ಯೋನ್ಯತೆ ಯಲ್ಲಿ ಇದ್ದವ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ರಿಕ್ಷಾದಲ್ಲಿ ಕೂತಿದ್ದ ಅಶ್ರಫ್ ಎಂಬಾತನ ಮೇಲೆ ಭರತ್ ಕುಮ್ದೇಲ್ ಮತ್ತಾತನ ಸಹಚರರು ದಾಳಿ ನಡೆಸಿ ಆತನ ಕುತ್ತಿಗೆಯ ಹಿಂಭಾಗಕ್ಕೆ ಕಡಿದು ಭೀಕರವಾಗಿ ಹತ್ಯೆ ಮಾಡಿದ್ದರು. ಅಶ್ರಫ್ ಕಲಾಯಿ ಹತ್ಯೆಯಲ್ಲಿ ಭರತ್ ಕುಮ್ದೇಲ್ ಸೇರಿದಂತೆ ಆತನ ಸಹಚರರಾದ ದಿವ್ಯರಾಜ್ ಶೆಟ್ಟಿ, ಪವನ್ ಕುಮಾರ್, ರಂಜಿತ್, ಅಭಿ, ಸಂತು, ಶಿವಪ್ರಸಾದ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.

ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಸೂತ್ರಧಾರಿ ಭರತ್ ಕುಮ್ದೇಲ್ ಆಗಿದ್ದ. ಈತ ಈ ಹಿಂದೆ ಮಸೀದಿಯೊಂದಕ್ಕೆ ಹಂದಿ ಮಾಂಸ ಎಸೆದ ಪ್ರಕರಣದ ಆರೋಪಿಯಾಗಿದ್ದ. ಎಡಪಂಥೀಯ ಚಿಂತನೆಯ ಪ್ರಾಧ್ಯಾಪಕರಾಗಿದ್ದ ಪಟ್ಟಾಭಿರಾಮ ಸೋಮಯಾಜಿ ಮೇಲೆ ವುಡ್ ಲ್ಯಾಂಡ್ ಹೋಟೆಲಿನಲ್ಲಿ ಸೆಗಣಿ ಎರಚಿದ ಪ್ರಕರಣದ ಆರೋಪಿಯಾಗಿದ್ದ. ಬಜರಂಗದಳ, ಜಾಗರಣ ವೇದಿಕೆಯಲ್ಲಿ ಕೂಡ ಗುರುತಿಸಿಕೊಂಡಿದ್ದ.

ಬಂಟ್ವಾಳದ ಕಲ್ಪನೆ ಎಂಬಲ್ಲಿ ರಿಕ್ಷಾ ಡ್ರೈವರ್ ರಾಜೇಶ್ ಪೂಜಾರಿ ಹತ್ಯೆಯ ತರುವಾಯ ಅಶ್ರಫ್ ಕಲಾಯಿ ಹತ್ಯೆ ನಡೆದಿತ್ತು. ಅಶ್ರಫ್ ಕಲಾಯಿ ಹತ್ಯೆಯ ಕೆಲವೇ ದಿನಗಳಲ್ಲಿ ಪ್ರತೀಕಾರವಾಗಿ ಬಿಸಿ ರೋಡಿನಲ್ಲಿ ಆರ್ ಎಸ್ ಎಸ್ ಪ್ರಚಾರಕ ಶರತ್ ಮಡಿವಾಳನ ಹತ್ಯೆ ಕೂಡ ನಡೆದಿತ್ತು.

ಕೊಳತ್ತಮಜಲಿನ ರಹಿಮಾನ್ ಹತ್ಯೆ ಕೂಡ ಅಶ್ರಫ್ ಕಲಾಯಿ ಹತ್ಯೆಯ ಮಾದರಿಯಲ್ಲೇ ನಡೆದಿದ್ದು, ಕೆಲವೊಂದು ಪಕ್ಕಾ ಕ್ರಿಮಿನಲ್ ಗಳ ಕೈವಾಡ ಇರುವ ಶಂಕೆ ಇದೀಗ ಮೂಡಿದೆ.